ಕರಾವಳಿ

ಪಾಕೆಟ್ ಮನಿ ಉಳಿಸಿ ಸಮಾಜ ಸೇವೆ : ಮಂಗಳೂರಿನ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿಗಳಿಂದ ವಿಶಿಷ್ಟ ಪ್ರಯೋಗ

Pinterest LinkedIn Tumblr

St_alosiyas_Press

ಮಂಗಳೂರು, ಆ.12: ಮಂಗಳೂರಿನ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿಗಳು ವಿಶಿಷ್ಟ ರೀತಿಯ ಸಮಾಜ ಸೇವೆಯ ಮೂಲಕ ಗಮನ ಸೆಳೆದಿದ್ದಾರೆ. ಮನೆಯಲ್ಲಿ ತಮಗೆ ನೀಡಲಾಗುವ ‘ಪಾಕೆಟ್ ಮನಿ’ಯಲ್ಲಿ ಸ್ವಲ್ಪ ಹಣವನ್ನು ಸಂಗ್ರಹಿಸಿ ಅದನ್ನು ಅಗತ್ಯ ಇರುವವರಿಗೆ ವಿವಿಧ ರೂಪದಲ್ಲಿ ಪೂರೈಸುವ ಮೂಲಕ ಮಾನವೀಯತೆಯ ಕಾರ್ಯದಲ್ಲಿ ತೊಡಗಿದ್ದಾರೆ.

ಈ ಬಗ್ಗೆ ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅಲೋಶಿಯಸ್ ಕಾಲೇಜಿನ ಪದವಿ ಕಾಲೇಜಿನ ವಿದ್ಯಾರ್ಥಿ ಹಾಗೂ ಕಾರ್ಯಕ್ರಮ ಸಂಯೋಜಕ ಸುಹಾನ್ ಆಳ್ವ ಅವರು, 2014ರಿಂದ ‘ಕೋಸ್’ ಎಂಬ ಸಮಿತಿಯನ್ನು ರಚಿಸಿಕೊಂಡಿರುವ ವಿದ್ಯಾರ್ಥಿಗಳು ಕಳೆದ ಎರಡು ವರ್ಷಗಳಿಂದ ಹಲವು ಕಾರ್ಯಕ್ರಮಗಳ ಮೂಲಕ ನಗರದ ಸಂವೇದನಾ, ಪ್ರೀತಿ ಸದನ, ಸ್ನೇಹಸದನ, ಆವೆ ಮರಿ ಮೊದಲಾದ ಸಂಸ್ಥೆಗಳಿಗೆ ನೆರವಿನ ಹಸ್ತವನ್ನು ನೀಡಿದ್ದಾರೆ. ಇದಕ್ಕಾಗಿ ವಿದ್ಯಾರ್ಥಿಗಳು ತಾವಾಗಿಯೇ ತಮ್ಮ ಪಾಕೆಟ್ ಮನಿಯ ಸ್ವಲ್ಪ ಭಾಗವನ್ನು ಇದಕ್ಕಾಗಿ ಮೀಸಲಿರಿಸುವುದು ಮಾತ್ರವಲ್ಲದೆ, ವಿವಿಧ ನಗರದ ಸಿಟಿ ಸೆಂಟರ್ ಹಾಗೂ ಫೋರಂ ಫಿಝಾ ಮಾಲ್ಗಳಲ್ಲಿ ವಿದ್ಯಾರ್ಥಿಗಳಿಂದಲೇ ತಯಾರಿಸಿದ ಚಾಕಲೇಟುಗಳು, ಗ್ಲಾಸ್ ಪೇಯ್ಟಿಂಗ್, ಬುಕ್‌ಮಾರ್ಕ್‌ಗಳು, ಕಪ್ ಕೇಕ್ ಮೊದಲಾದವುಗಳನ್ನು ಮಾರಾಟ ಮಾಡಿ ಬಂದ ಹಣವನ್ನೂ ತಮ್ಮ ಸಮಾಜ ಸೇವೆಗೆ ಉಪಯೋಗಿಸುತ್ತಿದ್ದಾರೆ ಎಂದು ಹೇಳಿದರು.

ಕಾಲೇಜಿನ ಪಿಯುಸಿ ಹಾಗೂ ಪದವಿ ತರಗತಿಗಳ ವಿದ್ಯಾರ್ಥಿಗಳ ಜತೆ ಹಳೆ ವಿದ್ಯಾರ್ಥಿಗಳು ಮಾತ್ರವಲ್ಲದೆ, ಕಾಲೇಜು ಆಡಳಿತ ಮಂಡಳಿ ಕೂಡಾ ವಿದ್ಯಾರ್ಥಿಗಳ ಈ ಸಮಾಜ ಸೇವೆಯಲ್ಲಿ ಕೈಜೋಡಿಸಿದ್ದಾರೆ.ಈ ಸಾಲಿನಲ್ಲಿ ಸೈಂಟ್ ಅಲೋಶಿಯಸ್ನ ಸಂಧ್ಯಾ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಕಾಲೇಜಿನ ಅರ್ಹ ವಿದ್ಯಾರ್ಥಿಗಳಿಗೆ ಸುಮಾರು 75,000 ರೂ. ಮೌಲ್ಯದ ಪುಸ್ತಕಗಳನ್ನು ವಿತರಿಸಿದ್ದಾರೆ. ಈ ರೀತಿ ವಿದ್ಯಾರ್ಥಿಗಳಿಂದಲೇ ಸಂಗ್ರಹಿಸಲಾಗುವ ಹಣವನ್ನು ಮನೆ ನಿರ್ಮಾಣ ಹಾಗೂ ವಿವಿಧ ಸಂಸ್ಥೆಗಳಿಗೆ ದೇಣಿಗೆ ರೂಪದಲ್ಲಿ ನೀಡುವ ಮೂಲಕ ಸಮಾಜ ಸೇವೆಯಲ್ಲಿ ತಮ್ಮನ್ನು ಕಾಲೇಜು ವಿದ್ಯಾರ್ಥಿಗಳು ತೊಡಗಿಸಿಕೊಂಡಿದ್ದಾರೆ.

ಕೋಸ್ ಸಮಿತಿ ವತಿಯಿಂದ ನಗರದ ಸಿಟಿ ಸೆಂಟರ್ ಮಾಲ್ನಲ್ಲಿ ವಿವಿಧ ವಸ್ತುಗಳ ಮಾರಾಟ ಮಳಿಗೆಯಿಂದ 53,000 ರೂ.ಗಳನ್ನು ಸಂಗ್ರಹಿಸಲಾಗಿದೆ. ಆ. 13 ಮತ್ತು 14ರಂದು ನಗರದ ಫೋರಂ ಫಿಝಾ ಮಾಲ್ನಲ್ಲಿಯೂ ಈ ಮಾರಾಟ ಮಳಿಗೆಯನ್ನು ಏರ್ಪಡಿಸಲಾಗಿದೆ. ಆ. 15ರಂದು ಫೋರಂ ಫಿಝಾ ಮಾಲ್ನಲ್ಲಿ ವಿಶೇಷ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ ಎಂದು ಸುಹಾನ್ ತಿಳಿಸಿದರು.

”2014ರಲ್ಲಿ ನಾವು ನಮ್ಮ ಕೋಸ್ ಸಮಿತಿಯನ್ನು ರಚಿಸಿ ಸುರತ್ಕಲ್ನಲ್ಲಿ ಬಡ ಕುಟಂಬವೊಂದು ಮನೆ ಕಟ್ಟಲು ಆರಂಭಿಸಿ ಅದನ್ನು ಪೂರ್ಣಗೊಳಿಸಲು ಹಣದ ಕೊರತೆಯಿರುವ ಬಗ್ಗೆ ನಮ್ಮ ಸಮಿತಿಗೆ ಬಂದ ಮನವಿ ಪತ್ರದ ಮೇರೆಗೆ ನಾವು ನಮ್ಮಲ್ಲಿದ್ದ 50,000 ರೂ.ಗಳನ್ನು ಒದಗಿಸಿದ್ದೆವು. ಇದಲ್ಲದೆ, ಅನಾಥಾಲಯ, ವೃದ್ಧಾಶ್ರಮಗಳಿಗೆ ನಾವು ಸಹಾಯ ಹಸ್ತವನ್ನು ನೀಡುತ್ತಿದ್ದೇವೆ. ಕಳೆದೆರಡು ವರ್ಷಗಳು ಹಾಗೂ ಈ ವರ್ಷ ಸೇರಿ ಒಟ್ಟು ಮೂರು ವರ್ಷಗಳಲ್ಲಿ ವಿದ್ಯಾರ್ಥಿಗಳೇ ಒಟ್ಟುಗೂಡಿಸಿದ 10 ಲಕ್ಷ ರೂ.ಗಳವರೆಗೆ ಸಮಾಜಸೇವೆಗೆ ವಿನಿಯೋಗಿಸುವ ಇರಾದೆ ಇದೆ” ಎಂದು ಸುಹಾನ್ ಆಳ್ವ ಹೇಳಿದರು.

ಕಾರ್ಯಕ್ರಮ ಸಂಯೋಜಕ ಮುಹಮ್ಮದ್ ಶಾವಾಝ್, ಸಮಿತಿ ಸದಸ್ಯರಾದ ಶರೀಫ್, ಅರ್ಝೂ ಅಹ್ಮದ್, ಅಮನ್ನಾ ಲಸ್ರಾದೋ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Comments are closed.