ಕರಾವಳಿ

ಸಿಸಿಬಿ ಪೊಲೀಸರ ವಶದಲ್ಲಿದ್ದ ಬಜರಂಗದಳದ ಕಾರ್ಯಕರ್ತ ನಿಗೂಢ ನಾಪತ್ತೆ..?

Pinterest LinkedIn Tumblr

missing_tulasi-das

ಮಂಗಳೂರು: ಹಲವು ಪ್ರಕರಣಗಳಿಗೆ ಸಂಬಂಧ ಪಟ್ಟಂತೆ ಪೊಲೀಸರು ವಶಕ್ಕೆ ಪಡೆದುಕೊಂಡ ಬಜರಂಗದಳದ ಸಕ್ರಿಯ ಕಾರ್ಯಕರ್ತ ನಿಗೂಢವಾಗಿ ನಾಪತ್ತೆಯಾದ ಘಟನೆಯೊಂದು ಮಂಗಳೂರಿನಲ್ಲಿ ನಡೆದಿದ್ದು, ಇದೀಗ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಹೆತ್ತವರು ಬಂಟ್ವಾಳ ನ್ಯಾಯಾಲಯದಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ.

ಮಂಜನಾಡಿ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿ ಒಂದೊಮ್ಮೆ ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡು ಮತ್ತೆ ಬಿಡುಗಡೆಗೊಳಿಸಿ ಮತ್ತೊಮ್ಮೆ ವಶಕ್ಕೆ ಪಡೆದುಕೊಂಡ ಬಜರಂಗದಳದ ಸಕ್ರಿಯ ಕಾರ್ಯಕರ್ತ ಬಾಳೆಪುಣಿಯ ಕೊಳಂಬೆ ಗ್ರಾಮದ ತುಳಸೀದಾಸ್ (30) ನಿಗೂಢವಾಗಿ ನಾಪತ್ತೆಯಾದವರು.

ಉಳ್ಳಾಲ ಪ್ರಖಂಡ ಬಜರಂಗದಳದಲ್ಲಿ ಜವಾಬ್ದಾರಿಯನ್ನು ಹೊತ್ತಿರುವ ತುಳಸೀದಾಸ್ ಮೇಲೆ ಮುಡಿಪು ಕಾಲೇಜು ಪ್ರವಾಸ ರದ್ದು ಬಳಿಕ ನಡೆದ ಹಿಂಸಾಚಾರ ಸಹಿತ, ದನ ಕಳವು ತಡೆದ ಪ್ರಕರಣ ಸಹಿತ ಹಲವು ಪ್ರಕರಣಗಳು ದಾಖಲಾಗಿವೆ.

ಮುನ್ನೂರಿನಲ್ಲಿ ರಾಮಮೋಹನ್ ಹತ್ಯಾ ಯತ್ನ ಪ್ರಕರಣಕ್ಕೆ ಪ್ರತೀಕಾರವಾಗಿ ನಡೆದ ದಾಳಿಯಂತೆ ಮಂಜನಾಡಿ ಸಮೀಪ ಶಮೀರ್ ಮತ್ತು ನವಾಝ್ ಚೂರಿ ಇರಿತ ಪ್ರಕರಣ ನಡೆದ ಎರಡನೇ ದಿನದಂದು ತುಳಸೀಯನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಆದರೆ ಒಂದು ದಿನ ವಿಚಾರಣೆ ನಡೆಸಿದ ಬಳಿಕ ಬಿಡುಗಡೆಗೊಳಿಸಿದ್ದರು.

ಮರುದಿನ ಮತ್ತೆ ತಡರಾತ್ರಿ ಮನೆಗೆ ನುಗ್ಗಿದ ಸಿಸಿಬಿ ಪೊಲೀಸರು ತುಳಸೀದಾಸ್ ಅವರನ್ನು ಮತ್ತೊಮ್ಮೆವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಮನೆಯವರು ಆರೋಪಿಸಿದ್ದಾರೆ. ಆದರೆ ಆ ಬಳಿಕ ತುಳಸಿದಾಸ್ ಮೊಬೈಲ್ ಸ್ವಿಚ್ಡ್ ಆಫ್ ಆಗಿದ್ದು, ಮನೆ ಮಂದಿಗೆ ಸುಳಿವೇ ಮನೆಮಂದಿಗೆ ದೊರೆತಿಲ್ಲ. ಸಿಸಿಬಿಯವರ ಬಳಿ ಮನೆಯವರು ತೆರಳಿ ಪ್ರಶ್ನಿಸಿದಾಗ, ತಮ್ಮ ಬಳಿ ತುಳಸೀದಾಸ್ ಇಲ್ಲ ಎಂದು ಹೇಳುತ್ತಿದ್ದಾರೆ ಎಂದು ಮನೆಯವರು ಆರೋಪಿಸಿದ್ದಾರೆ.

ಈ ಕುರಿತು ಕೊಣಾಜೆ ಠಾಣೆಯಲ್ಲಿ ದೂರು ದಾಖಲಿಸಿರುವ ಹೆತ್ತವರು ಯಾವುದೇ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೊರೆ ಹೋಗಿ ಹೆಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

Comments are closed.