ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಕಚೇರಿಯ ಪ್ರಥಮ ದರ್ಜೆ ಸಹಾಯಕ ಗೋವಿಂದ ನಾಯ್ಕ ಅವರ ಮನೆಗೆ ಗುರುವಾರ ಭ್ರಷ್ಟಾಚಾರ ನಿಗ್ರಹ ದಳ ದಾಳಿ ನಡೆಸಿದ್ದು, ಕೋಟ್ಯಾಂತರ ಮೌಲ್ಯದ ಆಸ್ತಿಗಳ ದಾಖಲೆ ಪತ್ರ, ಚಿನ್ನಾಭರಣ, ನಗದು ಹಣವನ್ನು ವಶಪಡಿಸಿಕೊಂಡಿರುವ ಬಗ್ಗೆ ತಿಳಿದುಬಂದಿದೆ.
ಈ ಸರಕಾರಿ ನೌಕರನ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸಾರ್ವಜನಿಕರು ದೂರು ನೀಡಿದ ಹಿನ್ನೆಲೆಯಲ್ಲಿ ಬೆಳ್ತಂಗಡಿ ತಾಲೂಕು ಕಚೇರಿಯ ಸಿಬ್ಬಂದಿ ಗೋವಿಂದ ನಾಯ್ಕ ಅವರು ಕುವೆಟ್ಟು ಗ್ರಾಮದ ಗುರುವಾಯನಕರೆ ಹವ್ಯಕ ಭವನದ ಸನಿಹದ ವಾಸ್ತವ್ಯವಿರುವ ಮನೆಗೆ ಗುರುವಾರ ಮುಂಜಾನೆ 6 ಗಂಟೆಯ ಸುಮಾರಿಗೆ ಮಂಗಳೂರು ಎಸಿಬಿಯ ತಂಡ ದಾಳಿ ನಡೆಸಿದೆ. ತಾಲೂಕು ಕಚೇರಿಯಲ್ಲಿ ಲಂಚಾವತಾರ ನಡೆಸುತ್ತಿದ್ದ ಬಗ್ಗೆ ಸಾರ್ವಜನಿಕರು ದೂರು ನೀಡಿದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದ್ದು, ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.
ಮಂಗಳೂರು, ಕಾರವಾರ, ಚಿಕ್ಕಮಗಳೂರು, ಉಡುಪಿ ಎಸಿಬಿ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು, ಎಸಿಬಿ ಎಸ್‌ಪಿ ಚನ್ನಧಿಬಸವಣ್ಣ. ಡಿವೈಎಸ್ಪಿ ಸುಧೀರ್ ಹೆಗ್ಡೆ, ಸಿಪಿಐಗಳಾದ ಯೋಗೇಶ್ ಕುಮಾರ್, ದಿನಕರ ಶೆಟ್ಟಿ ಹಾಗೂ ಸಿಬಂದಿಗಳು ಇದ್ದರು. ಮುಂಜಾನೆ ನಡೆದ ಕಾರ್ಯಾಚರಣೆ ಅಪರಾಹ್ನ ವೇಳೆಗೆ ಮುಕ್ತಾಯಗೊಂಡಿತು.
ಮನೆಯಲ್ಲಿ ಸುಮಾರು ಚಿನ್ನಾಭರಣಗಳು, ಲಕ್ಷಾಂತರ ರೂ. ಮೌಲ್ಯದ ಠೇವಣಿ ಪತ್ರಗಳು, 2000 ಮುಖಬೆಲೆಯ ಹೊಸ ನೋಟುಗಳು ಹಾಗೂ 50, 100 ನೋಟುಗಳು ಸೇರಿದಂತೆ ಅಂದಾಜು 6 ಲಕ್ಷ ನಗದು ಪತ್ತೆಯಾಗಿದೆ.ಇದೇ ಸಂದರ್ಭದಲ್ಲಿ ತಾಲೂಕು ಕಚೇರಿಯಲ್ಲಿರಬೇಕಾದ ಕೆಲವೊಂದು ಅತೀ ಮುಖ್ಯ ಕಡತಗಳು ಮನೆಯಲ್ಲೇ ಇರುವುದನ್ನ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.
ಪತ್ತೆಯಾದ ಒಟ್ಟು ಆಸ್ತಿಗಳ ವಿವರ ಇಂತಿದೆ: 14.5 ಲಕ್ಷ ರೂ. ಚಿನ್ನಾಭರಣ (500 ಗ್ರಾಂ), 2 ಲಕ್ಷ ರೂ. ನಗದು. 10 ಲಕ್ಷ ರೂ. ಹಣ ಬ್ಯಾಂಕ್ ಲಾಕರ್‌ನಲ್ಲಿ ಪತ್ತೆಯಾಗಿದೆ. 2 ಮನೆ, 10 ಲಕ್ಷ ರೂ. ಮನೆಯ ಐಷಾರಾಮಿ ಸಾಮಗ್ರಿಗಳನ್ನು ಗುರುತಿಸಲಾಗಿದ್ದು, ಒಟ್ಟು ಮೌಲ್ಯ 1.2 ಕೋ.ರೂ. ಅಗಿದೆ ಎಂದು ಎಸಿಬಿ ತಂಡ ತಿಳಿಸಿದೆ. ಇನ್ನೂ 10 ಬ್ಯಾಂಕ್ ಖಾತೆಗಳ ಮಾಹಿತಿ ಬಾಕಿ ಇದೆ. ಅದರ ಮಾಹಿತಿಗೆ ಎಸಿಬಿ ತಂಡ ಕಾರ್ಯಾಚರಣೆ ನಡೆಸುತ್ತಿದೆ. ಜತೆಗೆ ಬೇರೆ ಕಡೆ ಜಾಗ ಖರೀದಿಸಿದ ಮಾಹಿತಿಯಿದ್ದು, ಆ ಕುರಿತು ತನಿಖೆ ಕೈಗೊಳ್ಳಲಾಗುವುದು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗೋವಿಂದ ನಾಯ್ಕಅವರ ಪತ್ನಿ ಲೀಲಾವತಿ ಅವರು ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಿರಿಯ ಆರೋಗ್ಯ ಸಹಾಯಕಿಯಾಗಿದ್ದಾರೆ. ಅವರ ಪತ್ನಿಯ ವಿರುದ್ಧ ಯಾವುದೇ ಆರೋಪಗಳು ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.