ಮಂಗಳೂರು, ಆ.14 : ಕ್ಷುಲ್ಲಕ ವಿಚಾರಕ್ಕಾಗಿ ಮಾತಿಗೆ ಮಾತು ಬೆಳೆದು ಭಿನ್ನಕೋಮಿಗೆ ಸೇರಿದ ಯುವಕರ ತಂಡ ಘರ್ಷಣೆಗಿಳಿದ ಘಟನೆ ಕೈಕಂಬ ಪೇಟೆಯಲ್ಲಿ ನಿನ್ನೆ ರಾತ್ರಿ ನಡೆದಿದ್ದು, ಘಟನೆಯಲ್ಲಿ ದುಷ್ಕರ್ಮಿಗಳ ಗುಂಪು ಮನೆಯೊಂದಕ್ಕೆ ಕಲ್ಲು ತೂರಾಟ ನಡೆಸಿ ಹಾನಿಯೆಸಗಿದೆ.
ಕಾರು ಚಾಲಕ ರಸ್ತೆಯಿಂದ ಹಠಾತ್ ತಿರುವು ಪಡೆದುಕೊಂಡ ವೇಳೆ ಹಿಂಬದಿಯಲ್ಲಿದ್ದ ಬೈಕ್ ಕಾರಿಗೆ ಗುದ್ದಿದ ವಿಚಾರವನ್ನು ಮುಂದಿಟ್ಟುಕೊಂಡು ಈ ಘರ್ಷಣೆ ಶುರುವಾಗಿದೆ ಎನ್ನಲಾಗಿದೆ.
ಕೈಕಂಬ ನಿವಾಸಿಯಾಗಿರುವ ವಿನ್ಸಿ ರಾಡ್ರಿಗಸ್ ಎಂಬವರು ತಮ್ಮ ಮನೆಯ ಸಮೀಪ ರಸ್ತೆಯಲ್ಲಿ ಕಾರನ್ನು ಏಕಾಏಕಿ ತಿರುಗಿಸಿದ್ದು ಈ ವೇಳೆ ಹಿಂಬದಿಯಲ್ಲಿದ್ದ ಬೈಕ್ ಸವಾರ ನಿಶಾಂತ್ ನಿಯಂತ್ರಣ ಕಳೆದುಕೊಂಡು ಬೈಕನ್ನು ಕಾರ್‌ಗೆ ಡಿಕ್ಕಿ ಹೊಡೆಸಿದ್ದಾರೆ.
ಈ ವೇಳೆ ವಿನ್ಸಿ ಹಾಗೂ ನಿಶಾಂತ್ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಪರಸ್ಪರ ಹೊಡೆದಾಡಿಕೊಂಡಿದ್ದಾರೆ ಎನ್ನಲಾಗಿದೆ. ಇಷ್ಟಾಗುತ್ತಲೇ ನಿಶಾಂತ್ ಕೈಕಂಬದಲ್ಲಿರುವ ತನ್ನ ಸ್ನೇಹಿತರಿಗೆ ಕರೆ ಮಾಡಿ ಘಟನಾಸ್ಥಳಕ್ಕೆ ಕರೆದಿದ್ದಾನೆ. ಸ್ಥಳಕ್ಕೆ ಬಂದ ರಾಜೇಶ್ ಮತ್ತಿತರರು ವಿನ್ಸಿಯ ಮನೆಗೆ ಕಲ್ಲು ತೂರಾಟ ನಡೆಸಿದ್ದಾರೆ.
ಮಾಹಿತಿ ಪಡೆದುಕೊಂಡ ಬಜ್ಪೆ ಠಾಣಾ ಸರ್ಕಲ್ ಇನ್‌ಸ್ಪೆಕ್ಟರ್ ಟಿ.ಡಿ.ನಾಗರಾಜ್ ಮತ್ತು ಸಿಬ್ಬಂದಿ ಘಟನಾಸ್ಥಳದಲ್ಲಿ ಸೇರಿದ್ದವರನ್ನು ಚದುರಿಸಿ ವಿನ್ಸಿ, ನಿಶಾಂತ್ ಸೇರಿದಂತೆ ಇತ್ತಂಡಗಳ ಹಲವರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ. ಆರೋಪಿಗಳ ವಿರುದ್ಧ ಐಪಿಸಿ ಸೆ. 427, 160ರನ್ವಯ ನಷ್ಟ ಹಾಗೂ ಸಾರ್ವಜನಿಕ ಶಾಂತಿಭಂಗ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ.
Comments are closed.