ಕರಾವಳಿ

ಸ್ವಯಂ ಘೋಷಿತ ಆಸ್ತಿ ತೆರಿಗೆ ಹೆಚ್ಚಳ ವಿರೋಧಿಸಿ ಬಿಜೆಪಿಯಿಂದ ವ್ಯಾಪಕ ಹೋರಾಟ :ವೇದವ್ಯಾಸ ಕಾಮತ್

Pinterest LinkedIn Tumblr

vedha_vyasa-kamath_1

ಮಂಗಳೂರು,ಡಿಸೆಂಬರ್.23 : ಚುನಾವಣಾ ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದರೆ ಯಾವುದೇ ಕಾರಣಕ್ಕೂ ಆಸ್ತಿ ತೆರಿಗೆ ಹೆಚ್ಚಳ ಮಾಡುವುದಿಲ್ಲ ಎಂದು ಭರವಸೆ ಕೊಟ್ಟಿದ್ದ ಕಾಂಗ್ರೆಸ್ ಪಕ್ಷ ಈಗ ಉಲ್ಟಾ ಹೊಡೆದು ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಹದಿನೈದು ಶೇಕಡಾ ಹೆಚ್ಚಳ ಮತ್ತು ನೀರಿನ ದರವನ್ನು ಕೂಡ ಹೆಚ್ಚಿಸುವುದಕ್ಕೆ ಮುಂದಾಗಿರುವುದು ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಜನರಿಗೆ ಮಾಡುತ್ತಿರುವ ಮೋಸ ಎಂದು ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಡಿ. ವೇದವ್ಯಾಸ ಕಾಮತ್ ಹೇಳಿದ್ದಾರೆ.

vedha_vyasa-kamath_2 vedha_vyasa-kamath_3

ಪಕ್ಷದ ಜಿಲ್ಲಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಾಗರಿಕರಿಂದ ಮತ ಪಡೆದು ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್ ಸಂಪೂರ್ಣವಾಗಿ ಜನರನ್ನು ಮರೆತಿರುವುದಕ್ಕೆ ಈ ತೆರಿಗೆ ಹೆಚ್ಚಳಗಳೇ ಸಾಕ್ಷಿ. ಕಾಂಗ್ರೆಸ್ ಪಕ್ಷದ ಇಂತಹ ಜನವಿರೋಧಿ ನೀತಿ ಬಗ್ಗೆ ಜನರು ಆಕ್ರೋಶಿತರಾಗಿದ್ದಾರೆ. ಜನರ ಪರವಾಗಿ ಭಾರತೀಯ ಜನತಾ ಪಾರ್ಟಿ ಈ ವಿಷಯದಲ್ಲಿ ಬರುವ ದಿನಗಳಲ್ಲಿ ವ್ಯಾಪಕ ಹೋರಾಟ ಮಾಡಲು ಮುಂದಾಗಿದೆ ಎಂದು ತಿಳಿಸಿದರು.

vedha_vyasa-kamath_5 vedha_vyasa-kamath_6

ನೇತ್ರದಾನ ಶಿಬಿರ :

ಭಾರತ ರತ್ನ, ಮಾಜಿ ಪ್ರಧಾನಿ, ದೇಶ ಕಂಡ ಅಪ್ರತಿಮ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ಮಂಗಳೂರು ನಗರ ದಕ್ಷಿಣ ಬಿಜೆಪಿ ಘಟಕ ಸಜ್ಜಾಗಿದೆ. ಆ ನಿಟ್ಟಿನಲ್ಲಿ ಡಿಸೆಂಬರ್ 25 ರಂದು ಭಾನುವಾರ ಬೆಳಿಗ್ಗೆ 10.15ಕ್ಕೆ ಮಂಗಳೂರಿನ ಕೊಡಿಯಾಲ್ ಬೈಲಿನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಬೃಹತ್ ನೇತ್ರದಾನ ಶಿಬಿರವನ್ನು ಹಮ್ಮಿಕೊಳ್ಳುವುದರ ಮೂಲಕ ಅಜಾತ ಶತ್ರು, ವಾಗ್ಮಿ, ಪಕ್ಷಾತೀತವಾಗಿ ಎಲ್ಲರಿಂದಲೂ ಮನ್ನಣೆ ಗಳಿಸಿದ ನಾಯಕ ವಾಜಪೇಯಿಯವರ ಜನ್ಮದಿನವನ್ನು ವಿಶಿಷ್ಟವಾಗಿ ಆಚರಿಸಲಾಗುವುದು ಎಂದು ವೇದವ್ಯಾಸ ಕಾಮತ್ ತಿಳಿಸಿದರು.

ನಮ್ಮ ನಿಧನದ ನಂತರ ಆರು ಗಂಟೆಗಳ ಒಳಗೆ ವೈದ್ಯರಿಗೆ ಮಾಹಿತಿ ನೀಡುವುದರಿಂದ ವೈದ್ಯರು ಮುಖ ಯಾವುದೇ ರೀತಿಯಲ್ಲಿ ವಿಕಾರವಾಗದಂತೆ ಕೇವಲ ಕಣ್ಣಿನ ರೇಟಿನಾ ಮಾತ್ರ ಕೆಲವೇ ನಿಮಿಷಗಳೊಳಗೆ ತೆಗೆಯುತ್ತಾರೆ. ನಮ್ಮ ಈ ಶ್ರೇಷ್ಟ ನಡೆಯಿಂದ ಪ್ರಪಂಚದ ಇಬ್ಬರು ನೇತ್ರಹೀನರು ನಮ್ಮ ಬಳಿಕ ಈ ಸುಂದರ ಪ್ರಪಂಚ ನೋಡಲು ಅವಕಾಶ ಸಿಕ್ಕಿದಂತೆ ಆಗುತ್ತದೆ.

ಯಾವುದೇ ಭಯ ಅಥವಾ ಮೂಡನಂಬಿಕೆಗೆ ಒಳಗಾಗದೇ ಜನ ನೇತ್ರದಾನದಲ್ಲಿ ಭಾಗವಹಿಸುತ್ತಿರುವುದು ನಮ್ಮ ಪ್ರೌಢಿಮೆಗೆ ಸಾಕ್ಷಿ. ಶ್ರೀಲಂಕಾದಂತಹ ರಾಷ್ಟ್ರದಲ್ಲಿ ಕಡ್ಡಾಯವಾಗಿರುವ ನೇತ್ರದಾನ, ನಮ್ಮ ದೇಶದಲ್ಲಿ ಸ್ವಯಂಪ್ರೇರಿತವಾಗಿ ಜನ ಮುಂದೆ ಬಂದು ಈ ಪುಣ್ಯಕಾರ್ಯದಲ್ಲಿ ತೊಡಗಿಸಿ ಪ್ರಪಂಚಕ್ಕೆ ಮಾದರಿಯಾಗಿರುವುದು ಶ್ಲಾಘನೀಯ.ಈ ನಿಟ್ಟಿನಲ್ಲಿ ಮಂಗಳೂರಿನ ನಾಗರಿಕರು, ಪಕ್ಷದ ಕಾರ್ಯಕರ್ತರು, ಸಂಘ ಸಂಸ್ಥೆಗಳು ನೇತ್ರದಾನದಲ್ಲಿ ಭಾಗವಹಿಸಿ ದೇಶದಲ್ಲಿ ಅಂಧತ್ವ ನಿವಾರಣೆಗೆ ತಮ್ಮದೇ ಕೊಡುಗೆ ನೀಡಬೇಕು ಎಂದು ವೇದವ್ಯಾಸ ಕಾಮತ್ ತಿಳಿಸಿದರು.

ಕ್ಯಾಶ್ ಲೆಸ್ ವ್ಯವಹಾರಕ್ಕೆ ಒತ್ತು ಕೊಡುವ ನಿಟ್ಟಿನಲ್ಲಿ ಮತ್ತು ಜನರಿಗೆ ಈ ಬಗ್ಗೆ ಸರಿಯಾದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಬಿಜೆಪಿ ಘಟಕ ಈಗಾಗಲೇ ಕಾರ್ಯತತ್ಪರವಾಗಿದೆ. ಬರುವ ದಿನಗಳಲ್ಲಿ ಪ್ರತಿಯೊಂದು ವಾರ್ಡುಗಳಲ್ಲಿ ಕಾರ್ಯಾಗಾರ ಹಮ್ಮಿಕೊಂಡು ರಿಕ್ಷಾಚಾಲಕರಿಗೆ, ತರಕಾರಿ, ಹಾಲು, ಮೀನು ಮಾರಾಟಗಾರರಿಗೆ, ಸಣ್ಣ ವ್ಯಾಪಾರಿಗಳಿಗೆ, ಗೃಹಿಣಿಯರಿಗೆ, ಜನಸಾಮಾನ್ಯರಿಗೆ ಕ್ಯಾಶ್ ಲೆಸ್ ವ್ಯವಹಾರಗಳ ಪರಿಣಿತರಿಂದ ಈ ಬಗ್ಗೆ ಯೋಗ್ಯ ಮಾರ್ಗದರ್ಶನವನ್ನು ಕೊಡಲು ಚಿಂತನೆ ನಡೆಸಲಾಗಿದೆ ಎಂದು ವೇದವ್ಯಾಸ ಕಾಮತ್ ಹೇಳಿದರು.

ರೂಪಾ.ಡಿ ಬಂಗೇರ ಖಂಡನೆ :

vedha_vyasa-kamath_4

ಮನಪಾ ವಿರೋಧ ಪಕ್ಷದ ನಾಯಕಿ ರೂಪಾ.ಡಿ ಬಂಗೇರ ಅವರು, ಮಂಗಳೂರು ಮಹಾನಗರ ಪಾಲಿಕೆಯು ಸ್ವಯಂ ಘೋಷಿತ ಆಸ್ತಿ ತೆರಿಗೆ ಹೆಚ್ಚಳ ಮಾಡಿರುವ ಬಗ್ಗೆ ತೀರ್ಮಾನ ಕೈಗೊಂಡಿರುವುದನ್ನು ಖಂಡಿಸಿ, ಇದಕ್ಕೆ ಸಂಬಂಧ ಪಟ್ಟ ಪೂರಕ ಮಾಹಿತಿಗಳನ್ನು ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಉಪಾಧ್ಯಕ್ಷ ರವಿಶಂಕರ್ ಮಿಜಾರ್, ಪ್ರಧಾನ ಕಾರ್ಯದರ್ಶಿ ಬ್ರಿಜೇಶ್ ಚೌಟ, ಕಾರ್ಯದರ್ಶಿ ಪ್ರಭಾ ಮಾಲಿನಿ, ಕೋಶಾಧಿಕಾರಿ ಸಂಜಯ್ ಪ್ರಭು, ಮಾಜಿ ಕಾರ್ಪೊರೇಟರ್ ಭಾಸ್ಕರ್‌ಚಂದ್ರ ಶೆಟ್ಟಿ ಹಾಗೂ ಎನ್ ಎಮ್ ಪಿಟಿ ಟ್ರಸ್ಟ್ ನಿತಿನ್ ಕುಮಾರ್ ಉಪಸ್ಥಿತರಿದ್ದರು.

Comments are closed.