ಪುತ್ತೂರು, ಆ.11: ಪುತ್ತೂರು ತಾಲೂಕಿನ ಹಾರಾಡಿ ಶಾಲೆಯ ಶಾಲೆಯ ವಿದ್ಯಾರ್ಥಿ, 8ನೆ ತರಗತಿಯ ದಿವಿತ್ ರೈ ಸಾಹಸ (ಸಮಯ) ಪ್ರಜ್ಞೆಯಿಂದ ಹೆಚ್ಚುವರಿ ಶಿಕ್ಷಕರಾಗಿ ವರ್ಗಾವಣೆಗೊಂಡ ನಾಲ್ವರು ಶಿಕ್ಷಕರ ವರ್ಗಾವಣೆಗೆ ತಾತ್ಕಲಿಕವಾಗಿ ತಡೆ ಬಿದ್ದಿದೆ.
ಹಾರಾಡಿ ಶಾಲೆಯಿಂದ ಹೆಚ್ಚುವರಿ ಶಿಕ್ಷಕರಾಗಿ ವರ್ಗಾವಣೆಗೊಂಡ ನಾಲ್ವರು ಶಿಕ್ಷಕರನ್ನು ಮತ್ತೆ ಅದೇ ಶಾಲೆಯಲ್ಲಿ ಮುಂದುವರಿಸುವಂತೆ ಶಿಕ್ಷಣ ಇಲಾಖೆಯ ರಾಜ್ಯ ಆಯುಕ್ತರು ದ.ಕ.ಜಿಲ್ಲಾ ಉಪನಿರ್ದೇಶರು ಹಾಗೂ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಹೆಚ್ಚುವರಿ ಶಿಕ್ಷಕರ ಮರು ಕೌನ್ಸೆಲಿಂಗ್ನಲ್ಲಿ ಹಾರಾಡಿ ಶಾಲೆಯ ಶಿಕ್ಷಕಿಯರಾದ ಶುಭಲತಾ, ಯಶೋಧಾ, ವಿಜಯಾ ಮತ್ತು ಲಿಲ್ಲಿ ಡಿಸೋಜಾರನ್ನು ರಿಲೀವುಗೊಳಿಸಿ ತಕ್ಷಣವೇ ವರದಿ ನೀಡುವಂತೆ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಯ ಮುಖ್ಯಗುರುಗಳಿಗೆ ಆದೇಶ ನೀಡಿದ್ದರು. ಅಂದು ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಿ ಶಾಲೆಗಳನ್ನು ಆರಿಸಿಕೊಂಡ ಸುಮಾರು 39 ಶಿಕ್ಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಅವರು ರಿಲೀವ್ ಆದೇಶ ನೀಡಿದ್ದು, ಇಲಾಖಾ ನಿಯಮದ ಪ್ರಕಾರವೇ ಹಾರಾಡಿ ಶಾಲೆಗೂ ಆದೇಶ ನೀಡಲಾಗಿತ್ತು.
ಆದರೆ, ಈ ಶಾಲೆಯ ನಾಲ್ವರು ಶಿಕ್ಷಕರನ್ನು ವರ್ಗ ಮಾಡದಂತೆ ನೋಡಿಕೊಳ್ಳಲಾಗುವುದು ಎಂದು ಜುಲೈ 19ರಂದು ರಾಜ್ಯದ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಶಾಲೆಯ ವಿದ್ಯಾರ್ಥಿ, 8ನೆ ತರಗತಿಯ ದಿವಿತ್ ರೈಗೆ ಫೋನ್ ಮಾಡಿ ಭರವಸೆ ನೀಡಿದ್ದರು. ವಿದ್ಯಾರ್ಥಿ ದಿವಿತ್ ರೈ ಬುಧವಾರ ಮತ್ತೆ ಗೃಹ ಸಚಿವರ ಆಪ್ತ ಸಹಾಯಕರಿಗೆ ಫೋನ್ ಮಾಡಿ ರಿಲೀವ್ ಆದೇಶವನ್ನು ತಡೆ ಹಿಡಿಯುವಂತೆ ವಿನಂತಿಸಿದ್ದ. ಶಿಕ್ಷಕರನ್ನು ಬಿಡುಗಡೆ ಮಾಡಬೇಕೆಂದು ಇಲಾಖೆಯಿಂದ ಸೂಚನೆ ಬಂದ ಕಾರಣ ವಿದ್ಯಾರ್ಥಿ ದಿವಿತ್ ಶಾಲೆಯನ್ನು ಬಹಿಷ್ಕರಿಸಿ ಬುಧವಾರ ಮನೆಗೆ ತೆರಳಿದ್ದ.
ಗುರುವಾರ ಸಂಜೆ ಶಿಕ್ಷಣ ಇಲಾಖೆಯ ಆಯುಕ್ತರು ಶಿಕ್ಷಕರನ್ನು ಬಿಡುಗಡೆಗೊಳಿಸದಂತೆ ಲಿಖಿತ ಸೂಚನೆ ನೀಡಿದ್ದಾರೆ.
Comments are closed.