ಕರಾವಳಿ

ಉಳ್ಳಾಲ : ದುಷ್ಕರ್ಮಿಗಳಿಂದ ಮದ್ರಸಕ್ಕೆ ತೆರಳುತ್ತಿದ್ದ ಬಾಲಕನಿಗೆ ಚೂರಿ ಇರಿತ

Pinterest LinkedIn Tumblr

ullala_boy-attacked

ಉಳ್ಳಾಲ: ಮದ್ರಸಕ್ಕೆ ತೆರಳುತ್ತಿದ್ದ ಬಾಲಕನಿಗೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳಿಬ್ಬರು ಚೂರಿಯಿಂದ ಕೈಗೆ ಇರಿದು ಗಾಯಗೊಳಿಸಿದ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ಕೈರಂಗಳದ ಲೆಕ್ಕೆಸಿರಿ ಎಂಬಲ್ಲಿ ನಿನ್ನೆ ಸಂಜೆ ನಡೆದಿದೆ.

ಚೂರಿ ಇರಿತಕ್ಕೊಳಗಾದ ಬಾಲಕನನ್ನು ಕೈರಂಗಳ ಗ್ರಾಮದ ಲೆಕ್ಕೆಸೆರಿ ಜಲ್ಲಿ ಕ್ರಾಸ್‌ ನಿವಾಸಿ ರಾಝಿಕ್ (11) ಎಂದು ಗುರುತಿಸಲಾಗಿದೆ.

ರಾಝಿಕ್ ತನ್ನ ಮನೆಯಿಂದ ಸ್ವಲ್ಪ ದೂರದಲ್ಲಿರುವ ಮದರಸಕ್ಕೆಂದು ಸಂಜೆ ವೇಳೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಮುಡಿಪು ಕಡೆಯಿಂದ ಎಫ್ ಝೀ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ರಾಝಿಕ್ ಬಳಿ ಬಂದು ಮದರಸಕ್ಕೆ ಹೋಗುವ ದಾರಿ ಯಾವುದು ಎಂದು ಕೇಳಿದ್ದಾರೆ. ಬಾಲಕ ಕೈ ಎತ್ತಿ ಮದರಸದತ್ತ ತೋರಿಸುತ್ತಿದ್ದಂತೆ ಚೂರಿಯಿಂದ ಕೈಗೆ ಇರಿದು ಬೈಕ್‌ ಸವಾರರು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಕೈಗೆ ಗಾಯಗೊಂಡಿರುವ ಬಾಲಕನನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಸ್ಪತ್ರೆಯ ಎದುರು ನೂರಾರು ಜನ ಸೇರಿದ್ದು, ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕೊಣಾಜೆ ಪೊಲೀಸರು ಹಲವರನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ.

ದುಷ್ಕರ್ಮಿಗಳು ಇಬ್ಬರೂ ಹೆಲ್ಮೆಟ್ ಧರಿಸಿದ್ದು, ಇದರಿಂದ ಗುರುತು ಸಾಧ್ಯವಾಗಲಿಲ್ಲ. ಶನಿವಾರದಂದು ಮಂಜನಾಡಿ ಸಮೀಪ ಶಮೀರ್ ಮತ್ತು ನವಾಝ್ ಇಬ್ಬರಿಗೂ ಇದೇ ರೀತಿಯಲ್ಲಿ ಎಫ್ ಝೀ ಬೈಕಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಚೂರಿ ಇರಿದಿದ್ದರು. ಅದೇ ತಂಡ ಕೃತ್ಯವನ್ನು ಎಸಗಿರುವ ಶಂಕೆ ವ್ಯಕ್ತವಾಗಿದೆ.

ತಲವಾರು ಸಹಿತಾ ಇಬ್ಬರ ಬಂಧನ :

ದ್ವಿಚಕ್ರ ವಾಹನದಲ್ಲಿ ಮಾರಕಾಸ್ತ್ರ ಸಾಗಿಸುತ್ತಿದ್ದ ಇಬ್ಬರನ್ನು ಕೊಣಾಜೆ ಪೊಲೀಸರು ತೌಡುಗೋಳಿ ಸಮೀಪ ವಶಕ್ಕೆ ತೆಗೆದುಕೊಂಡು ಸಿಸಿಬಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಮುಡಿಪು ನಿವಾಸಿ ಶರತ್ (25) ಹಾಗೂ ಹೂಹಾಕುವ ಕಲ್ಲು ನಿವಾಸಿ ಧನುಷ್ ((22) ಎಂದು ಗುರುತಿಸಲಾಗಿದೆ.

ಇಬ್ಬರು ಬೈಕಿನಲ್ಲಿ ತೆರಳುವ ಸಂದರ್ಭ ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸರು ಇಬ್ಬರನ್ನು ವಿಚಾರಣೆ ನಡೆಸಿದಾಗ ಬೈಕಿನ ಹಿಂಬದಿ ಕುಳಿತ್ತಿದ್ದ ಧನುಷ್ ಎಂಬಾತನ ಕೈಯಲ್ಲಿದ್ದ ಬ್ಯಾಗಿನಲ್ಲಿ ಎರಡು ತಲವಾರುಗಳು ಪತ್ತೆಯಾಗಿತ್ತು. ಈ ಸಂಬಂಧ ವಶಕ್ಕೆ ಪಡೆದುಕೊಂಡ ಕೊಣಾಜೆ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಸಿಸಿಬಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

Comments are closed.