ಕರಾವಳಿ

ದ.ಕ.ಜಿಲ್ಲೆಯ ಪ್ರವಾಸೋದ್ಯಮ ತಾಣಗಳಲ್ಲಿ ಏನಿರಬೇಕು, ಏನಿರಬಾರದು – ಸಾರ್ವಜನಿಕರ ಅಭಿಪ್ರಾಯಗಳು ಇಲ್ಲಿದೆ

Pinterest LinkedIn Tumblr

dc-meet_tourisam_1

ಮಂಗಳೂರು,ಡಿ.14:ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರವಾಸಿ ತಾಣಗಳಲ್ಲಿ ಮೂಲಭೂತ ಸೌಕರ್ಯಗಳೊಂದಿಗೆ ಸುಸಜ್ಜಿತ ಸಂಪರ್ಕ ವ್ಯವಸ್ಥೆ,ಶುಚಿತ್ವಕ್ಕೆ ಗಮನಹರಿಸಬೇಕು ಎಂದು ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಇಂದು ಜಿಲ್ಲಾಡಳಿತ ಹಾಗೂ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹಯೋಗದೊಂದಿಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಹೆಚ್ಚಿನ ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಸಾರ್ವಜನಿಕರ ಅಭಿಪ್ರಾಯಗಳನ್ನು ಪರಿಶೀಲಿಸಿ ಅನುಷ್ಠಾನಗೊಳಿಸಲು ಸಾಧ್ಯವಾಗುವ ಯೋಜನೆಯನ್ನು ತಕ್ಷಣ ಕಾರ್ಯಗತಗೊಳಿಸಲು ಸಾರ್ವಜನಿಕರ ಸಹಕಾರ ಅಗತ್ಯ ಎಂದು ಜಿಲ್ಲಾಧಿಕಾರಿ ಡಾ.ಜಗದೀಶ್ ತಿಳಿಸಿದರು.ಜಿಲ್ಲೆಯ ಪ್ರವಾಸಿ ತಾಣಗಳಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಲು ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಪ್ರವಾಸೋದ್ಯಮ ಇಲಾಖೆಯಿಂದ ಆಗಬೇಕಾದ ಕೆಲಸಗಳ ಬಗ್ಗೆ ತ್ವರಿತವಾಗಿ ಗಮನಹರಿಸಲು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಸಸಿಹಿತ್ಲು ಬೀಚ್ನಲ್ಲಿ ಸರ್ಫಿಂಗ್ ಅಭಿವೃದ್ಧಿಗೆ ಕ್ರಮ:-ಸಸಿ ಹಿತ್ಲು ಬೀಚ್ನಲ್ಲಿ ವಿಶೇಷವಾಗಿ ಸರ್ಫಿಂಗ್ ನಡೆಸಲು ಪೂರಕವಾದ ಸೌಲಭ್ಯಗಳನ್ನು ಅಭಿವೃದ್ಧಿ ಪಡಿಸಲು ಈಗಾಗಲೇ ಯೋಜನೆ ರೂಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದರು.

ಬೀಚ್ಗಳ ಸ್ವಚ್ಛತೆಗೆ ಸ್ಥಳೀಯಾಡಳಿತ ಸಮಸ್ಥೆಗಳಿಗೆ ಸೂಚನೆ:-ಬೀಚ್ಗಳನ್ನು ಸ್ವಚ್ಛವಾಗಿರುವ ಬಗ್ಗೆ ಸ್ಥಳೀಯವಾಗಿರುವ ಗ್ರಾಮ ಪಂಚಾಯತ್ ಹಾಗೂ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಸಭೆಯಲ್ಲಿ ತಿಳಿಸಿದರು.

dc-meet_tourisam_2 dc-meet_tourisam_3 dc-meet_tourisam_4 dc-meet_tourisam_5

ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳ ,ಸಾರ್ವಜನಿಕರ ವಿವಿಧ ಸಲಹೆ ಸೂಚನೆ

* ಪ್ರವಾಸೋದ್ಯಮ ಬೀಚ್ಗಳಲ್ಲಿ ಬಯಲು ಶೌಚಾಲಯ ಮುಕ್ತಗೊಳಿಸಿ ಅಲ್ಲಿ ಟಾಯಿಲೆಟ್ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು.
* ಜಿಲ್ಲೆಯ ಧಾರ್ಮಿಕ ಸ್ಥಳಗಳ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಯೊಂದಿಗೆ ಬೀಚ್ಗಳ ಹಾಗೂ ಮಂಗಳೂರು ನಗರದ ಹೊರ ಭಾಗದಲ್ಲಿರುವ ಗಡಿ ಪ್ರದೇಶಗಳ ಪ್ರವಾಸಿ ತಾಣಗಳ ಅಭಿವೃದ್ಧಿಗೂ ಗಮನ ಹರಿಸಬೇಕು.
* ಜಿಲ್ಲೆಯ ತಲಪಾಡಿ,ಸುರತ್ಕಲ್ ಬೀಚ್ ಗಳ ಅಭಿವೃದ್ಧಿ ಯೋಜನೆ ನೆನೆಗುದಿಗೆ ಬಿದ್ದಿದೆ ಅವುಗಳ ಅಭಿವೃದ್ಧಿಯಾಗಬೇಕು.
* ಸೋಮೇಶ್ವರ ,ತಲಪಾಡಿ ಬೀಚ್ಗಳ ಅಬಿವೃದ್ಧಿಯೊಂದಿಗೆ ಉತ್ತಮ ಸಂಪರ್ಕ ವ್ಯವಸ್ಥೆ ಹಾಗೂ ಪ್ರವಾಸಿಗರಿಗೆ ಸುರಕ್ಷತೆಯ ಕ್ರಮಗಳನ್ನು ಕೈ ಗೊಳ್ಳಬೇಕಾಗಿದೆ.
* ಬೈಕಂಪಾಡಿಯ ಬೀಚ್ನ್ನು ಸಂಪರ್ಕಿಸುವ ರಸ್ತೆಯಲ್ಲಿ ಸ್ವಚ್ಛತೆಯ ಸಮಸ್ಯೆ ಇದೆ ಅದನ್ನು ಪರಿಹರಿಸಬೇಕು.
* ಮಂಗಳೂರು ಹೊರ ವಲಯದಲ್ಲಿರುವ ಮೂಡಬಿದಿರೆಯ ಸಾವಿರ ಕಂಬದ ಬಸದಿ,ಅತ್ತೂರು ಚರ್ಚ್,ಕುದುರೆ ಮುಖ,ಎನ್‌ಐಟಿಕೆ ,ಸುರತ್ಕಲ್ ,ಉಳ್ಳಾಲ ದರ್ಗಾ,ತಲಪಾಡಿ ಬಳಿಯ ದ್ವೀಪ,ಗುರುಪುರ ಕೈ ಕಂಬ ಪ್ರದೇಶದ ನದಿ ತೀರದ ಪ್ರದೇಶಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಅವಕಾಶಗಳಿವೆ.
* ಕೊಡಗಿನ ಮಾದರಿಯಲ್ಲಿ ಜಿಲ್ಲೆಯಲ್ಲಿ ಹೋಂ ಸ್ಟೇಗಳಿಗೆ ಅವಕಾಶ ನೀಡಬೇಕು.
* ಜಿಲ್ಲೆಯಲ್ಲಿ ಸುಸಜ್ಜಿತ ಮೂಸಿಯಂ ನಿರ್ಮಾಣ ಮತ್ತು ಹಳೆ ಮಂಗಳೂರಿನ ಪಳೆಯುಳಿಕೆಯನ್ನು ಉಳಿಸಿಕೊಂಡು ಹೆರಿಟೇಜ್ ಮಂಗಳೂರು ನಗರ ನಿರ್ಮಾಣ.
* ಜಿಲ್ಲೆಯ ವಿವಿಧ ಪ್ರವಾಸೋದ್ಯಮ ತಾಣಗಳಿಗೆ ಪಿಕ್ನಿಕ್ ಗಾಗಿ ವಾಹನ ನಿಗದಿತ ಅವಧಿಯಲ್ಲಿ ಬಸ್ ಸೌಕರ್ಯ ಏರ್ಪಡಿಸುವುದು.
* ತರಬೇತಾದ ಪ್ರವಾಸೋದ್ಯಮದ ಗೈಡ್ಗಳನ್ನು ನೇಮಿಸುವುದು.
* ಮಂಗಳೂರು ನಗರದಲ್ಲಿ ಈಗಾಗಲೆ ಗುರುತಿಸಲಾದ 18 ಸ್ಥಳಗಳ ಜೊತೆಗೆ ಪ್ರವಾಸಿಗರು ಭೇಟಿ ನೀಡುವ ಪ್ರದೇಶಗಳಲ್ಲಿ ಜನರಿಗೆ ಸುರಕ್ಷತೆಯ ಬಗ್ಗೆ ಹಚ್ಚಿನ ಗಮನಹರಿಸಬೇಕು .ನಗರದ ಕೇಂದ್ರ ಜುಮ್ಮಾ ಮಸೀದಿಯಲ್ಲಿ ಅತ್ಯಂತ ಪುರಾತನ ಮರದ ಕೆತ್ತನೆ ಕುಶಲ ಕಲೆಗಳ ಬಗ್ಗೆ ಪ್ರವಾಸಿಗರಿಗೆ ಪರಿಚಯಿಸುವ ಕೆಲಸ ಆಗಬೇಕಾಗಿದೆ.
* ಟ್ಯಾಕ್ಸಿ ಚಾಲಕರಿಗೂ ಪ್ರವಾಸೊದ್ಯಮಕ್ಕೆ ಪೂರಕವಾದ ತರಬೇತಿ ನೀಡಬೇಕು.
* ಸ್ಥಳೀಯವಾಗಿ ಖಾಸಗಿಯವರು ಪ್ರವಾಸೋದ್ಯಮಕ್ಕಾಗಿ ನಡೆಸುವ ಪೂರಕ ಚಟುವಟಿಕೆಗೆ ಪ್ರವಾಸೋದ್ಯಮ ಇಲಾಖೆಯಿಂದ ಸೂಕ್ತ ಸಹಕಾರ ,ಮಾರ್ಗದರ್ಶನ ದೊರೆಯಬೇಕು.
* ಸೈಕಲ್ ಸವಾರರಿಗೆ ಹಾಗೂ ಪಾದಾಚಾರಿಗಳಿಗೆ ಅನುಕೂಲವಾಗುವ ವಲಯಗಳನ್ನು ,ವಾಹನ ಮುಕ್ತ ವಲಯಗಳನ್ನು ನಗರದಲ್ಲಿ ನಿರ್ಮಿಸಬೇಕು ಮೊದಲಾದ ಸಲಹೆಗಳನ್ನು ಸಭೆಯಲ್ಲಿ ಭಾಗವಹಿಸಿದ್ದ ಸಾರ್ವಜನಿಕರು,ವಿವಿಧ ಸಂಸ್ಥೆಗಳ ಪ್ರತಿನಿಧಿ ನೀಡಿದರು.

ಕೆನರಾ ವಾಣಿಜ್ಯ ಹಾಗೂ ಕೈಗಾರಿಕಾ ಸಂಘದ ಅಧ್ಯಕ್ಷ ಜೀವನ್ ಸಲ್ದಾನಾ,ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ವರದಿ ಕೃಪೆ : ವಾಭಾ

Comments are closed.