ಕರಾವಳಿ

ಮನಪಾದಿಂದ ಮತ್ತೆ ಸ್ವಯಂ ಘೋಷಿತ ಆಸ್ತಿ ತೆರಿಗೆ ಹೆಚ್ಚಳ : ಪ್ರತಿಪಕ್ಷಗಳಿಂದ ತೀವ್ರ ವಿರೋಧ

Pinterest LinkedIn Tumblr

mcc_tax_hike_1

ಮಂಗಳೂರು, ಡಿ.23: ಮಂಗಳೂರು ಮಹಾನಗರ ಪಾಲಿಕೆಯು ಸ್ವಯಂ ಘೋಷಿತ ಆಸ್ತಿ ತೆರಿಗೆ (ಎಸ್‌ಎಎಸ್)ಯನ್ನು ಶೇ.15 ಹೆಚ್ಚಳ ಮಾಡಿದೆ. ಗುರುವಾರ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಮೇಯರ್ ಹರಿನಾಥ್ ಅಧ್ಯಕ್ಷತೆಯಲ್ಲಿ ನಡೆದ ಪಾಲಿಕೆ ವಿಶೇಷ ಸಭೆಯಲ್ಲಿ ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯು ಈ ನಿರ್ಣಯಕೈಗೊಳ್ಳಲಾಯಿತು.

ಯಾವುದೇ ಕಾರಣಕ್ಕೂ ತೆರಿಗೆ ಹೆಚ್ಚಳ ಮಾಡಬಾರದು. ಈ ಹಿಂದೆ ಪಾಲಿಕೆ ಚುನಾವಣೆ ವೇಳೆ ಎಸ್‌ಎಎಸ್ ಹೆಚ್ಚಳ ಮಾಡುವುದಿಲ್ಲ ಎಂದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ಅಧಿಕಾರಕ್ಕೆ ಬಂದ ಬಳಿಕ ಇದೀಗ 2ನೆ ಬಾರಿಗೆ ಎಸ್‌ಎಎಸ್ ಹೆಚ್ಚಳ ಮಾಡಲಾಗುತ್ತಿದೆ ಎಂದು ಪ್ರತಿಪಕ್ಷ ಸದಸ್ಯರಾದ ರೂಪಾ ಡಿ.ಬಂಗೇರ, ಬಿಜೆಪಿ ಸದಸ್ಯರಾದ ಪ್ರೇಮಾನಂದ ಶೆಟ್ಟಿ, ಸುಧೀರ್ ಶೆಟ್ಟಿ ಕಣ್ಣೂರು, ತಿಲಕ್ರಾಜ್ ಮೇಯರ್ನ್ನು ತರಾಟೆಗೆ ತೆಗೆದುಕೊಂಡರು. ಸಿಪಿಎಂ ಸದಸ್ಯ ದಯಾನಂದ ಶೆಟ್ಟಿ ತೆರಿಗೆ ಹೆಚ್ಚಳಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

mcc_tax_hike_2 mcc_tax_hike_3 mcc_tax_hike_4 mcc_tax_hike_5

ಈ ಸಂದರ್ಭ ಮಾತನಾಡಿದ ಪಾಲಿಕೆ ಆಯುಕ್ತ ಮುಹಮ್ಮದ್ ನಝೀರ್, ರಾಜ್ಯದ ಎಲ್ಲ ಪಾಲಿಕೆಗಳಲ್ಲೂ ಪ್ರತಿ ಮೂರು ವರ್ಷಗಳಿಗೊಮ್ಮೆ ಎಸ್‌ಎಎಸ್ ಹೆಚ್ಚಳ ಆಗುತ್ತಿದೆ. ಈ ಬಗ್ಗೆ ಕಾನೂನು ಕೂಡ ಇದೆ. ಕಾನೂನನ್ನು ಉಲ್ಲಂಘಿಸುವಂತಿಲ್ಲ. 2008ರ ಎಪ್ರಿಲ್ 1, 2011ರ ಎಪ್ರಿಲ್ 1, 2014ರ ಎಪ್ರಿಲ್ 1 ಹಾಗೂ 2016ರ ಎಪ್ರಿಲ್ 1ರಂದು ಯಥಾಪ್ರಕಾರವಾಗಿ ಕಾನೂನಿನಂತೆ ತೆರಿಗೆ ಹೆಚ್ಚಳ ಆಗಿದೆ. ಒಂದು ವೇಳೆ ಎಸ್‌ಎಎಸ್ ಹೆಚ್ಚಳ ಮಾಡದೆ ನಿರ್ಣಯ ಕೈಗೊಂಡರೆ ಸರಕಾರವೇ ನೇರವಾಗಿ ಇದನ್ನು ಅನುಷ್ಠಾನಗೊಳಿಸುತ್ತದೆ ಎಂದು ವಿವರಿಸಿದಲ್ಲದೆ, ತೆರಿಗೆ ಹೆಚ್ಚಳವಾದ ಕುರಿತಂತೆ ಪಾಲಿಕೆ ಯಾವುದೇ ಪ್ರಕಟನೆ ನೀಡದಿದ್ದರೂ ಈಗಾಗಲೇ ಕೆಲವರು ಹೆಚ್ಚಿನ ಪ್ರಮಾಣದಲ್ಲಿ ಕಟ್ಟಿದ್ದಾರೆ ಎಂದು ತಿಳಿಸಿದರು.

mcc_tax_hike_6 mcc_tax_hike_7 mcc_tax_hike_8

ಈ ಸಂದರ್ಭ ಮಾತನಾಡಿದ ಪ್ರೇಮಾನಂದ ಶೆಟ್ಟಿ ಎಷ್ಟು ಮಂದಿ ಹೆಚ್ಚಿನ ತೆರಿಗೆ ಕಟ್ಟಿದ್ದಾರೆ ಮತ್ತು ಎಷ್ಟು ಜನ ಕಟ್ಟಲು ಬಾಕಿ ಇದ್ದಾರೆ ಮಾಹಿತಿ ನೀಡುವಂತೆ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಮುಂದಿನ ಸಭೆಯಲ್ಲಿ ಸಂಪೂರ್ಣ ವಿವರ ನೀಡುವುದಾಗಿ ಸಮಜಾಯಿಷಿ ನೀಡಿದರು.

ಸಭೆಯಲ್ಲಿ ಉಪಮೇಯರ್ ಸುಮಿತ್ರಾ ಕರಿಯ, ಪಾಲಿಕೆ ಆಯುಕ್ತ ಮೊಹಮ್ಮದ್ ನಝೀರ್ ಉಪಸ್ಥಿತರಿದ್ದರು.

Comments are closed.