ಉಡುಪಿ: ಹಿಂದೂ ಜಾಗರಣ ವೇದಿಕೆ ಶಿರಿಯಾರ ಘಟಕದ ವತಿಯಿಂದ ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅಖಂಡ ಭಾರತ ಸಂಕಲ್ಪ ದಿನ ಹಾಗೂ ಪಂಜಿನ ಮೆರವಣಿಗೆಯು ಬುಧವಾರ ರಾತ್ರಿ ಶಿರಿಯಾರದಲ್ಲಿ ನಡೆಯಿತು.
ಶಿರಿಯಾರದ ಹಳ್ಳಾಡಿಯ ಅಚಲಾಸಭಾಭವನದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಉದ್ದೆಶಿಸಿ ದಿಕ್ಸೂಚಿ ಮಾತನಾಡಿದ ಹಿಂದೂಜಾಗರಣ ವೇದಿಕೆ ದಕ್ಷಿಣ ಪ್ರಾಂತದ ಪ್ರಮುಖ್ ದೋ. ಕೇಶವಮೂರ್ತಿ ಬೆಂಗಳೂರು ಅವರು, ಸ್ವಾತಂತ್ರ್ಯ ಸಿಕ್ಕಿ ಬಹಳ ವರ್ಷಗಳು ಕಳೆದರೂ ಸ್ವಾತಂತ್ರ್ಯ ತಂದು ಕೊಟ್ಟವರನ್ನು ಗೌರವಿಸುವ ಕೆಲಸವಾಗುತ್ತಿಲ್ಲ. ಇಡೀ ದೇಶವು ಸಂತೋಷ ಸಂಭ್ರಮದಿಂದ ಸ್ವಾತಂತ್ರ್ಯೋತ್ಸವ ಆಚರಿಸಲಾಗುತ್ತದೆ. ಎಲ್ಲೆಡೆ ತ್ರಿವರ್ಣ ಧ್ವಜ ಹಾರಿಸಿ, ಸಿಹಿ ಹಂಚಿ ಸಂಭ್ರಮಿಸುವ ಕಾರ್ಯವಾಗುತ್ತಿದೆ. 1947 ಆಗಸ್ಟ್ 14ರ ಮಧ್ಯರಾತ್ರಿ ದೇಶಕ್ಕೆ ಸ್ವಾತಂತ್ರ್ಯ ಬಂತು ಎಂದು ತಿಳಿದಿದ್ದೇವೆ. ಆದರೇ ಸ್ವಾತಂತ್ರ್ಯ ಸಾಮಾನ್ಯವಾದುದಲ್ಲ, ಅದನ್ನು ತಂದು ಕೊಡುವಲ್ಲಿ ಹಲವರ ತ್ಯಾಗ ಬಲಿದಾನವಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ದೇಶಭಕ್ತರನ್ನು ಗುರುತಿಸುವ ಬದಲು ಹೋರಾಟದ ಹೆಸರಿನಲ್ಲಿ ವೈಭವೀಕರಣವಾದವರನ್ನು ಗುರುತಿಸಲಾಗುತ್ತಿದೆ, ಇದು ಖೇದಕರ ಸಂಗತಿ ಎಂದು ಅಭಿಪ್ರಾಯಪಟ್ಟರು.
ಆಗಸ್ಟ್ 14ರ ರಾತ್ರಿ ನಡೆದ ದುರ್ಘಟನೆ ಭಾರತದ ಇತಿಹಾಸದಲ್ಲಿಯೇ ಮರೆಯಲಾಗದ ಕರಾಳ ದಿನ ಆಗಿದೆ. ಇಂತಹ ಘಟನೆಗಳು ಮರುಕಳಿಸದಿರಲು ಸಮಾಜ ಜಾಗ್ರತವಾಗಬೇಕಿದೆ. ಈ ನಿಟ್ಟಿನಲ್ಲಿ ಭಾರತೀಯರೆಲ್ಲಾ ಒಟ್ಟಾಗಬೇಕಿದೆ. ಕಿತ್ತುಹೋದ ದೇಶದ ಭಾಗಗಳನ್ನು ಮತ್ತೆ ಒಂದುಗೂಡಿಸುವ ಕೆಲಸವಾಗಬೇಕಿದೆ ಎಂದವರು ಈ ಸಂದರ್ಭ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದ್ಯಮಿ ಗಣೇಶ್ ಕಲ್ಮರ್ಗಿ ವಹಿಸಿದ್ದರು. ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆ ಪ್ರಮುಖ್ ರತ್ನಾಕರ್ ಕೋಟ, ಹಿಂಜಾವೇ ಸಾಲಿಗ್ರಾಮದ ಅಧ್ಯಕ್ಷ ಚಂದ್ರ ಆಚಾರ್, ಉದ್ಯಮಿ ಎಂ.ಕೆ. ಗಣೇಶ್ ಕಲ್ಮರ್ಗಿ ಮೊದಲಾದವರು ಉಪಸ್ಥಿತರಿದ್ದರು. ವಾಸು ಪ್ರಾರ್ಥಿಸಿ, ರಂಜಿತ್ ಶಿರಿಯಾರ ವಂದಿಸಿದರು.
ಶಿರಿಯಾರ ಪೇಟೆಯಿಂದ ಹಳ್ಳಾಡಿಯವರೆಗೂ ಎರಡು ಕಿಲೋಮೀಟರ್ ವರೆಗೂ ಪಂಜಿನ ಮೆರವಣಿಗೆ ಸಾಗಿತು. ಸುಮಾರು 500ಕ್ಕೂ ಅಧಿಕ ಕಾರ್ಯಕರ್ತರು ಪಂಜಿನ ಮೆರವಣಿಗೆಯಲ್ಲಿ ಪಾಲ್ಘೊಂಡರು. ಉದ್ಯಮಿ ಎಂ.ಕೆ. ಗಣೇಶ್ ಕಲ್ಮರ್ಗಿ ಪಂಜಿನ ಮೆರವಣಿಗೆಗೆ ಚಾಲನೆ ನೀಡಿದರು. ಈ ಸಂದರ್ಭ ಉಪಸ್ಥಿತರಿದ್ದ ಬಿಜೆಪಿ ರೈತ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಮಾತನಾಡಿ, ಜಿಲ್ಲೆಯ ವಿವಿದೆಡೆ ನಡೆಯುತ್ತಿರುವ ಪಂಜಿನ ಮೆರವಣಿಗೆಗಳಲ್ಲಿ ಭಾಗವಹಿಸುವ ಮೂಲಕ ಯುವಕರಲ್ಲಿ ಉತ್ಸಾಹ ತುಂಬುವ ಜೊತೆಗೆ ದೇಶಪ್ರೇಮವನ್ನು ಉದ್ದೀಪನಗೊಳಿವ ಕಾರ್ಯ ಮಾಡುತ್ತಿದ್ದೇವೆ ಎಂದರು. ಮುಖಂಡರಾದ ಅಲ್ತಾರು ಗೌತಮ ಹೆಗ್ಡೆ ಮೊದಲಾದವರು ಈ ಸಂದರ್ಭ ಇದ್ದರು.
Comments are closed.