ಕುವೈತ್ ಸಿಟಿ: ಇಂಡಿಯನ್ ಸೋಷಿಯಲ್ ಫೋರಂ ಕರ್ನಾಟಕ ಚಾಪ್ಟರ್ ಇದರ ವತಿಯಿಂದ 70ನೇ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆಯು ಆಗಸ್ಟ್ 15 ರಂದು ಕುವೈಟಿನ ಸಾಲ್ಮಿಯಾ ಹಾಲಿನಲ್ಲಿ ನಡೆಯಿತು. ರಾಷ್ಟ್ರೀಯ ಏಕತಾ ಹಾಡಿನೊಂದಿಗೆ ಸಂಜೆ 7.30ಕ್ಕೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಕುವೈಟಿನ ವಿವಿಧ ಭಾಗಗಳಿಂದ ಬಂದ ಅನಿವಾಸಿ ಕನ್ನಡಿಗರು ಪಾಲ್ಗೊಂಡರು.
ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದ ಬೆಲ್ಲೆವಿಷನ್ ಕುವೈತ್ ಇದರ ಅಧ್ಯಕ್ಷರಾದ ಸ್ಟಾನೀ ಮಾರ್ಟಿಸ್ ಅವರು ಸಭಿಕರನ್ನುದ್ದೇಶಿಸಿ ಮಾತನಾಡಿ, ವಿವಿಧ ಭಾಷೆ, ಧರ್ಮಗಳನ್ನೊಳಗೊಂಡ ಒಂದು ಬಹು ಸಂಸ್ಕೃತಿಯ ದೇಶ ನಮ್ಮದು ಈ ಸಾಮರಸ್ಯದ ಸಂಬಂಧವು ಮುರಿದು ಬೀಳದಂತೆ ರಕ್ಷಿಸಿಕೊಂಡು ಹೋಗಬೇಕಾದ ಮಹತ್ವದ ಜವಾಬ್ದಾರಿಯೂ ದೇಶವಾಸಿಗಳಾದ ನಮ್ಮೆಲ್ಲರ ಮೇಲಿದೆ ಎಂದರು. ವಿಶ್ವದಾದ್ಯಂತ ಹಿಂಸೆಯು ತಾಂಡವಾಡುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ನಮ್ಮ ಪೂರ್ವಿಕರು ಸ್ವಾತಂತ್ರ್ಯಕ್ಕಾಗಿ ನಡೆಸಿದ ಅಹಿಂಸಾ ಚಳುವಳಿಯು ನಮಗೆ ಮಾದರಿಯಾಗಿದೆ ಎಂದು ನುಡಿದರು.
ಐಎಸ್‌ಎಫ್ ಕೇಂದ್ರ ಸಮಿತಿ ಉಪಾಧ್ಯಕ್ಷರಾದ ಅಲಾವುದ್ದೀನ್ ಅಯ್ನುಲ್ ಹಖ್ ಬಿಹಾರ ಅವರು ಸಮಾರಂಭದ ಆದ್ಯಕ್ಷತೆ ವಹಿಸಿ ಮಾತನಾಡುತ್ತಾ, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಗಳ ಕಡೆ ಬೆಳಕು ಚೆಲ್ಲಿದರು.
ಮುಖ್ಯ ಭಾಷಣಗೈದ ಐಎಸ್‌ಎಫ್ ಕರ್ನಾಟಕ ಚಾಪ್ಟರ್ ಪ್ರಧಾನ ಕಾರ್ಯದರ್ಶಿ ಇಮ್ತಿಯಾಝ್ ಅಹ್ಮದ್ ಆರ್ಕುಳ ಅವರು ಸ್ವಾತಂತ್ರ್ಯದ ಪರಿಕಲ್ಪನೆ ಮತ್ತು ಅದರ ಅಗತ್ಯತೆಯ ಬಗ್ಗೆ ಸವಿವಾರವಾಗಿ ತಿಳಿಸಿದರು. ಸ್ವಾತಂತ್ರ್ಯ ಸಮರದ ಉದ್ದೇಶವು ನಮ್ಮ ದೇಶದಲ್ಲಿ ಬರೀ ಆಡಳಿತ ಬದಲಾಯಿಸುದಾಗಿರಲಿಲ್ಲ ಬದಲಾಗಿ ನಮ್ಮ ಬೇಕು ಬೇಡಗಳನ್ನು ನಿಯಂತ್ರಿಸುವ ಪರಕೀಯ ಶಕ್ತಿಗಳಿಂದ ಮುಕ್ತಿ ಪಡೆಯುವುದಾಗಿತ್ತೆಂದ ಅವರು ನಮ್ಮ ಪ್ರಸಕ್ತ ವಿದೇಶಿ ನೀತಿಗಳು ನಮ್ಮನ್ನು ಮತ್ತೆ ಗುಲಾಮಗಿರಿಗೆ ತಂದೊಡ್ಡುವ ಎಲ್ಲಾ ಮುನ್ಸೂಚನೆಗಳು ಗೋಚರಿಸುತ್ತಿದೆ ಎಂದರು. ಅಂದು ನಮ್ಮನ್ನು ಈಸ್ಟ್ ಇಂಡಿಯಾ ಕಂಪನಿ ಆಳ್ವಿಕೆ ನಡೆಸಿದ್ದರೆ ಇವತ್ತು ಬಹು ರಾಷ್ಟ್ರೀಯ ಕಂಪನಿಗಳು ಆಳುತ್ತಿದೆ ಎಂದು ಮಾರ್ಮಿಕವಾಗಿ ನುಡಿದ ಆರ್ಕುಳ ಅವರು ಸರ್ವ ಜಾತಿ ಜನಾಂಗಗಳ ಶಾಂತಿಯ ತೋಟವಾಗಿದ್ದ ಭಾರತ ಇಂದು ಕೆಲವೊಂದು ವಿಭಾಗೀಯ ಶಕ್ತಿಗಳಿಂದಾಗಿ ಅಪಾಯದಲ್ಲಿದೆ ಎಂದು ಎಚ್ಚರಿಸಿದರು. ದೇಶಪ್ರೇಮ ಎಂಬುವುದು ದೇಶವನ್ನು ಪ್ರೀತಿಸುವುದು ಮಾತ್ರವಲ್ಲದೆ ತನ್ನ ದೇಶವಾಸಿಗಳನ್ನು ತನ್ನವರೆಂದು ಬಗೆದು ಪ್ರೀತಿಸುವುದೂ ಆಗಿದೆ ಎಂಬ ‘ಚಾರ್ಲ್ಸ್ ಡಿ ಗಾಲೆ’ಯವರ ಮಾತುಗಳನ್ನು ಉಲ್ಲೇಕಿಸಿದ ಅವರು, ಸಂವಿದಾನ ಮತ್ತು ಅದರ ಮೌಲ್ಯಗಳ ರಕ್ಷಣೆಗಾಗಿ ಜಾತ್ಯಾತೀತ ಹಿಂದೂ ಮುಸ್ಲಿಂ ಕ್ರೈಸ್ತರೆಲ್ಲರೂ ಒಂದಾಗಿ ಹೋರಾಡುವುದು ಕಾಲದ ಬೇಡಿಕೆಯಾಗಿದೆ ಎಂದು ಕರೆ ನೀಡಿದರು.
ಕುವೈತ್ ಮಣಿಪುರ ಎಸೋಸಿಯೇಶನ್ ಅಧ್ಯಕ್ಷರಾದ ಸಯ್ಯದ್ ಬ್ಯಾರಿ ಅವರೂ ಸಭಿಕರನ್ನುದ್ದೇಶಿಸಿ ಸಾಂದರ್ಭಿಕವಾಗಿ ಮಾತನಾಡಿದರು. ಕೆಐಎಫ್ಎಫ್ ಕರ್ನಾಟಕ ಚಾಪ್ಟರ್ ಅಧ್ಯಕ್ಷರಾದ ಮುಸ್ತಕೀಮ್ ಅವರೂ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಐಎಸ್‌ಎಫ್ ಕರ್ನಾಟಕ ಚಾಪ್ಟರ್ ಅಧ್ಯಕ್ಷರಾದ ಜನಾಬ್ ರಫೀಕ್ ಮಂಚಿ ಸ್ವಾಗತಿಸಿದರು. ತಂಝೀಲ್ ಕಲ್ಲಾಪು ಧನ್ಯವಾದಗೈದರು. ತಮೀಮ್ ಉಳ್ಳಾಲ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮವು ರಾಷ್ಟ್ರಗೀತೆಯೊಂದಿಗೆ ಸಮಾರೋಪಗೊಂಡಿತು. ಕಾರ್ಯಕ್ರಮದ ಕೊನೆಯಲ್ಲಿ ಸಿಹಿ ತಿಂಡಿ ವಿತರಿಸಲಾಯಿತು.
Comments are closed.