ಕರಾವಳಿ

‘ಬ್ಲೂಸ್’ ಚಾಕಲೇಟ್‌ನಲ್ಲಿ ಜೀವಂತ ಹುಳು ಪತ್ತೆ : ಮಕ್ಕಳ ಪೋಷಕರಲ್ಲಿ ಆತಂಕ

Pinterest LinkedIn Tumblr

choklate_whorm-found

ಮಂಗಳೂರು, ನ.30 : ಮೂಡಬಿದ್ರೆಯ ಕಲ್ಸಂಕ ರಸ್ತೆ ಬಳಿಯಿರುವ ಗೃಹೋಪಯೋಗಿ ವಸ್ತುಗಳ ಮಳಿಗೆಯೊಂದರಲ್ಲಿ ಖರೀದಿಸಿದ ಸೇಮ್ ಸ್ಕೈ ಹೆಸರಿನ ಕಂಪನಿಯ ‘ಬ್ಲೂಸ್’ ಚಾಕಲೇಟ್‌ನಲ್ಲಿ ಜೀವಂತ ಹುಳುವೊಂದು ಪತ್ತೆಯಾಗಿರುವ ಬಗ್ಗೆ ವರದಿಯಾಗಿದ್ದು, ಮಕ್ಕಳ ಪೋಷಕರು ಇದರಿಂದ ಆತಂಕಕೀಡಾಗಿದ್ದಾರೆ.

ಮೂಡಬಿದ್ರೆಯ ಕಲ್ಸಂಕ ರಸ್ತೆ ಬಳಿಯಿರುವ ಗೃಹೋಪಯೋಗಿ ವಸ್ತುಗಳ ಮಳಿಗೆಯೊಂದರಲ್ಲಿ ಶಿಕ್ಷಕರೊಬ್ಬರು 5 ರೂ. ಬೆಲೆಯ ಎರಡು ‘ಬ್ಲೂಸ್’ ಚಾಕಲೇಟು ಖರೀದಿಸಿದ್ದರು. ಬಳಿಕ ವಿದ್ಯಾರ್ಥಿಗಳ ಸಮಕ್ಷಮದಲ್ಲಿ ಚಾಕಲೇಟಿನ ಕವರ್ ಬಿಡಿಸಿ ನೋಡಿದಾಗ ಒಂದು ಚಾಕಲೇಟ್‌ನ್ನು ಸೂಕ್ಷ್ಮವಾಗಿ ಗಮನಿಸಿದಾಗ ಬ್ಲೂಸ್ ಚಾಕಲೇನೊಳಗೆ ಜೀವಂತ ಹುಳು ಓಡಾಡುತ್ತಿದ್ದದ್ದು ಶಿಕ್ಷಕರ ಗಮನಕ್ಕೆ ಬಂದಿದೆ. ಅವರು ಸಾರ್ವಜನಿಕ ಹಿತಾಸಕ್ತಿಯಿಂದ ಈ ಬಗ್ಗೆ ಪರಿಶೀಲಿಸುವಂತೆ ಚಾಕಲೇಟ್‌ ಪ್ರಕರಣವನ್ನು ಮಾಧ್ಯಮದ ಮುಂದಿಟ್ಟಿದ್ದಾರೆ.

ಎರಡು ದಿನದ ಹಿಂದೆಯೂ ಇದೇ ಅಂಗಡಿಯಿಂದ ಈ ಶಾಲೆಯ ಸಿಬಂದಿ ಖರೀದಿಸಿದ್ದ 5 ಬ್ಲೂಸ್ ಚಾಕಲೇಟ್‌ಗಳ ಪೈಕಿ 2 ಚಾಕಲೇಟುಗಳಲ್ಲಿ ಜೀವಂತ ಹುಳುಗಳು ಪತ್ತೆಯಾಗಿದ್ದವು. ಈ ಬಗ್ಗೆ ಶಿಕ್ಷಕರು ಅಂಗಡಿಯವರಿಗೆ ಸಾಕ್ಷಿ ಸಮೇತ ತಿಳಿಸಿದಾಗ ಚಾಕಲೇಟು ವಾಪಾಸ್ ಕೊಡಿ ಕಂಪೆನಿಗೆ ದೂರು ನೀಡುತ್ತೇವೆ ಎಂದರು ಎನ್ನಲಾಗಿದೆ.

ಸಾಮಾನ್ಯವಾಗಿ ಎಳೆಯ ಮಕ್ಕಳು ಹಾಗೂ ಕೆಲವೊಮ್ಮೆ ಹಿರಿಯರು ಕೂಡಾ ಕವರ್ ಬಿಡಿಸಿ ಚಾಕಲೇಟನ್ನು ನೋಡದೇ ಬಾಯಿಗೆ ಹಾಕಿಕೊಳ್ಳುವ ರೂಢಿಯಿದೆ. ಹಾಗೇನಾದರೂ ಆಗಿದ್ದರೆ ಹುಳ ಅವರ ಬಾಯಿಗೆ ಬೀಳುವುದು ಖಂಡಿತ. ಇದರಿಂದ ಚಾಕಲೇಟ್ ಪ್ರಿಯರ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀಳುವುದಂತೂ ನಿಜ. ಆದ್ದರಿಂದ ಚಾಕಲೇಟು ಪ್ರಿಯರು ಚಾಕಲೇಟು ತಿನ್ನುವ ಮೊದಲು ಎಚ್ಚೆತ್ತುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಪ್ರಕರಣದಿಂದ ಇದೀಗ ಪೋಷಕರು ಮಕ್ಕಳಿಗೆ ಚಾಕಲೇಟ್‌ ನೀಡಲು ಹಿಂಜರಿಯುತ್ತಿದ್ದಾರೆ.

Comments are closed.