ಮಂಗಳೂರು, ಆ.12: ದುಬೈಯ ಬ್ಯಾರೀಸ್ ಕಲ್ಚರಲ್ ಫೋರಂ (ಬಿಸಿಎಫ್) ವತಿಯಿಂದ 14ನೆ ವರ್ಷದ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮವು ಇದೇ ಬರುವ ರವಿವಾರ ಆಗಸ್ಟ್ 14ರಂದು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಲೊಯೊಲಾ ಸಭಾಂಗಣದಲ್ಲಿ ಜರಗಲಿದೆ ಎಂದು ಬಿಸಿಎಫ್ ಉಪಾಧ್ಯಕ್ಷ ಹಾಗೂ ವಿದ್ಯಾರ್ಥಿ ವೇತನ ಸಮಿತಿಯ ಅಧ್ಯಕ್ಷ ಎಂ.ಇ. ಮೂಳೂರು ತಿಳಿಸಿದ್ದಾರೆ
ನಗರದ ಪತ್ರಿಕಾ ಭವನದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಕಾರ್ಯಕ್ರಮದಲ್ಲಿ ಪಿಯುಸಿಯಿಂದ ಸ್ನಾತಕೋತ್ತರ ಪದವಿಯ ತನಕ ಸುಮಾರು 600ಕ್ಕೂ ಅಧಿಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಹಾಗೂ ಉಡುಪಿ ಮತ್ತು ದ.ಕ. ಜಿಲ್ಲೆ ವಿಕಲಚೇತರಿಗೆ ಗಾಲಿ ಕುರ್ಚಿಗಳನ್ನು ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಮಹಿಳೆಯರಿಗೆ ಸ್ವಉದ್ಯೋಗಕ್ಕಾಗಿ ಹೊಲಿಗೆ ಯಂತ್ರಗಳನ್ನು ಉಚಿತವಾಗಿ ವಿತರಿಸಲಾಗುವುದು. ವಿದ್ಯಾರ್ಥಿ ವೇತನ ಸೇರಿದಂತೆ 25 ಲಕ್ಷ ರೂ. ವೌಲ್ಯದ ಸವಲತ್ತುಗಳನ್ನು ಈ ಸಂದರ್ಭ ವಿತರಿಸಲಾಗುವುದು ಎಂದು ಹೇಳಿದರು. .
ಕಾರ್ಯಕ್ರಮವು ಆ.14ರಂದು ಬೆಳಗ್ಗೆ 9:30ಕ್ಕೆ ಆರಂಭಗೊಳ್ಳಲಿದ್ದು, ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ಅಲ್ಹಾಜ್ ಇಬ್ರಾಹೀಂ ಮುಸ್ಲಿಯಾರ್ ಬೇಕಲ್ ದುಆಗೈಯುವರು.
ಈ ವೇಳೆ ನಡೆಯುವ ವೃತ್ತಿ ಮಾರ್ಗದರ್ಶನ ಶಿಬಿರವನ್ನು ಶಾಸಕ ಜೆ.ಆರ್.ಲೋಬೊ ಉದ್ಘಾಟಿಸುವರು. ಬಿಸಿಎಫ್ ಅಧ್ಯಕ್ಷ ಡಾ.ಬಿ.ಕೆ.ಯೂಸುಫ್ ಅಧ್ಯಕ್ಷತೆ ವಹಿಸುವರು. ಮುಡಾ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್ ಮುಖ್ಯ ಭಾಷಣ ಮಾಡುವರು.
ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಮುಹಮ್ಮದ್ ಹನೀಫ್, ಮನಪಾ ಆಯುಕ್ತ ಮುಹಮ್ಮದ್ ನಝೀರ್ ಮತ್ತಿತರ ಗಣ್ಯರು ಉಪಸ್ಥಿತರಿರುವರು.
ಸಂಪನ್ಮೂಲ ವ್ಯಕ್ತಿಯಾಗಿ ಯುಎಇ ಲಂಡನ್ ಅಮೆರಿಕ್ ಸಿಟಿ ಕಾಲೇಜಿನ ನಿರ್ದೇಶಕ ಡಾ.ಪ್ರೊ. ಕಾಪು ಮುಹಮ್ಮದ್, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ನ ಅಧ್ಯಕ್ಷ ರಿಯಾಝ್ ಅಹ್ಮದ್ ಭಾಗವಹಿಸುವರು.
ಮಧ್ಯಾಹ್ನ ವಿದ್ಯಾರ್ಥಿ ವೇತನ ಕಾರ್ಯಕ್ರಮಕ್ಕೆ ಚಾಲನೆ :
ಅಪರಾಹ್ನ 2:30ಕ್ಕೆ ನಡೆಯುವ ವಿದ್ಯಾರ್ಥಿ ವೇತನ, ವೀಲ್ ಚೆಯರ್ ಮತ್ತು ಹೊಲಿಗೆ ಯಂತ್ರ ವಿತರಣೆ ಕಾರ್ಯಕ್ರಮವನ್ನು ಬಿಸಿಎಫ್ ಮುಖ್ಯ ಸಲಹೆಗಾರ ಹಾಗೂ ಝೈನ್ ಇಂಟರ್ನ್ಯಾಷನಲ್ ಗ್ರೂಪ್ ಆಫ್ ಹೋಟೆಲ್ಸ್‌ನ ಆಡಳಿತ ನಿರ್ದೇಶಕ ಝಫರುಲ್ಲಾ ಖಾನ್ ಉದ್ಘಾಟಿಸುವರು.
ಯೆನೆಪೊಯ ವಿವಿ ಕುಲಾಧಿಪಿ ವೈ.ಅಬ್ದುಲ್ಲಾ ಕುಂಞಿ, ಫಿಝಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಬಿ.ಎಂ.ಫಾರೂಕ್ ಮುಖ್ಯ ಭಾಷಣ ಮಾಡುವರು. ಇದೇ ಸಂದರ್ಭದಲ್ಲಿ ಅಲ್ ಮುಝೈನ್ ಕಂಪೆನಿಯ ಮುಖ್ಯಸ್ಥ ಝಕರಿಯಾ ಜೋಕಟ್ಟೆಯವರಿಗೆ ‘ಸ್ಟಾರ್ ಆಫ್ ಬ್ಯಾರೀಸ್-2016’ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿರುವ ಒಂಬತ್ತು ಪ್ರತಿಭಾನ್ವಿತರನ್ನು ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೈದ ಓರ್ವ ಕ್ರೀಡಾಪಟುವನ್ನು ‘ಬಿಸಿಎಫ್ ಪ್ರಶಸ್ತಿ’ ನೀಡಿ ಅಭಿನಂದಿಸಲಾಗುವುದು ಎಂದು ಅವರು ತಿಳಿಸಿದರು.
ಬಿಸಿಎಫ್ ಪ್ರ. ಕಾರ್ಯದರ್ಶಿ ಡಾ.ಕಾಪು ಮುಹಮ್ಮದ್, ಉಪಾಧ್ಯಕ್ಷರಾದ ಅಬ್ದುಲ್ಲತೀಫ್ ಮುಲ್ಕಿ, ಅಫೀಖ್ ಹುಸೈನ್, ಪೋಷಕರಾದ ಬಿ.ಎಂ.ಮುಮ್ತಾಝ್ ಅಲಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಹಾಜಾರಿದ್ದರು.
Comments are closed.