ಕರಾವಳಿ

ಬಜ್ಪೆ : ಒಂದೇ ಮನೆಯ ಮೂವರು ಆತ್ಮಹತ್ಯೆಗೆ ಯತ್ನ : ಇಬ್ಬರು ಸಾವು

Pinterest LinkedIn Tumblr

bajpe_sucide_note

ಬಜ್ಪೆ, ಡಿಸೆಂಬರ್.12: ಒಂದೇ ಮನೆಯ ಮೂವರು ಆತ್ಮಹತ್ಯೆಗೆ ಯತ್ನಿಸಿದ್ದು, ಇವರಲ್ಲಿ ಇಬ್ಬರು ಸಾವನ್ನಪ್ಪಿದ ಘಟನೆಯೊಂದು ಬಜ್ಪೆ ಠಾಣಾ ವ್ಯಾಪ್ತಿಯ ಪೆರ್ಮುದೆ ಪೆಟ್ರೋಲ್ ಪಂಪ್ ಸಮೀಪದ ಮನೆಯಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.

ಮೃತರನ್ನು ಗೋಪಿಜಯ (65), ಮತ್ತಾಕೆಯ ಮಗ ಸುರೇಶ್ ಪೂಜಾರಿ(45) ಎಂದು ಗುರುತಿಸಲಾಗಿದೆ.ಗೋಪಿಜಯ ಅವರ ಮಗಳು ಶೋಭಾ(೪೦)ಳನ್ನು ಸಾರ್ವಜನಿಕರು ಬಜ್ಪೆ ಪೊಲೀಸರ ಸಹಾಯದಿಂದ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಪೆಟ್ರೋಲ್ ಪಂಪ್ ಬಳಿಯಲ್ಲಿ ಮನೆ ಹೊಂದಿರುವ ಗೋಪಿಜಯ ತಮ್ಮ ಮಗ ಮತ್ತು ಮಗಳ ಜೊತೆ ವಾಸವಿದ್ದಾರೆ. ಮಗ ಸುರೇಶ್‌ಗೆ ಮೂರು ತಿಂಗಳ ಹಿಂದಷ್ಟೇ ಮಣಿಪಾಲ ಪ್ರಗತಿನಗರ ನಿವಾಸಿ ಆಶಾ ಎಂಬಾಕೆಯ ಜೊತೆ ಮದುವೆಯಾಗಿದ್ದು, ಆಕೆ ವಾರದ ಹಿಂದೆ ತವರುಮನೆಗೆ ತೆರಳಿದ್ದರು ಎನ್ನಲಾಗಿದೆ. ಆಕೆಗೂ ಈ ಮನೆಯ ಸದಸ್ಯರಿಗೂ ವೈಮನಸ್ಯವಿದ್ದು ಇದೇ ಕಾರಣಕ್ಕೆ ಆಗಾಗ ಗಲಾಟೆ ನಡೆಯುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.

ಇಂದು ನಸುಕಿನ ಜಾವ ಮನೆಯ ಮೂವರೂ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದು, ಅದರಂತೆ ಸುರೇಶ್ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾರೆ. ಗೋಪಿಜಯ ಮತ್ತು ಶೋಭಾ ಮನೆಯ ಮುಂದಿನ ಬಾವಿಗೆ ಹಾರಿದ್ದಾರೆ. ಮುಂಜಾನೆ 8:15ರ ಸುಮಾರಿಗೆ ಸ್ಥಳೀಯರು ಮನೆಯ ಅಂಗಳಕ್ಕೆ ಬಂದಾಗ ಯಾರೂ ಕಾಣದೇ ಇದ್ದು ಬಾವಿಯಲ್ಲಿ ಇಣುಕಿದಾಗ ಗೋಪಿಜಯ ಮೃತದೇಹ ತೇಲುತ್ತಿತ್ತು. ಶೋಭಾ ಅರೆಪ್ರಜ್ಞಾವಸ್ಥೆಯನ್ನು ತಲುಪಿದ್ದು ತಕ್ಷಣವೇ ಬಜ್ಪೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಗಸ್ತು ನಿರತರಾಗಿದ್ದ ಪೊಲೀಸರು ಸ್ಥಳಕ್ಕೆ ಧಾವಿಸಿ ಸಾರ್ವಜನಿಕರ ನೆರವಿನಿಂದ ಶೋಭಾಳನ್ನು ಬಾವಿಯಿಂದ ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗೋಪಿಜಯ ಮತ್ತು ಸುರೇಶ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವೆನ್‌ಲಾಕ್ ಆಸ್ಪತ್ರೆಗೆ ರವಾನಿಸಲಾಗಿದೆ.

ಬಲ್ಲಮೂಲಗಳ ಪ್ರಕಾರ ಸುರೇಶ್ ಪತ್ನಿಗೂ-ಗೋಪಿಜಯ ಅವರಿಗೂ ಜಮೀನು ವಿಚಾರಕ್ಕೆ ಸಂಬಂಧಿಸಿ ಆಗಾಗ್ಗೆ ಜಗಳ ನಡೆಯುತ್ತಿದ್ದು ಇದೇ ಕಾರಣಕ್ಕೆ ಸುರೇಶ್‌ರನ್ನು ತ್ಯಜಿಸಿ ಆಕೆ ತವರುಮನೆಯಲ್ಲಿ ವಾಸವಿದ್ದರು ಎಂದು ಹೇಳಲಾಗುತ್ತಿದೆ. ಬಜ್ಪೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

 ಮೂರು ಜನರ ಸಾವಿಗೆ ಸುರೇಶ್ ಪತ್ನಿ ಆಶಾ ಕಾರಣ!..

‘ಮೂರು ಜನರ ಸಾವಿಗೆ ಸುರೇಶ್ ಪತ್ನಿ ಆಶಾ ಮತ್ತು ಸುನೀತಾ ಕಾರಣ. ಮಣಿಪಾಲ ಪ್ರಗತಿನಗರ, ಅಲ್ಲಿ ಜಾಗವಿದೆ, ಆ ಜಾಗದಲ್ಲಿ ಅವಳಿಗೆ ಹಕ್ಕಿಲ್ಲ’ ಎಂದು ಮನೆಯ ಮುಂಬದಿಯ ಗೋಡೆಯಲ್ಲಿ ಪೈಂಟ್ ಬಳಸಿ ಡೆತ್‌ನೋಟ್ ಬರೆದಿಡಲಾಗಿದೆ.

ಪೈಂಟ್‌ನಲ್ಲಿ ಬರೆದಿರುವ ಕಾರಣ ಮನೆಮಂದಿ ಆತ್ಮಹತ್ಯೆಗೂ ಸಾಕಷ್ಟು ಪೂರ್ವತಯಾರಿ ಮಾಡಿಕೊಂಡಿರುವುದು ಸ್ಪಷ್ಟವಾಗುತ್ತದೆ. ತಡರಾತ್ರಿ ಮನೆಮಂದಿ ಚರ್ಚಿಸಿದ ಬಳಿಕ ಸುರೇಶ್ ನೇಣು ಬಿಗಿದುಕೊಂಡು ಸಾಯಲು ನಿರ್ಧರಿಸಿದ್ದರೆ, ಗೋಪಿಜಯ ಮತ್ತು ಶೋಭಾ ಬಾವಿಗೆ ಹಾರಲು ನಿರ್ಧರಿಸಿದ್ದು ಅದರಂತೆಯೇ ಮಾಡಿದ್ದಾರೆ. ಶೋಭಾ ಪತಿ ಕೆಲತಿಂಗಳ ಹಿಂದಷ್ಟೇ ಹೃದಯಾಘಾತದಿಂದ ಸಾವನ್ನಪ್ಪಿದ್ದು ಅವರು ಮಾನಸಿಕವಾಗಿ ಖಿನ್ನರಾಗಿದ್ದರು ಎಂದು ಹೇಳಲಾಗುತ್ತಿದೆ.

ಇಬ್ಬರ ಮೇಲೆ ಎಫ್‌ಐಆರ್ ದಾಖಲು :

‘ಮನೆಮಂದಿ ಆತ್ಮಹತ್ಯೆ ಮಾಡಿಕೊಳ್ಳಲು ಸುರೇಶ್ ಪತ್ನಿ ಹಾಗೂ ಇನ್ನೊಬ್ಬರ ಹೆಸರನ್ನು ಉಲ್ಲೇಖಿಸಿ ಡೆತ್‌ನೋಟ್ ಬರೆದಿದ್ದಾರೆ. ಬದುಕುಳಿದಿರುವ ಶೋಭಾ ಕೂಡಾ ಇದಕ್ಕೆ ಪೂರಕವಾದ ಮಾಹಿತಿ ನೀಡಿದ್ದಾರೆ. ಈ ನಿಟ್ಟಿನಲ್ಲಿ ಸುರೇಶ್ ಪತ್ನಿಯ ವಿರುದ್ಧ ಆತ್ಮಹತ್ಯೆಗೆ ದುಷ್ಪ್ರೇರಣೆ ಪ್ರಕರಣದಡಿ ಎಫ್‌ಐಆರ್ ದಾಖಲಾಗುತ್ತದೆ.

ಆಕೆ ಮಣಿಪಾಲ ಮೂಲದವರಾಗಿದ್ದು ಸುರೇಶ್ ಆಕೆಯನ್ನು ಕೆಲತಿಂಗಳ ಹಿಂದಷ್ಟೇ ವಿವಾಹವಾಗಿದ್ದರು. ಸಂಸಾರದಲ್ಲಿ ಆಗಾಗ ಜಗಳ ನಡೆಯುತ್ತಿದ್ದು ಇದೇ ಕಾರಣಕ್ಕೆ ಆತ್ಮಹತ್ಯೆಗೆ ನಿರ್ಧರಿಸಿರುವ ಸಾಧ್ಯತೆಯಿದೆ. ಆಕೆಯನ್ನು ಬಂಧಿಸಿ ವಿಚಾರಣೆ ನಡೆಸಿದ ಬಳಿಕ ಪ್ರಕರಣದ ಹಿನ್ನೆಲೆ ಬಯಲಾಗಲಿದೆ’ ಎಂದು ಬಜ್ಪೆ ಠಾಣಾ ಪೊಲೀಸರು ತಿಳಿಸಿದ್ದಾರೆ.

Comments are closed.