ಉಡುಪಿ: ಕರಾವಳಿಯನ್ನೇ ತಲ್ಲಣಗೊಳಿಸಿರುವ ಉದ್ಯಮಿ ಭಾಸ್ಕರ ಶೆಟ್ಟಿ ಅವರ ಬೀಭತ್ಸ ಕೊಲೆ ಪ್ರಕರಣ ಹಲವು ರೀತಿಯ ತಿರುವುಗಳನ್ನು ಪಡೆಯುತ್ತಿರುವ ಹಿನ್ನಲೆಯಲ್ಲಿ ಪೊಲೀಸರ ಮೇಲೆ ಜನರಿಗೆ ಸಂದೇಹವಾಗತೊಡಗಿದೆ. ಇತ್ತ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ ಸಮುದಾಯ ತುರ್ತು ಸಭೆಯನ್ನು ಮಾಡಿದ್ದು ಸೂಕ್ತ ತನಿಖೆಯನ್ನು ಮಾಡುವಂತೆ ಹಾಗೂ ಪೊಲೀಸರ ನಿರ್ಲಕ್ಷ್ಯವನ್ನು ಸಮುದಾಯದ ಮುಖಂಡರು ಖಂಡಿಸಿದ್ದಾರೆ.
ಬಹುಕೋಟಿ ಉದ್ಯಮಿ ಭಾಸ್ಕರ್ ಶೆಟ್ಟಿ ಅವರ ಬೀಭತ್ಸ ಕೊಲೆ ಪ್ರಕರಣದಲ್ಲಿ ಪೊಲೀಸರು ತನಿಖೆಯನ್ನು ಸಮರ್ಪಕವಾಗಿ ಹಾಗೂ ವೇಗವಾಗಿ ಮಾಡುತ್ತಿಲ್ಲ. ದಿನದಿಂದ ದಿನಕ್ಕೆ ಕೊಲೆ ಪ್ರಕರಣ ಅನೇಕ ಆಯಾಮಗಳನ್ನು ಪಡೆದುಕೊಳ್ಳುತ್ತಿದ್ದು ಪೊಲೀಸರ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ ಎಂದು ಆರೋಪಿಸಿ ಬಂಟ ಸಮುದಾಯದ ಮುಖಂಡರು ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಬಂಟ್ಸ್ ಸಂಘದ ಅದ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಅವರ ನೇತೃತ್ವದಲ್ಲಿ ಸಭೆಯನ್ನು ನಡೆಸಿದರು. ಈ ಇಡೀ ಪ್ರಕರಣ ಪೊಲೀಸ್ ಇಲಾಖೆಯ ಮೇಲೆ ಬೊಟ್ಟು ಮಾಡುತ್ತಿದೆ. ಆದ್ದರಿಂದ ನಿಸ್ಪಕ್ಷಪಾತವಾಗಿ ತನಿಖೆ ನಡೆಯಬೇಕು. ಭಾಸ್ಕರ್ ಶೆಟ್ಟಿ ತಾಯಿಗೆ ನ್ಯಾಯ ದೊರಕಿಸಿಕೊಡಬೇಕು. ಭಾಸ್ಕರ್ ಅವರ ಆಸ್ತಿ ಅವರ ಪತ್ನಿ ಹಾಗೂ ಮಗನಿಗೆ ಸಿಗದ ಹಾಗೆ ಮಾಡಬೇಕು ಹೀಗೆ ಹಲವಾರು ಆಗ್ರಹ ಗಳು ಕೇಳಿಬಂದವು. ಮಾತ್ರ ಅಲ್ಲ ಬಿಜೆಪಿ ಜಿಲ್ಲಾದ್ಯಕ್ಷರಾಗಿದ್ದು ಕೊಂಡು, ಬಂಟ ಸಮುದಾಯದವರೇ ಆದ ಮಟ್ಟಾರು ರತ್ನಾಕರ್ ಹೆಗ್ಡೆ ಕೊಲೆ ಮಾಡಿದ ಆರೋಪಿಗಳ ಪರ ವಕಾಲತ್ತನ್ನು ವಹಿಸಬಾರದು ಎಂಬ ಆಗ್ರಹ ವ್ಯಕ್ತವಾಯಿತು.
ಇತ್ತ ಸಾಮಾಜಿಕ ಜಾಲ ತಾಣಗಳಲ್ಲಿ ಹಾಗೂ ಬಂಟ ಸಮುದಾಯದಿಂದಲೇ ವಕಾಲತನ್ನು ನಡೆಸಬಾರದು ಎಂಬ ಆಗ್ರಹ ಕೇಳಿ ಬಂದ ಹಿನ್ನಲೆಯಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಜಿಲ್ಲಾದ್ಯಕ್ಷ ಹಾಗೂ ಹಿರಿಯ ವಕೀಲ ಮಟ್ಟಾರು ರತ್ನಾಕರ್ ಹೆಗ್ಡೆ ಸ್ಪಷ್ಟನೆಯನ್ನ ನೀಡಿದ್ದಾರೆ. ನಾನು ಭಾಸ್ಕರ್ ಶೆಟ್ಟಿ ಕುಟುಂಬದ ವಕೀಲ. ಆದ್ರೆ ಈ ಪ್ರಕರಣದಲ್ಲಿ ನನ್ನನ್ನೂ ಯಾರೂ ಸಂಪರ್ಕಿಸಿಲ್ಲ. ಸಮಾಜಿಕ ಜಾಲ ತಾಣಗಳಲ್ಲಿ ಬರುತ್ತಿರುವ ಅವ್ಯಾಚ್ಯ ಶಬ್ಧಗಳ ನಿಂದನೆ ಬೇಸರ ತಂದಿದೆ. ನಾನು ಯಾವತ್ತೂ ಕೊಲೆಗಡುಕರ ಪರವಾಗಿ ವಕಾಲತ್ತನ್ನು ವಹಿಸುದಿಲ್ಲ. ಎರಡು ಬಾರಿ ಭಾಸ್ಕರ್ ಶೆಟ್ಟಿ ಅವರು ಮಾತನಾಡಲು ಬಂದಿದ್ದರು. ಆದ್ರೆ ನಾನು ಬ್ಯುಸಿ ಇರುವ ಕಾರಣ ಅವರೊಂದಿಗೆ ಮಾತುಕತೆ ಸಾದ್ಯವಾಗಿರಲಿಲ್ಲ ಎಂದು ಸ್ಪಷ್ಟನೆ ನೀಡಿದರು.
ಒಟ್ಟಿನಲ್ಲಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ತನಿಖೆಯ ಬಗ್ಗೆ ಬಂಟ ಸಮುದಾಯ ಪೊಲೀಸರ ಮೇಲೆ ಸಿಟ್ಟನ್ನು ತೋರಿಸುತ್ತಿದೆ. ಸರಿಯಾದ ತನಿಖೆಯನ್ನು ಮಾಡಿ ಇಲ್ಲವಾದ್ರೆ ಪ್ರತಿಭಟನೆಯನ್ನು ಎದುರಿಸಿ ಎಂದು ಎಚ್ಚರಿಕೆಯನ್ನು ಬಂಟ ಸಮುದಾಯದ ಮುಖಂಡರು ನೀಡಿದ್ದಾರೆ.
Comments are closed.