ಕರಾವಳಿ

ವರದಕ್ಷಿಣೆ ಕಿರುಕುಳ : ಪತ್ನಿಗೆ ಬೆಂಕಿ ಹಚ್ಚಿ ಕೊಲೆಗೈದ ಪತಿಗೆ ಜೀವಾವಧಿ ಶಿಕ್ಷೆ ಪ್ರಕಟ

Pinterest LinkedIn Tumblr

court

ಮಂಗಳೂರು, ಡಿಸೆಂಬರ್.24: ಮೂಡುಶೆಡ್ಡೆ ಕೆರಮಾ ರಸ್ತೆಯ ನಿಸರ್ಗಧಾಮ ಕ್ವಾರ್ಟರ್ಸ್‌ ನಲ್ಲಿ 5 ವರ್ಷಗಳ ಹಿಂದೆ ಪತ್ನಿಯ ಮೈಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆಗೈದ ಪ್ರಕರಣದ ಆರೋಪಿ ರಾಜ (44)ನ ಅಪರಾಧ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದಲ್ಲಿ ಸಾಬೀತಾಗಿರುವ ಹಿನ್ನೆಲೆಯಲ್ಲಿ ನಗರದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಪತ್ನಿಯನ್ನು ಕೊಲೆ ಮಾಡಿರುವುದಕ್ಕಾಗಿ ನ್ಯಾಯಾಲಯವು ಅಪರಾಧಿಗೆ ಜೀವಾವಧಿ ಶಿಕ್ಷೆ ಮತ್ತು 30,000 ರೂ. ದಂಡ ವಿಧಿಸಿದೆ. ವರದಕ್ಷಿಣೆ ಕಿರುಕುಳ ನೀಡಿರುವುದಕ್ಕಾಗಿ ಒಂದು ವರ್ಷ ಜೈಲು ಶಿಕ್ಷೆ ಮತ್ತು 20,000 ರೂ. ದಂಡ ವಿಧಿಸಿ ನ್ಯಾಯಾಲಯವೂ ತೀರ್ಪಿತ್ತಿದೆ. ದಂಡದ ಪೂರ್ಣ ಮೊತ್ತವನ್ನು ಮೃತ ಮಹಿಳೆಯ ಇಬ್ಬರು ಮಕ್ಕಳಿಗೆ ನೀಡಬೇಕು ಮತ್ತು ಸಂತ್ರಸ್ತರ ಪರಿಹಾರ ನಿಧಿಯಿಂದ ಅವರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದೆ.

ನಗರದಲ್ಲಿ ಚಪ್ಪಲಿ ರಿಪೇರಿ ಮತ್ತು ಮಾರಾಟ ಕೆಲಸ ಮಾಡುತ್ತಿದ್ದ ರಾಜನ ವಿವಾಹ 1994ರ ಫೆಬ್ರವರಿ 19ರಂದು ರಾಣಿ ಜತೆ ನಡೆದಿತ್ತು. ವಿವಾಹದ ಬಳಿಕ ಪತಿ ಪತ್ನಿ ಜತೆಯಾಗಿ ವಾಸಿಸುತ್ತಿದ್ದು ಮೂವರು ಮಕ್ಕಳು ಹುಟ್ಟಿದ್ದರು. ಏತನ್ಮಧ್ಯೆ ರಾಜ ತನ್ನ ಪತ್ನಿ ರಾಣಿಯ ಶೀಲ ಶಂಕಿಸಿ ಆಗಿಂದಾಗ್ಗೆ ಆಕೆಗೆ ಕಿರುಕುಳ ನೀಡುತ್ತಿದ್ದನು ಎಂದು ಆರೋಪಿಸಲಾಗಿತ್ತು. ಮನೆಯಲ್ಲಿ ನಡೆಯುತ್ತಿದ್ದ ಜಗಳದಿಂದ ಬೇಸತ್ತು 2010ರ ಜೂನ್‌ 20ರಂದು ಆತನ ಮನೆ ಪಕ್ಕದ ನಿವಾಸಿಗಳು ಕಾವೂರು ಪೊಲೀಸರಿಗೆ ದೂರು ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ಪೊಲೀಸರು ರಾಜನನ್ನು ಠಾಣೆಗೆ ಕರೆಸಿ ಆತನಿಂದ ಮುಚ್ಚಳಿಕೆ ಬರೆಸಿಕೊಂಡಿದ್ದರು.

ಆದರೆ ರಾಜ ತನ್ನ ಪತ್ನಿಗೆ ನೀಡುತ್ತಿದ್ದ ಕಿರುಕುಳ ನಿಂತಿರಲಿಲ್ಲ. ಶೀಲದ ಬಗ್ಗೆ ಶಂಕೆ ಮಾತ್ರವಲ್ಲ ಆಕೆ ಮಾಡುತ್ತಿದ್ದ ಅಡುಗೆ ಸರಿಯಿಲ್ಲ, ಅದಕ್ಕೆ ರುಚಿ ಇಲ್ಲ ಎಂದೆಲ್ಲಾ ಆರೋಪಿಸಿ ಕಿರುಕುಳ ನೀಡುತ್ತಿದ್ದನು. 2011 ಸೆಪ್ಟಂಬರ್‌ 1ರಂದು ಮನೆಯ ಒಳಗೆ ರಾಜ ತನ್ನ ಪತ್ನಿ ರಾಣಿಯ ಮೈಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದನು. ಆಕೆ ಮನೆಯಿಂದ ಓಡಿ ಹೊರಗೆ ಬಂದಾಗ ಊರಿನ ಜನರು ಒಟ್ಟು ಸೇರಿದ್ದರು. ಇದೆ ವೇಳೆ ರಾಜನೂ ಓಡಿ ಬಂದು ಪತ್ನಿಯ ದೇಹಕ್ಕೆ ನೀರು ಹಾಕಿ ತಗುಲಿದ್ದ ಬೆಂಕಿಯನ್ನು ನಂದಿಸಲು ಸಹಕರಿಸಿದ್ದನು. ಇದರಿಂದ ಆತನಿಗೂ ಕೆಲವು ಸುಟ್ಟ ಗಾಯಗಳಾಗಿದ್ದವು. ಬಳಿಕ ಊರಿನ ಜನರು ಸೇರಿ ಆಕೆಯನ್ನು ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಿದ್ದರು. ಆತನೂ (ರಾಜ) ದಾಖಲಾಗಿ ಚಿಕಿತ್ಸೆ ಪಡೆದಿದ್ದನು.

ತೀವ್ರ ಸುಟ್ಟ ಗಾಯಗಳಿಂದಾಗಿ ಅಂದು ರಾಣಿ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಸೆ. 4ರಂದು ಆಕೆಗೆ ಪ್ರಜ್ಞೆ ಬಂದಿದ್ದು, ಕಾವೂರು ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಕೆ. ಗೋಪಾಲ್‌ ಮತ್ತು ಸಿಬಂದಿ ಆಕೆಯ ಹೇಳಿಕೆಗಳನ್ನು ಪಡೆದುಕೊಂಡಿದ್ದರು. ಪತಿ ರಾಜ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾಗಿ ಆಕೆ ಆರೋಪಿಸಿದ್ದು, ಅದರಂತೆ ಪೊಲೀಸರು ಆತನ ವಿರುದ್ಧ ಕೇಸು ದಾಖಲಿಸಿದ್ದರು.

ಸೆ. 8ರಂದು ರಾಣಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಳು. ಆಗ ಪೊಲೀಸರು ರಾಜನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದರು. ಆಗ ಆಸ್ಪತ್ರೆಯಿಂದ ತಲೆಮರೆಸಿಕೊಂಡಿದ್ದ ಆತನನ್ನು ಸೆ. 19ರಂದು ಬಂಧಿಸಿದ್ದರು.

ಸಬ್‌ ಇನ್ಸ್‌ಪೆಕ್ಟರ್‌ ಕೆ. ಗೋಪಾಲ ತನಿಖೆ ನಡೆಸಿದ್ದು, ಪಣಂಬೂರು ಇನ್ಸ್‌ಪೆಕ್ಟರ್‌ ವೆಲೆಂ ಟೈನ್‌ ಡಿ’ಸೋಜಾ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಬಳಿಕ ಜಾಮೀನಿನ ಮೇಲೆ ಬಂಧನ ದಿಂದ ಹೊರಗೆ ಬಂದಿದ್ದ ರಾಜ ತನಗೆ ಶಿಕ್ಷೆ ಖಚಿತವಾಗುತ್ತಿದ್ದಂತೆ ಒಂದು ವರ್ಷ ದಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ನ್ಯಾಯಾಲಯ ವಾರಂಟ್‌ ಹೊರಡಿ ಸಿತ್ತು. 2016ರ ಸೆ. 30 ರಂದು ಆತನನ್ನು ಕಾವೂರು ಪೊಲೀಸರು ಬಂಧಿಸಿ ದ್ದರು. ಇದೀಗ ಡಿ. 20 ರಂದು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾ ಲಯದ ನ್ಯಾಯಾಧೀಶ ಸರ್ವೋ ದಯ ಶೆಟ್ಟಿಗಾರ್‌ ಐಪಿಸಿ ಸೆಕ್ಷನ್‌ 498 ಎ (ಪತ್ನಿಗೆ ಕಿರುಕುಳ) ಮತ್ತು 302 (ಕೊಲೆ ಆರೋಪ) ಅನ್ವಯ ಆರೋಪಿ ರಾಜನ ವಿರುದ್ಧದ ಆರೋಪ ಸಾಬೀತಾಗಿದೆ ಎಂಬ ತೀರ್ಮಾನಕ್ಕೆ ಬಂದಿದ್ದು, ಶಿಕ್ಷೆಯ ಪ್ರಮಾಣದ ಬಗ್ಗೆ ವಿಚಾರಣೆಯನ್ನು ಡಿ. 23ಕ್ಕೆ ನಿಗದಿಪಡಿಸಿದ್ದಾರೆ.

ಆರೋಪಿ ರಾಜ ಪ್ರಾರಂಭದಲ್ಲಿ “ಪತ್ನಿಯೇ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡಿದ್ದಳು’ ಎಂಬ ಹೇಳಿಕೆ ನೀಡಿದ್ದರೆ ಸಾಕ್ಷಿ ವಿಚಾರಣೆಯ ವೇಳೆ “ಅಡುಗೆ ಮಾಡುವಾಗ ಬೆಂಕಿ ತಗುಲಿತು’ ಎಂಬ ಹೇಳಿಕೆ ನೀಡಿದ್ದನು. ಹಾಗೆ ಆತ ಎರಡು ವ್ಯತ್ಯಸ್ತ ಹೇಳಿಕೆಗಳನ್ನು ನೀಡಿದ್ದರಿಂದ ನ್ಯಾಯಾಲಯ ಆತನ ಹೇಳಿಕೆಯನ್ನು ಪರಿಗಣಿಸಿಲ್ಲ. ರಾಜ- ರಾಣಿ ಮೂವರು ಮಕ್ಕಳಲ್ಲಿ ಹಿರಿಯ ಪುತ್ರ ತಂದೆ ರಾಜನ ಜತೆಗಿದ್ದರೆ ಉಳಿದಿಬ್ಬರು ಮಕ್ಕಳು ರಾಣಿಯ ಸ‌ಂಬಂಧಿಕರ ಮನೆಯಲ್ಲಿದ್ದಾರೆ. ಹಿರಿಯ ಪುತ್ರನು ವಿಚಾರಣೆಯ ವೇಳೆ ತಂದೆಯ ಪರವಾಗಿ ಸಾಕ್ಷಿ ಹೇಳಿದ್ದಾನೆ.

ವಿಚಾರಣೆಯ ನಡುವೆಯೇ ಮೃತ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದ ಕುಟುಂಬದವರಿಗೆ ಸಾಕ್ಷ ಹೇಳದಂತೆ ಆರೋಪಿ ಬೆದರಿಕೆ ಹಾಕಿದ್ದ. ಪ್ರಾಸಿಕ್ಯೂಷನ್ ಪರವಾಗಿ ವಾದಿಸಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್ಗಳಾದ ಶಿವಪ್ರಸಾದ್ ಆಳ್ವ ಮತ್ತು ಬಿ.ಶೇಖರ್ ಶೆಟ್ಟಿ ವಾದಿಸಿದ್ದರು. ಪ್ರಾಸಿಕ್ಯೂಷನ್ ಪರ ವಕೀಲರ ವಾದವನ್ನು ಮಾನ್ಯ ಮಾಡಿದ ನ್ಯಾಯಾಧೀಶ ಸರ್ವೋದಯ ಶೆಟ್ಟಿಗಾರ್ ಅವರು, ರಾಜಾ ಅಪರಾಧಿ ಎಂದು ಹೇಳಿ ಶಿಕ್ಷೆಯ ಪ್ರಮಾಣವನ್ನು ಇಂದು ಘೋಷಿಸಿದರು

ಮರಣ ಪೂರ್ವ ಹೇಳಿಕೆ ಪ್ರಮುಖ ಸಾಕ್ಷಿ :ರಾಣಿ ಅವರು ಆಸ್ಪತ್ರೆಯ ಬೆಡ್‌ನ‌ಲ್ಲಿದ್ದಾಗ ಪೊಲೀಸರಿಗೆ ನೀಡಿದ ಹೇಳಿಕೆಯನ್ನು ನ್ಯಾಯಾಲಯವು ಡೈಯಿಂಗ್‌ ಡಿಕ್ಲರೇಶನ್‌ (ಮರಣ ಪೂರ್ವ ಹೇಳಿಕೆ) ಆಗಿ ಪರಿಗಣಿಸಿದೆ. ಆಕೆಯ ಮನೆಯ ಆಕ್ಕಪಕ್ಕದ ಜನರು 2010ರಲ್ಲಿ ಕಾವೂರು ಪೊಲೀಸರಿಗೆ ಸಲ್ಲಿಸಿದ ದೂರು ಮತ್ತು 2011ರಲ್ಲಿ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ ಸಂದರ್ಭದಲ್ಲಿ ಅದೇ ಜನರು ಮತ್ತೆ ಆಗಮಿಸಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲು ನೆರವಾಗಿದ್ದು, ವಿಚಾರಣೆ ಸಂದರ್ಭದಲ್ಲಿ ಸಾಕ್ಷಿ ಹೇಳಲು ಕೂಡ ಈ ಜನರು ನ್ಯಾಯಾಲಯಕ್ಕೆ ಆಗಮಿಸಿ ದ್ದರು. ಹಾಗೆ ರಾಣಿ ಅವರ ಡೈಯಿಂಗ್‌ ಡಿಕ್ಲರೇಶನ್‌, ಊರಿನ ಜನರ ಸಾಕ್ಷಿ ಮತ್ತು ವೆನ್ಲಾಕ್‌ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಜೂಲಿಯಾನಾ ಸಲ್ದಾನ್ಹಾ ಅವರ ವೈದ್ಯಕೀಯ ಪ್ರಮಾಣ ಪತ್ರವನ್ನು ಪರಿಗಣಿಸಿ ನ್ಯಾಯಾಲಯವು ಆರೋಪಿ ರಾಜ ಅಪರಾಧಿ ಎಂಬ ತೀರ್ಮಾನಕ್ಕೆ ಬಂದಿದೆ.

Comments are closed.