ಕರಾವಳಿ

ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕ್ರೈಸ್ತ ಮಿಷನರಿಗಳ ಸೇವೆ ಅನ್ಯಾದೃಶವಾದುದು : ಡಾ. ಮೀನಾಕ್ಷಿ ರಾಮಚಂದ್ರ

Pinterest LinkedIn Tumblr

ard_souza_datti_1

ಮಂಗಳೂರು : ಕರ್ನಾಟಕದ ಸಾಮಾಜಿಕ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಕ್ರೈಸ್ತ ಮಿಷನರಿಗಳ ಸೇವೆ ಅನ್ಯಾದೃಶವಾದುದು. ಇ.ಪಿ. ರೈಸ್, ಹರ್ಮನ್ ಮೋಗ್ಲಿಂಗ್, ಫೆರ್ಡಿನಾಂಡ್ ಕಿಟ್ಟೆಲ್‌ರಂತಹವರು ಕನ್ನಡ ಶಾಸನ ಸಂಗ್ರಹ, ಹಸ್ತಪ್ರತಿಗಳ ಸಂಪಾದನೆ, ಜಾನಪದ ಸಾಹಿತ್ಯ ಸಂಗ್ರಹದಂತಹ ಕಾರ್ಯಗಳನ್ನು ಮಾಡಿ ಕನ್ನಡ ಸೇವೆ ಮಾಡಿದರು ಎಂದು ಮಂಗಳೂರು ಬೆಸೆಂಟ್ ಮಹಿಳಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಮೀನಾಕ್ಷಿ ರಾಮಚಂದ್ರ ನುಡಿದರು.

ಕನ್ನಡ ಸಾಹಿತ್ಯ ಪರಿಷತ್ ದ.ಕ. ಜಿಲ್ಲೆ, ಕನ್ನಡ ಸಾಹಿತ್ಯ ಪರಿಷತ್ ಮಂಗಳೂರು ತಾಲೂಕು ಘಟಕ ಮತ್ತು ಕನ್ನಡ ಸಂಘ ಶ್ರೀ ರಾಮಕೃಷ್ಣ ಪದವಿಪೂರ್ವ ಕಾಲೇಜು ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಎ.ಆರ್. ಡಿಸೋಜ ದತ್ತಿ ಕಾರ್ಯಕ್ರಮದ ಅಂಗವಾಗಿ ಕರ್ನಾಟಕದಲ್ಲಿ ಕ್ರೈಸ್ತರ ಇತಿಹಾಸ – ಕನ್ನಡ ಸಾಹಿತ್ಯಕ್ಕೆ ಕ್ರೈಸ್ತರ ಕೊಡುಗೆ ವಿಶೇಷ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು.

ard_souza_datti_2 ard_souza_datti_3

ಪತ್ರಿಕಾ ಕ್ಷೇತ್ರಕ್ಕೆ ಕ್ರೈಸ್ತ ಮಿಷನರಿಗಳು ನೀಡಿದ ಸೇವೆಯನ್ನೂ ನಾವು ನೆನಪಿಸಿಕೊಳ್ಳಬೇಕಾದ ಅಗತ್ಯವಿದೆ. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಅರುಣೋದಯ ಎನ್ನುವ ಮೊದಲ ಪತ್ರಿಕೆಯನ್ನು ತಂದವರು ಅವರು. ಮಂಗಳೂರು ಸಮಾಚಾರ ಪತ್ರಿಕೆಯ ಮೂಲಕ ಕನ್ನಡ ಪತ್ರಿಕೋದ್ಯಮ ಕ್ಷೇತ್ರ ಆರಂಭಗೊಂಡಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ರಾಮಕೃಷ್ಣ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಡಾ. ಕಿಶೋರ್ ಕುಮರ್ ರೈ ಶೇಣಿ ಮಾತನಾಡಿ ಕನ್ನಡ ಸಾಹಿತ್ಯಕ್ಕೆ ಕ್ರೈಸ್ತರ ಸಮುದಾಯದ ಕೊಡುಗೆ ಅಪಾರವಾಗಿದ್ದು ಸಾಮುದಾಯಿಕ ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಸಾಹಿತ್ಯ ಆಸಕ್ತಿ ಮೂಡಿಬರಬೇಕಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಮಾತನಾಡಿ ಭಾರತೀಯ ಜ್ಞಾನ ಪರಂಪರೆಯ ಬಗ್ಗೆ ವಿದ್ಯಾರ್ಥಿ ಸಮುದಾಯ ಅಭಿಮಾನ ಹಾಗೂ ಆಸಕ್ತಿ ಮೂಡಿಸಿಕೊಳ್ಳಬೇಕಾಗಿದೆ. ವಿದೇಶಿಯ ಕ್ರೈಸ್ತ ಮಿಶನರಿಗಳು ಭಾರತೀಯ ಪರಂಪರೆಯ, ಭಾಷೆ, ಸಂಸ್ಕೃತಿಯ ಕುರಿತು ಆಸಕ್ತಿ ವಹಿಸಿ ಜ್ಞಾನ ಪರಂಪರೆಗಳನ್ನು ಗುರುತಿಸಿ ಪ್ರಕಟಿಸುವ ಕಾರ್ಯ ನಡೆಸಿದರು ಎಂದರು.

ard_souza_datti_4 ard_souza_datti_5

ಕನ್ನಡ ಸಂಘದ ಸಂಯೋಜಕಿ ಜೀವಿತಾ ಸ್ವಾಗತಿಸಿದರು. ನಿತೇಶ್ ಧನ್ಯವಾದ ಸಮರ್ಪಿಸಿದರು. ವಿನುತಾ ಕಾರ್ಯಕ್ರಮ ನಿರೂಪಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಮಂಗಳೂರು ತಾಲೂಕು ಘಟಕದ ಅಧ್ಯಕ್ಷೆ ವಿಜಯಲಕ್ಷ್ಮಿ ಬಿ. ಶೆಟ್ಟಿ, ಕಾರ್ಯದರ್ಶಿ ದೇವಕಿ ಅಚ್ಚುತ, ಗೌರವ ಕೋಶಾಧಿಕಾರಿ ಪ್ರೊ. ಪಿ. ಕೃಷ್ಣಮೂರ್ತಿ, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಗೌರವ ಕೋಶಾಧಿಕಾರಿ ಪೂರ್ಣಿಮಾ ರಾವ್ ಪೇಜಾವರ, ಕಾಲೇಜಿನ ಕನ್ನಡ ಸಂಘದ ಅಧ್ಯಕ್ಷೆ ರುಕ್ಮಿಣಿ ಉಪಸ್ಥಿತರಿದ್ದರು.

Comments are closed.