ಕರಾವಳಿ

ಭಾರೀ ಗಾಳಿ, ಮಳೆ, ಸಿಡಿಲು : ಪ್ರತ್ಯೇಕ ಸ್ಥಳಗಳಲ್ಲಿ ಸಿಡಿಲಿಗೆ ಇಬ್ಬರು ಬಲಿ

Pinterest LinkedIn Tumblr

Thunder_Lightning_Pics

ಬೆಳ್ತಂಗಡಿ : ಸೋಮವಾರ ಸಂಜೆ ಸುರಿದ ಭಾರೀ ಗಾಳಿ ಮಳೆಯೊಂದಿಗೆ ಅಪ್ಪಳಿಸಿದ ಸಿಡಿಲಿಗೆ ಪ್ರತ್ಯೇಕ ಸ್ಥಳಗಳಲ್ಲಿ ಇಬ್ಬರು ಮೃತಪಟ್ಟ ಘಟನೆ ಸಂಭವಿಸಿದೆ.

ಮೃತಪಟ್ಟವರನ್ನು ಪುತ್ತೂರು ತಾಲೂಕಿನ ನೆಲ್ಯಾಡಿ ಗ್ರಾಮದ ಕೊಪ್ಪಮಾದೇರಿಯ ಕೊರಡೇಲು ನಿವಾಸಿ ಕೂಲಿ ಕಾರ್ಮಿಕ ನವೀನ್‌ ಕುಮಾರ್‌ (35) ಮತ್ತು ಬೆಳ್ತಂಗಡಿ ತಾಲೂಕು ಕರಂಬಾರಿನ ಕಲ್ಲಾಜೆ ಶಾಲೆ ಬಳಿಯ ನಿವಾಸಿ ಕೃಷಿಕ ನೀಲಯ್ಯ ಪೂಜಾರಿ (60) ಎಂದು ಗುರುತಿಸಲಾಗಿದೆ.

ಮೂಲತಃ ಚಿಕ್ಕಮಗಳೂರಿನವರಾದ ನವೀನ್ ಕುಮಾರ್ ಕೊರಡೇಲುವಿನಲ್ಲಿ ಪತ್ನಿ ಹಾಗೂ ತಂದೆಯೊಂದಿಗೆ ವಾಸವಿದ್ದು, ಕೂಲಿ ಕೆಲಸ ಮಾಡುತ್ತಿದ್ದರು. ಸೋಮವಾರ ಸಂಜೆ ಈ ಪರಿಸರದಲ್ಲಿ ಭಾರೀ ಸಿಡಿಲಿನೊಂದಿಗೆ ಮಳೆಯಾಗಿದ್ದು, ಕೂಲಿ ಕೆಲಸದಿಂದ ಬಂದ ನವೀನ್ ಈ ಸಂದರ್ಭ ಮನೆಯೊಳಗೆ ಕಿಟಕಿಯ ಬಳಿ ನಿಂತುಕೊಂಡಿದ್ದರು.

ಅಷ್ಟರಲ್ಲಿ ಮನೆ ಸಮೀಪದ ಬಿದಿರ ಮೆಳೆಗೆ ಅಪ್ಪಳಿಸಿದ ಸಿಡಿಲು ಮನೆಯ ವಿದ್ಯುತ್‌ ಸಂಪರ್ಕದ ಮೂಲಕ ಮನೆಗೆ ವಿಸ್ತರಣೆಗೊಂಡಿತು. ಇದರ ಆಘಾತಕ್ಕೆ ನವೀನ್‌ ಕುಮಾರ್‌ ಕುಸಿದು ಬಿದ್ದರು. ಘಟನೆಯ ಸಂದರ್ಭ ಅಲ್ಲೇ ಇದ್ದ ನವೀನ್ ಕುಮಾರ್ ಅವರ ತಂದೆ ಕೃಷ್ಣೇ ಗೌಡ, ಪತ್ನಿ ಪುಷ್ಪಾವತಿ ಅಪಾಯದಿಂದ ಪಾರಾಗಿದ್ದಾರೆ. ಸಿಡಿಲು ಬಡಿದ ರಸಕ್ಕೆ ಬಿದಿರ ಮೆಳೆ ಚೂರುಚೂರಾಗಿದ್ದು, ಇವರ ಮನೆಗೂ ಹಾನಿಯಾಗಿದೆ. ವಿದ್ಯುತ್ ಉಪಕರಣಗಳು ಸುಟ್ಟು ಹೋಗಿವೆ.

ಘಟನೆ ನಡೆದ ಸಂದರ್ಭ ನವೀನ್‌ ಕುಮಾರ್‌ ಅವರ ತಂದೆ ಕೃಷ್ಣೇ ಗೌಡರು ಮಗನ ಹಿಂಬದಿಯ ಕುರ್ಚಿಯಲ್ಲೇ ಕುಳಿತಿದ್ದರು. ಇದ್ದಕ್ಕಿದ್ದಂತೆ ಹೊರಗಡೆಯಿಂದ ಬೆಂಕಿಯುಂಡೆ ಬಂದಂತೆ ಅನಿಸಿತು; ಕ್ಷಣಾರ್ಧದಲ್ಲಿ ಮಗ ಕುಸಿದು ಬಿದ್ದ ಎಂದು ಅವರು ತಿಳಿಸಿದ್ದಾರೆ.

ಮೃತದೇಹವನ್ನು ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ತರಲಾಗಿದ್ದು, ಸ್ಥಳಕ್ಕೆ ಪುತ್ತೂರು ತಹಶೀಲ್ದಾರ್‌ ಅನಂತ ಶಂಕರ, ಉಪತಹಶೀಲ್ದಾರ್‌ಗಳಾದ ಸದಾಶಿವ ನಾಯ್ಕ, ಶ್ರೀಧರ್‌ ಕೋಡಿಜಾಲ್‌, ಕಂದಾಯ ನಿರೀಕ್ಷಕ ಮಂಜುನಾಥ್‌, ಉಪ್ಪಿನಂಗಡಿ ಗ್ರಾಮ ಕರಣಿಕ ರಮಾನಂದ ಚಕ್ಕಡಿ ಆಗಮಿಸಿ, ಘಟನೆಯ ಮಾಹಿತಿ ಪಡೆದಿದ್ದಾರೆ.

ಕಳೆದ ದೀಪಾವಳಿಯ ಸಂದರ್ಭ ಈ ಪರಿಸರದಲ್ಲಿ ಎರಡು ಬಾರಿ ಸಿಡಿಲು ಬಡಿದಿತ್ತು. ಈ ಸಂದರ್ಭ ಕೃಷಿ ಹಾನಿಗೊಂಡಿತ್ತು. ಆದರೆ, ಈ ಎರಡು ಘಟನೆ ನಡೆದ ಬಳಿಕ ಕೆಲವೇ ದಿನಗಳ ನಂತರ ಬಡಿದ ಸಿಡಿಲು ಜೀವವೊಂದನ್ನು ಬಲಿಪಡೆದಿದೆ.

ಇನ್ನೊಂದು ಪ್ರಕರಣದಲ್ಲಿ ಶಿರ್ಲಾಲು ಗ್ರಾಮದ ಕರಂಬಾರು ಪರಿಸರದಲ್ಲಿ ಸಿಡಿಲಿನ ಆಘಾತಕ್ಕೆ ಕಲ್ಲಾಜೆ ಶಾಲೆ ಬಳಿಯ ನಿವಾಸಿ ಕೃಷಿಕ ನೀಲಯ್ಯ ಪೂಜಾರಿ ಕೃಷಿಕ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಸೋಮವಾರ ಸಂಜೆ ವೇಳೆಗೆ ಉತ್ತಮ ಮಳೆಯಾಗಿದ್ದು, ಭಾರೀ ಸದ್ದಿನೊಂದಿಗೆ ಸಿಡಿಲು ಬಡಿದಾಗ ಮನೆಯೊಳಗಿದ್ದ ನೀಲಯ್ಯ ಅವರಿಗೆ ಹೃದಯಾಘಾತವಾಗಿ ಸ್ಥಳದಲ್ಲೇ ಮೃತಪಟ್ಟರು. ಅವರು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅವರ ಪತ್ನಿ 4 ವರ್ಷದ ಹಿಂದೆಯೇ ನಿಧನಹೊಂದಿದ್ದರು.

Comments are closed.