ಮಂಗಳೂರು, ಡಿಸೆಂಬರ್.12: ನೇತ್ರಾವತಿ ನದಿ ತಿರುವು ಯೋಜನೆ ಕೆಲವು ಮಂದಿಯ ಸ್ವಾರ್ಥಕಾಗಿ ಹುಟ್ಟುಹಾಕಿಕೊಂಡಿರುವ ಯೋಜನೆಯಾಗಿದ್ದು, ಎತ್ತಿನಹೊಳೆ ಯೋಜನೆಯನ್ನು ಅನೇಕ ಪ್ರಗತಿಪರರು, ವಿದ್ಯಾವಂತರು ಸಹಿತ ಅನೇಕ ಮಂದಿ ಖಂಡಿಸಿದ್ದಾರೆ.ಯಾವುದೇ ಕಾರಣಕ್ಕೂ ಜೀವನದಿಯನ್ನು ಬಿಟ್ಟು ಕೊಡಲಾರೆವು ಎಂದು ಮೂಡುಬಿದಿರೆ ಜೈನಮಠದ ಶ್ರೀ ಸ್ವಸ್ತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.
ವಿರೋಧಿಸಿ ಕೈಗೊಳ್ಳಲಾಗಿರುವ ಪಂಚತೀರ್ಥ ಸಪ್ತಕ್ಷೇತ್ರ ರಥಯಾತ್ರೆಯು ರವಿವಾರ ಕದ್ರಿ ಮೈದಾನಕ್ಕೆ ಆಗಮಿಸಿದ ಸಂದರ್ಭ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಎತ್ತಿನಹೊಳೆ ಯೋಜನೆಯಿಂದ ಜಿಲ್ಲೆಯಲ್ಲಿ ನೀರಿನ ಹಾಹಾಕಾರ ಉಂಟಾಗಲಿದ್ದು, ಜಿಲ್ಲೆಯ ಜನತೆ ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಈ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಯ ಜೀವನದಿಯನ್ನು ಯಾವೂದೇ ಕಾರಣಕ್ಕೂ ಬಿಟ್ಟು ಕೊಡಲಾರೆವು ಎಂದವರು ಹೇಳಿದರು.
ಯೋಜನೆ ಕೂಡಲೇ ಕೈಬಿಡಬೇಕು. ಪರಿಸರಪೂರಕವಾಗಿರುವ ಮಳೆಕೊಯ್ಲುನಂತಹ ಯೋಜನೆ ಅಳವಡಿಸಿಕೊಳ್ಳಲು ಮುಂದಾಗಬೇಕು. ಯೋಜನೆ ಜಾರಿಯಾದರೆ ತೀವ್ರ ಸಂಕಷ್ಟವಾಗಲಿದೆ ಎಂದು ನಗರದ ಚರ್ಚ್ನ ಧರ್ಮಗುರು ಫಾ.ಜೆ.ಬಿ.ಕ್ರಾಸ್ತಾ ಹೇಳಿದರು.
ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಕೆ.ಎಂ. ಎಸ್.ಮಸೂದ್ ಮಾತನಾಡಿ, ಯೋಜನೆ ವಿರುದ್ದ ಹೋರಾಟದಲ್ಲಿ ಜಾತಿಮತ, ರಾಜಕೀಯವಿಲ್ಲ. ಇಲ್ಲಿಯ ಜನರಿಗೆ ಕುಡಿವ ನೀರು ಬೇಕು ಎಂಬುದೇ ನಮ್ಮ ಆಗ್ರಹ. ನಾವು ಕುಡಿಯುವ ನೀರನ್ನು ಇನ್ನೊಬ್ಬರಿಗೆ ನೀಡಲು ಒಪ್ಪುವುದಿಲ್ಲ. ಇಂತಹ ಹೋರಾಟಕ್ಕೆ ಮುಸ್ಲಿಮರು ಬೆಂಬಲಿಸಲಿದ್ದಾರೆ ಎಂದರು.
ವಿಧಾನಪರಿಷತ್ ಸದಸ್ಯಕೋಟ ಶ್ರೀನಿವಾಸ ಪೂಜಾರಿ, ವಾರಣಾಸಿ ಗಂಗಾ ಸೇವಾ ಮಿಶನ್ನ ಶ್ರೀ ಆನಂದ ಸ್ವರೂಪ ಸ್ವಾಮೀಜಿ, ಎತ್ತಿನಹೊಳೆ ಯೋಜನೆ ವಿರೋಧಿ ಹೋರಾಟ ಸಮಿತಿಯ ಗೌರವಾಧ್ಯಕ್ಷರಾದ ಪ್ರೊ.ಎಂ.ಬಿ.ಪುರಾಣಿಕ್, ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ, ಹೋರಾಟ ಸಮಿತಿ ಅಧ್ಯಕ್ಷ ಸಂಜೀವ ಮಠಂದೂರು, ಸಂಚಾಲಕರಾದ ಗೋಪಾಲಕೃಷ್ಣ ಹೇರಳೆ, ಪುರುಷೋತ್ತಮ ಚಿತ್ರಾಪುರ, ಸಹಸಂಚಾಲಕರಾದ ವಕೀಲ ದಿನಕರ ಶೆಟ್ಟಿ, ಸತ್ಯಜಿತ್ ಸುರತ್ಕಲ್, ರಘುವೀರ್ ಸೂಟರ್ಪೇಟೆ, ಉಪಾಧ್ಯಕ್ಷರಾದ ಎನ್. ಯೋಗೀಶ್ ಭಟ್, ಪ್ರೊ. ಎಸ್.ಜಿ. ಮಯ್ಯ, ಸದಾನಂದ ನಾವರ, ಜಿತೇಂದ್ರ ಕೊಟ್ಟಾರಿ, ಡಾ.ಅಣ್ಣಯ್ಯ ಕುಲಾಲ್, ರಾಮಚಂದ್ರ ಬೈಕಂಪಾಡಿ, ಯೋಗೀಶ್ ಶೆಟ್ಟಿ ಜೆಪ್ಪು, ಉಪಮೇಯರ್ ಸುಮಿತ್ರ ಕರಿಯ, ಪಾಲಿಕೆ ಪ್ರತಿಪಕ್ಷ ನಾಯಕಿ ರೂಪಾ ಡಿ. ಬಂಗೇರ, ಕೆಥೋಲಿಕ್ ಸಭಾದ ಅಧ್ಯಕ್ಷ ಅನಿಲ್ ರೋಬೋ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.