ಉಡುಪಿ: ಬಹುಕೋಟಿ ಒಡೆಯ, ಸೌದಿ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ರಕ್ಷಿಸುವ ಸಲುವಾಗಿ ಪೊಲೀಸರು ಅತ್ಯಂತ ದುರ್ಬಲ ಎಫ್ಐಆರ್ ಸಿದ್ಧಪಡಿಸಿದ್ದಾರೆ ಎಂದು ಹಿರಿಯ ನ್ಯಾಯವಾದಿ ಶಾಂತಾರಾಮ ಶೆಟ್ಟಿ ಆರೋಪಿಸಿದ್ದಾರೆ.
ಭಾಸ್ಕರ ಶೆಟ್ಟಿಯವರ ತಾಯಿ ಗುಲಾಬಿ ಶೆಡ್ತಿ ಹಾಗೂ ಬಂಟ ಸಮುದಾಯದ ಮುಂದಾಳುಗಳ ಸಮ್ಮುಖದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶಾಂತಾರಾಮ ಶೆಟ್ಟಿ ಅವರು ಆರೋಪಿಗಳನ್ನು ರಕ್ಷಿಸಲು ಇಷ್ಟೊಂದು ದುರ್ಬಲ ಎಫ್ಐಆರ್ ಹಾಕಿದ್ದಾರೆ. ಪೊಲೀಸರ ತನಿಖೆ ಇದೇ ರೀತಿ ಮುಂದುವರಿದರೆ ಭಾಸ್ಕರ ಶೆಟ್ಟಿಯವರ ಕುಟುಂಬಕ್ಕಾಗಲಿ, ಸಮಾಜಕ್ಕಾಗಲಿ ನ್ಯಾಯ ಸಿಗುವುದು ಸಂದೇಹ. ಹಾಗಾಗಿ ಕೂಡಲೇ ಸರಕಾರ ತನಿಖಾಧಿಕಾರಿಯನ್ನಾಗಿ ದಕ್ಷ, ಪ್ರಾಮಾಣಿಕ ಅಧಿಕಾರಿಯನ್ನು ನೇಮಿಸಬೇಕು. ಚಿಕ್ಕಮಗಳೂರಿಗೆ ವರ್ಗವಾದ ಎಸ್‌ಪಿ ಅಣ್ಣಾಮಲೈ ಅವರನ್ನೇ ತನಿಖಾಧಿಕಾರಿಯನ್ನಾಗಿ ನೇಮಿಸಬೇಕು ಎಂದು ಒತ್ತಾಯಿಸಿದರು.
ದಕ್ಷ ಎಸ್ಪಿ ಕೆ. ಅಣ್ಣಾಮಲೈ ಚಿಕ್ಕಮಗಳೂರಿಗೆ ವರ್ಗವಾದ ಕೂಡಲೇ ಕೊಲೆ ನಡೆದಿದೆ. ಇದೊಂದು ಪೂರ್ವಯೋಜಿತ ಕೊಲೆ. ಆಸ್ತಿಗಾಗಿಯೇ ಈ ಕೃತ್ಯ ನಡೆದಿದೆ. ಆರಂಭದ ತನಿಖಾಧಿಕಾರಿಯಾಗಿದ್ದ ಗಿರೀಶ್ ಅವರ ಬದಲಿಗೆ ಎಎಸ್‌ಪಿ ಸುಮನ ಅವರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಲಾಗಿದೆ. ಈ ಪ್ರಕರಣವನ್ನು ಅಣ್ಣಾಮಲೈ ಅವರಿಗೆ ವಹಿಸಬೇಕು, ಅಣ್ಣಾಮಲೈ ಅವರಿಗೆ ಸರಿಯಾದ ತನಿಖೆ ನಡೆಸುವ ಸಾಮರ್ಥ್ಯ ಇದೆ ಎಂದವರು ಹೇಳಿದರು.
Comments are closed.