ಕರಾವಳಿ

ಬಾಳಿಗ ಕೊಲೆ ಪ್ರಕರಣ : ಎಸಿಪಿ ತಿಲಕ್‌ಚಂದ್ರ ವರ್ಗಾವಣೆ ನಂತರ ತನಿಖೆ ಕುಂಠಿತ : ವಿಶೇಷ ತನಿಖಾ ತಂಡ ರಚನೆಗೆ ಆಗ್ರಹ

Pinterest LinkedIn Tumblr

Baliga_Murder_Press

ಮಂಗಳೂರು,ಆ.18: ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಪಿ. ಬಾಳಿಗಾರವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದ್ದರೂ ಇದುವರೆಗೆ ಪ್ರಕರಣದ ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡು ಬಂದಿಲ್ಲ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರಿಂದಲೇ ಪ್ರಮುಖ ಸಾಕ್ಷವನ್ನು ನಾಶಪಡಿಸಿರುವ ಬಗ್ಗೆಯೂ ಸಂಶಯವಿರುವುದರಿಂದ ಪ್ರಕರಣದ ಬಗ್ಗೆ ರಾಜ್ಯ ಸರಕಾರ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆಗೊಳಪಡಿಸಬೇಕು ಎಂದು ರಾಷ್ಟ್ರೀಯ ವಿಚಾರವಾದಿಗಳ ಸಂಘಟನೆಯ ಅಧ್ಯಕ್ಷ ಡಾ.ನರೇಂದ್ರ ನಾಯಕ್ ಆಗ್ರಹಿಸಿದ್ದಾರೆ.

ಗುರುವಾರ ನಗರದ ಪತ್ರಿಕಾಭವನದಲ್ಲಿ ಬಾಳಿಗಾರ ಕುಟುಂಬಸ್ಥರ ಹಾಗೂ ವಿವಿಧ ಸಂಘಟನೆಗಳ ಪರವಾಗಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತನಿಖಾ ತಂಡ ರಚನೆಗೆ ಆಗ್ರಹಿಸಿ ಈಗಾಗಲೇ ವಿನಾಯಕ ಬಾಳಿಗಾರ ಕುಟುಂಬ ಹೈಕೋರ್ಟ್‌ಗೆ ಮನವಿ ಅರ್ಜಿ ಸಲ್ಲಿಸಿದೆ ಎಂದು ಹೇಳಿದರು.

ವಿನಾಯಕ ಬಾಳಿಗರು ದೇವಸ್ಥಾನ ಹಾಗೂ ಕಾಶೀ ಮಠಕ್ಕೆ ಬರೆದಿದ್ದ ಕೆಲವೊಂದು ಪತ್ರಗಳು ಮಾಯವಾಗಿವೆ. ವಿನಾಯಕ ಬಾಳಿಗಾರ ಮನೆಯವರಿಂದ ಇದನ್ನು ಕೊಂಡೊಯ್ದ ಪೊಲೀಸ್ ಸಿಬ್ಬಂದಿಯೇ ಈ ಪ್ರಮುಖ ಸಾಕ್ಷವನ್ನು ನಾಶ ಮಾಡಿರುವ ಬಗ್ಗೆ ಅನುಮಾನವಿದೆ. ಪೊಲೀಸ್ ಆಯುಕ್ತ ಚಂದ್ರಶೇಖರ್ ಅವರ ಮುತುವರ್ಜಿಯಲ್ಲಿ ಪ್ರಕರಣ ಈ ಹಂತಕ್ಕೆ ತಲುಪಲು ಕಾರಣವಾಗಿದೆ. ಆದರೆ ಕೆಳ ಮಟ್ಟದ ಕೆಲ ಪೊಲೀಸ್ ಸಿಬ್ಬಂದಿಯಿಂದಾಗಿ ಪ್ರಕರಣವನ್ನು ತಳಹಿಡಿಸುವ ಪ್ರಯತ್ನವೂ ಸಾಗಿರುವ ಬಗ್ಗೆ ನಮಗೆ ಬಲವಾದ ಸಂಶಯವಿದೆ. ಅದಕ್ಕೆ ಕಾರಣ. ಪ್ರಮುಖ ಆರೋಪಿ ನರೇಶ್ ಶೆಣೈ ಬಂಧನವಾಗಿ ಎರಡು ತಿಂಗಳಾದರೂ ಪ್ರಕರಣದ ಪ್ರಮುಖ ರೂವಾರಿಗಳು, ಆರೋಪಿಗಳಿಗೆ ಸಹಕರಿಸಿದವರ ಬಗ್ಗೆ ಯಾವುದೇ ಮಾಹಿತಿ ಇನ್ನೂ ಬೆಳಕಿಗೆ ಬಂದಿಲ್ಲ. ಈ ನಿಟ್ಟಿನಲ್ಲಿ ತನಿಖೆ ಯಾವ ಹಂತದಲ್ಲಿ ಸಾಗುತ್ತಿದೆ ಎಂಬ ಬಗ್ಗೆಯೂ ಮಾಹಿತಿ ಇಲ್ಲ ಎಂದವರು ಹೇಳಿದರು.

2012ರಲ್ಲಿ ನಡೆದ ಮಹೇಶ್ ಪ್ರಭು ಕೊಲೆ ಹಾಗೂ ವಿನಾಯಕ ಬಾಳಿಗಾ ಕೊಲೆ ಪ್ರಕರಣಕ್ಕೂ ಸಂಬಂಧ ಇದೆ. ಆ ಪ್ರಕರಣದಲ್ಲೂ ನರೇಶ್ ಶೆಣೈ ಪಾತ್ರ ಇದೆ, ಆ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣ ಅಂತ್ಯಗೊಂಡು ಅದರ ಪ್ರಮುಖ ಆರೋಪಿ ನಂದ ಕುಮಾರ್ ಪ್ರಭು ಖುಲಾಸೆಗೊಂಡಿದ್ದಾನೆ. ಅದು ಈ ಪ್ರಕರಣದಲ್ಲಿ ಆರೋಪಿಗಳಿಗೆ ಮತ್ತಷ್ಟು ಧೈರ್ಯ ತುಂಬಿರುವಂತಿದೆ. ಅದೇ ರೀತಿಯಲ್ಲಿ ಈ ಕೊಲೆ ಪ್ರಕರಣವೂ ನಡೆದಿರುವುದು ಕಂಡು ಬರುತ್ತಿರುವುದರಿಂದ ಆ ಪ್ರಕರಣವನ್ನು ಮರು ತನಿಖೆಗೊಳಪಡಿಸಬೇಕು ಎಂದು ಡಾ. ನರೇಂದ್ರ ನಾಯಕ್ ಆಗ್ರಹಿಸಿದರು.

ಸ್ಥಳೀಯ ಪೊಲೀಸರು ಪ್ರಕರಣ ತಳ ಹಿಡಿಯುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ಮಾಡಿರುವ ಅನುಮಾನ ಕಾಡುತ್ತಿದೆ. ಎಸಿಪಿ ತಿಲಕ್ಚಂದ್ರ ತನಿಖಾಧಿಕಾರಿಯಾಗಿದ್ದ ವೇಳೆ ಪ್ರಕರಣದ ತನಿಖೆ ಚುರುಕಾಗಿ ಸಾಗಿತ್ತು. ಅವರ ವರ್ಗಾವಣೆ ಬಳಿಕ ತನಿಖೆ ಮತ್ತೆ ಕುಂಟುತ್ತಾ ಸಾಗಿದೆ ಎಂದು ನರೇಂದ್ರ ನಾಯಕ್ ಆರೋಪಿಸಿದರು. ಪೊಲೀಸ್ ಆಯುಕ್ತ ಎಂ. ಚಂದ್ರಶೇಖರ್ ಅವರ ನೇತೃತ್ವದಲ್ಲಿ ಹೊರಗಿನ ಪೊಲೀಸ್ ಅಧಿಕಾರಿಗಳ ವಿಶೇಷ ತನಿಖಾ ತಂಡ ತನಿಖೆಗೂ ನಮ್ಮ ಅಭ್ಯಂತರವಿಲ್ಲ. ಆಯುಕ್ತ ಚಂದ್ರಶೇಖರ್ ಅವರು ಈ ಪ್ರಕರಣದಲ್ಲಿ ಪ್ರಾಮಾಣಿಕತೆಯಿಂದ ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ, ಆ ಬಗ್ಗೆ ನಮಗೆ ಅವರ ಬಗ್ಗೆ ಗೌರವವಿದೆ ಎಂದು ಡಾ. ನರೇಂದ್ರ ನಾಯಕ್ ಹೇಳಿದರು.

ಸಮುದಾಯದವರು ಸಾಂತ್ವಾನ ಹೇಳಲಿಲ್ಲ : ಸಹೋದರಿ ಹರ್ಷಾ ಬಾಳಿಗಾ ಬೇಸರ 

Baliga_Murder_Press2ವಿನಾಯಕ ಬಾಳಿಗಾರ ಸಹೋದರಿ ಹರ್ಷಾ ಬಾಳಿಗಾ ಅವರು,ಮಾತನಾಡಿ, ನಮ್ಮ ಸಹೋದರನ ಹತ್ಯೆ ನಡೆದು ಇಷ್ಟು ದಿನಗಳಾಯಿತು.ಇದುವರೆಗೂ ನಮ್ಮ ಸಮುದಾಯದ ಯಾರೊಬ್ಬರೂ ನಮಗೆ ಸಾಂತ್ವಾನ  ಹೇಳಲು ಮುಂದೆ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಡಿವೈಎಫ್‌ಐನ ಸಂತೋಷ್ ಕುಮಾರ್ ಬಜಾಲ್, ದಲಿತ ಸಂಘರ್ಷ ಸಮಿತಿಯ ರಘು ಎಕ್ಕಾರು, ಆರ್ಟಿಐ ಕಾರ್ಯಕರ್ತ ಗಣೇಶ್ ಬಾಳಿಗಾ ಮತ್ತಿತ್ತರರು ಉಪಸ್ಥಿತರಿದ್ದರು.

Comments are closed.