ಮಂಗಳೂರು, ಡಿ.24: ದಡಾರ- ರುಬೆಲ್ಲಾ ತಡೆ ಅಭಿಯಾನದ ಕುರಿತು ಜಿಲ್ಲಾ ಟಾಸ್ಕೆರ್ಸ್ ಸಭೆಯು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ್ ಅಧ್ಯಕ್ಷತೆಯಲ್ಲಿ ನಡೆಯಿತು.
ಜಿಲ್ಲಾ ಸರ್ವೇಕ್ಷಣಾ ವೈದ್ಯಕೀಯ ಅಧಿಕಾರಿ ಡಾ.ಸತೀಶ್ಚಂದ್ರ ಮಾತನಾಡಿ, ದಡಾರ ಮತ್ತು ರುಬೆಲ್ಲಾ ವಿಶ್ವದಲ್ಲಿ ಅದರಲ್ಲೂ ಭಾರತದಲ್ಲಿ ತೀವ್ರಗತಿಯಲ್ಲಿ ಹರಡುತ್ತಿರುವ ಮಾರಣಾಂತಿಕ ಕಾಯಿಲೆಗಳಾಗಿವೆ. ಮಕ್ಕಳಲ್ಲಿ ಜ್ವರ, ತುರಿಕೆ, ನೆಗಡಿ, ಕಣ್ಣು ಕೆಂಪಾಗುವುದು ದಡಾರದ ಪ್ರಮುಖ ಲಕ್ಷಣವಾಗಿದೆ. ಹೆಚ್ಚಾಗಿ ಎರಡು ವರ್ಷದೊಳಗಿನ ಮಕ್ಕಳಲ್ಲಿ ಮತ್ತು ದೊಡ್ಡವರಲ್ಲೂ ವೈರಾಣು ಪತ್ತೆಯಾಗುತ್ತಿದೆ ಎಂದರು.
ರುಬೆಲ್ಲಾ ಕಾಯಿಲೆಯು ದಡಾರವನ್ನು ಹೋಲುತ್ತದೆ. ಇದು ಬೇಗ ಹರಡುವುದಿಲ್ಲ. ಆದರೆ ನಿರ್ಲಕ್ಷಿಸಿದರೆ ಅಪಾಯವಿದೆ. ಮೆದುಳು ಜ್ವರ, ಕಿವುಡು, ಕುರುಡುತನ, ಬುದ್ದಿಮಾಂದ್ಯ, ರಕ್ತದ ಸಮಸ್ಯೆ ಇದರಿಂದ ಬರುತ್ತದೆ.
ಮಗುವಿಗೆ ವೈರಾಣು ತಗಲಿದ ಮನೆಯಲ್ಲಿ ಗರ್ಭಿಣಿ ಮಹಿಳೆ ಇದ್ದರೆ ಶೇ.90ರಷ್ಟು ರೋಗ ಹರಡುವ ಸಾಧ್ಯತೆ ಹೆಚ್ಚು ಎಂದ ಅವರು, ಭಾರತದಲ್ಲಿ ರುಬೆಲ್ಲಾಗೆ ಲಸಿಕೆ ಇಲ್ಲ. ಆದ್ದರಿಂದ ಗಂಭೀರವಾಗಿ ಪರಿಗಣಿಸಲಾಗಿದೆ. ಲಸಿಕೆ ನೀಡಿದ ರಾಷ್ಟ್ರಗಳಲ್ಲಿ ರುಬೆಲ್ಲಾ ನಿಯಂತ್ರಣಕ್ಕೆ ಬಂದಿದೆ. ಭಾರತದಲ್ಲೂ ನಿಯಂತ್ರಣ ಹಿನ್ನೆಲೆಯಲ್ಲಿ ಲಸಿಕಾ ಅಭಿಯಾನ ಕೈಗೊಳ್ಳಲಾಗುತ್ತಿದೆ ಎಂದರು.
ಮಗುವಿಗೆ ಖಾಸಗಿ ಆಸ್ಪತ್ರೆಯಲ್ಲಿ ಎಂಎಂಆರ್ ಅಥವಾ ಸರಕಾರಿ ಆಥವಾ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ಈ ಹಿಂದೆ ಲಸಿಕೆ ನೀಡಿದ್ದರೂ, ಇದೀಗ ಮತ್ತೆ ಹೆಚ್ಚುವರಿಯಾಗಿ ಲಸಿಕೆ ನೀಡಲೇಬೇಕಾಗುತ್ತದೆ. ೆಬ್ರವರಿಯಲ್ಲಿ ಅಭಿಯಾನ ನಡೆಸಿ, ಅದರ ಬಳಿಕವೂ ಸಾರ್ವತ್ರಿಕವಾಗಿ ಲಸಿಕಾ ಕಾರ್ಯಕ್ರಮ ಮುಂದುವರಿಯಲಿದೆ ಎಂದು ಡಾ.ಸತೀಶ್ಚಂದ್ರ ಹೇಳಿದರು.
ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್ ಮಾತನಾಡಿ, ಶೇ.100 ಲಸಿಕೆ ಗುರಿ ಇಟ್ಟುಕೊಂಡು ವ್ಯಾಪಕ ಪ್ರಚಾರ ಮಾಡಬೇಕು. ನಗರದ ಪ್ಲೇ ಹೋಮ್ಸ್, ಕಿಂಡರ್ ಗಾರ್ಡನ್, ಫ್ಲ್ಯಾಟ್ಗಳಿಗೆ ತೆರಳಿ ಮಾಹಿತಿ ನೀಡಬೇಕು. ಕಾರ್ಮಿಕರ ಮಕ್ಕಳನ್ನು ತಲುಪಲು ಬಿಲ್ಡರ್ಸ್, ಗುತ್ತಿಗೆದಾರರ ಸಭೆ ನಡೆಸಬೇಕು ಎಂದು ಸೂಚಿಸಿದರು.
ಅಭಿಯಾನದ ಯಶಸ್ವಿ ಕುರಿತು ವಿವಿಧ ಇಲಾಖೆಗಳ ಸಹಕಾರದ ಬಗ್ಗೆ ಜಿಲ್ಲಾ ಆರ್ಸಿಎಚ್ ಅಧೀಕಾರಿ ಡಾ.ಅಶೋಕ ಎಚ್. ಮಾಹಿತಿ ನೀಡಿದರು. ಜಿಲ್ಲಾ ಪ್ರಭಾರ ಆರೋಗ್ಯ ಅಧಿಕಾರಿ ಡಾ.ಸಿಕಂದರ್ ಪಾಷ ಸ್ವಾಗತಿಸಿ, ವಂದಿಸಿದರು