ಮಂಗಳೂರು, ಡಿಸೆಂಬರ್. 8: ನೇತ್ರಾವತಿ ಸಂರಕ್ಷಣಾ ಸಂಯುಕ್ತ ಸಮಿತಿಯ ನೇತೃತ್ವದಲ್ಲಿ ಎತ್ತಿನ ಹೊಳೆ ಯೋಜನೆಯನ್ನು ವಿರೋಧಿಸಿ ಡಿ.10, 11 ಮತ್ತು 12ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯಲಿರುವ ಪಂಚ ತೀರ್ಥ ಸಪ್ತ ಕ್ಷೇತ್ರ ರಥಯಾತ್ರೆಗೆ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಸಂಪೂರ್ಣ ಬೆಂಬಲ ವ್ಯಕ್ತಪಡಿತಿದೆ ಎಂದು ಬಿಜೆಪಿ ದ.ಕ.ಜಿಲ್ಲಾಧ್ಯಕ್ಷ ಸಂಜೀವ ಮಟಂದೂರು ತಿಳಿಸಿದ್ದಾರೆ.
ಬುಧವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎತ್ತಿನ ಹೊಳೆ ಯೋಜನೆಯನ್ನು ವಿರೋಧಿಸಿ ದೊಡ್ಡ ಮಟ್ಟದ ಹೋರಾಟ ಅಗತ್ಯವಿದೆ.ನೇತ್ರಾವತಿ ಬತ್ತಿದರೆ ಈ ಭಾಗದ ಅಡಿಕೆ ಬೆಳೆಗಾರರು, ಮೀನುಗಾರರು ಇನ್ನಷ್ಟು ಸಂಕಷ್ಟಕ್ಕೊಳಗಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಪಂಚ ತೀರ್ಥ ಸಪ್ತ ಕ್ಷೇತ್ರ ರಥಯಾತ್ರೆಗೆ ಭಾರತೀಯ ಜನಾತ ಪಾರ್ಟಿ ಬೆಂಬಲ ನೀಡುತ್ತಿದ್ದು, ರಥಯಾತ್ರೆ ಸಂದರ್ಭ ಆಯಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಲಿದ್ದಾರೆ ಎಂದರು.
ಡಿಸೆಂಬರ್ 11ರ ಬಾನುವಾರದಂದು ಸಂಜೆ ಏಳು ಗಂಟೆಗೆ ಪಂಚ ತೀರ್ಥ ಸಪ್ತ ಕ್ಷೇತ್ರ ರಥಯಾತ್ರೆಯು ನಗರದ ಕದ್ರಿ ಮೈದಾನಕ್ಕೆ ಆಗಮಿಸಲಿದ್ದು, ಕರಾವಳಿ ಜಿಲ್ಲೆಯ ಜೀವನದಿ ನೇತ್ರಾವತಿಯನ್ನು ಉಳಿಸುವ ಹಿನ್ನೆಲೆಯಲ್ಲಿ ರಥಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ಜನತೆ ಪಾಲ್ಗೊಳ್ಳ ಬೇಕು ಎಂದು ಅವರು ವಿನಂತಿಸಿದರು.
ಜಿಲ್ಲಾ ಬಿಜೆಪಿ ಪದಾಧಿಕಾರಿಗಳಾದ ಉಮಾನಾಥ ಕೋಟ್ಯಾನ್, ಬೃಜೇಶ್ ಚೌಟ, ಜಿತೇಂದ್ರ ಕೊಟ್ಟಾರಿ, ಕಿಶೋರ್ ರೈ, ಸಂಜಯ ಪ್ರಭು ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Comments are closed.