ಹಿಂದೂ ಮಾಸಗಳಲ್ಲಿ ಕೆಲವೊಂದು ಶುಭಕರವೆಂದು, ಕೆಲವೊಂದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಕೆಲವು ತಿಂಗಳುಗಳಲ್ಲಿ ಯಾವುದೇ ಶುಭ ಕಾರ್ಯವನ್ನು ಕೈಗೊಳ್ಳುವುದಿಲ್ಲ. ಇನ್ನು ಕೆಲವೊಂದು ತಿಂಗಳುಗಳನ್ನು ಶುಭವೆಂದು ಪರಿಗಣಿಸಿರಲಾಗುತ್ತದೆ.
ಅಂತಹ ತಿಂಗಳುಗಳಲ್ಲಿ ಶ್ರಾವಣವು ಒಂದು, ಆಷಾಡ ಮಾಸದ ನಂತರ ಬರುವ ಈ ಮಾಸವು ಅತ್ಯಂತ ಪವಿತ್ರ ಮಾಸವೆಂಬ ನಂಬಿಕೆ ಹಿಂದೂಗಳ ನಂಬಿಕೆಯಾಗಿದೆ. ಈ ಮಾಸದಲ್ಲಿ ಹಲವಾರು ಮದುವೆಗಳು, ಗೃಹಪ್ರವೇಶಗಳು, ಉಪನಯನಗಳು ಮತ್ತು ಇತರೆ ಕಾರ್ಯಕ್ರಮಗಳನ್ನು ನಡೆಸುತ್ತಾರೆ.
ಶ್ರಾವಣ ಮಾಸದದಲ್ಲಿ ಬರುವ ಪೌರ್ಣಿಮೆಯು ಮಹಾವಿಷ್ಣುವಿನ ಜನ್ಮ ನಕ್ಷತ್ರವಾದ ಶ್ರವಣ ನಕ್ಷತ್ರದ ದಿನವಾಗಿರುತ್ತದೆ. ಹೀಗಾಗಿ ಇದು ಪವಿತ್ರ ದಿನವೆಂಬ ನಂಬಿಕೆ ಇದೆ. ಇದರ ಜೊತೆಗೆ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ನಡುವೆ ಬರುವ ಈ ಮಾಸದಲ್ಲಿ ಹಲವಾರು ಹಬ್ಬ ಹರಿದಿನಗಳು ಇರುತ್ತವೆ.
ಈ ಮಾಸದಲ್ಲಿ ಬರುವ ನಾಲ್ಕೂ ಶುಕ್ರವಾರಗಳು ಅತ್ಯಂತ ಪವಿತ್ರವೆಂಬ ನಂಬಿಕೆ ಇದೆ. ಈ ಶುಕ್ರವಾರಗಳಂದು ಮಹಾಲಕ್ಷ್ಮಿಯ ಪೂಜೆಯನ್ನು ಮಾಡಲಾಗುತ್ತದೆ. ಈ ಮಾಸದ ಎರಡನೆ ಶುಕ್ರವಾರದಂದು ವರ ಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲಾಗುತ್ತದೆ.
ಈ ಹಬ್ಬವನ್ನು ಎಷ್ಟು ಸಂಭ್ರಮದಿಂದ ಆಚರಿಸಲಾಗುತ್ತದೆ ಎಂದು ಬಿಡಿಸಿ ಹೇಳಬೇಕೆ? ವರಗಳನ್ನು ನೀಡುವ ವರ ಮಹಾಲಕ್ಷ್ಮಿಯನ್ನು ಅಂದು ಭಕ್ತರು ಭಕ್ತಿಭಾವದಿಂದ ಪೂಜಿಸಿ ಆರಾಧಿಸುತ್ತಾರೆ.
ಈ ಮಾಸದಲ್ಲಿ ಬರುವ ಮಂಗಳವಾರಗಳು ಸಹ ಅತ್ಯಂತ ಪವಿತ್ರವೆಂದು ಪರಿಗಣಿಸಲ್ಪಟ್ಟಿವೆ. ಈ ತಿಂಗಳ ಮಂಗಳವಾರಗಳಂದು ಮಹಿಳೆಯರು ಮಂಗಳ ಗೌರಿ ವ್ರತವನ್ನು ಆಚರಿಸುತ್ತಾರೆ. ತಮ್ಮ ವೈವಾಹಿಕ ಜೀವನವು ಸುಖಮಯವಾಗಿರಲಿ ಮತ್ತು ತಮ್ಮ ಕುಟುಂಬಕ್ಕೆ ಒಳ್ಳೆಯದಾಗಲಿ ಎಂದು ಪಾರ್ವತಿ ದೇವಿಯನ್ನು ಮಂಗಳ ಗೌರಿಯ ರೂಪದಲ್ಲಿ ಪೂಜಿಸುತ್ತಾರೆ.
ಇನ್ನು ಈ ತಿಂಗಳ ಶನಿವಾರಗಳನ್ನು ಶ್ರಾವಣ ಶನಿವಾರಗಳೆಂದು ಪೂಜಿಸಲಾಗುತ್ತದೆ. ಈ ದಿನ ಮಹಾವಿಷ್ಣುವನ್ನು ವೆಂಕಟೇಶ್ವರ ಅಥವಾ ಬಾಲಾಜಿ ಎಂಬ ರೂಪದಲ್ಲಿ ಆರಾಧಿಸಲಾಗುತ್ತದೆ. ಶ್ರಾವಣ ಮಾಸವನ್ನು ಶುಭ ಕಾರ್ಯಗಳಿಗಾಗಿ ಹೆಚ್ಚಾಗಿ ಪರಿಗಣಿಸಲಾಗುತ್ತದೆ. ಹಿಂದೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶ್ರಾವಣ ಮಾಸದಲ್ಲಿ ಯಾರು ಜನಿಸುತ್ತಾರೋ, ಅವರಿಗೆ ಪ್ರಪಂಚದಲ್ಲಿ ವಿಶೇಷ ಸ್ಥಾನಮಾನಗಳನ್ನು ಪಡೆಯುತ್ತಾರಂತೆ. ಈ ಮಾಸದಲ್ಲಿ ಜಗನ್ನಾಥ ಸ್ವಾಮಿ, ಕೃಷ್ಣ, ಹಯಗ್ರೀವ ಮತ್ತು ವೈಕನ್ಸ್ ಮಹರ್ಷಿಯವರನ್ನು ಸಹ ಆರಾಧಿಸಲಾಗುತ್ತದೆ.
ಶ್ರಾವಣ ಮಾಸದ ವಿಶೇಷ:
ಈ ವರ್ಷದಲ್ಲಿ ಭಾರತದ ಪೂರ್ವ ದಿಕ್ಕಿನಲ್ಲಿ ಕೇಳಿ ಬರುವ ಒಂದೇ ಒಂದು ಮಂತ್ರ ಎಂದರೆ ಬೋಲ್ ಬಮ್ ಬೋಲ್ ಬಮ್ ಎಂದಾಗಿದೆ! ಶ್ರಾವಣ ಮಾಸದಿಂದಾಗಿ ಈ ಮಂತ್ರ ವ್ರತಧಾರಿಗಳಲ್ಲಿ ಅನುರಣಿಸುತ್ತಿರುತ್ತದೆ. ಹಿಂದೂಗಳ ಪವಿತ್ರ ಮಾಸ ಪ್ರಾರಂಭವಾಗಿದೆ ಮತ್ತು ಬೈದ್ಯನಾಥ ದೇವಸ್ಥಾನಕ್ಕೆ ಜನರು ಹೋಗುವ ಸುಸಂದರ್ಭ ಇದಾಗಿದೆ. ಅಲ್ಲದೆ ಈ ಯಾತ್ರೆಯನ್ನು ಶಿವ ದೇವರಿಗೆ ಅರ್ಪಿಸಲಾಗುತ್ತದೆ.
ಹಿಂದೂ ಜನಾಂಗದವರಿಗೆ ಇದು ಶ್ರಾವಣ ಮಾಸ ಪ್ರಾರಂಭಗೊಂಡಿದೆಯೆಂದು ಮತ್ತು ಶ್ರೀ ಪರಮೇಶ್ವರನಿಗೆ ಸಮರ್ಪಿಸಲಾದ ಬೈದ್ಯನಾಥನ ದೇವಾಸ್ಥಾನಕ್ಕೆ ತೀರ್ಥಯಾತ್ರೆ ಮಾಡಲು ತಕ್ಕ ಸಮಯವೆಂದು ರೂಢಿಯಾಗಿದೆ. ಹಿಂದೂಗಳು ಬೈದ್ಯನಾಥನ ಜ್ಯೋತಿರ್ಲಿಂಗದ ದರ್ಶನಕ್ಕೆ ಪ್ರಸಿದ್ಧ ತಿರ್ಥಯಾತ್ರೆಯನ್ನು ಪವಿತ್ರವಾದ ಶ್ರಾವಣಮಾಸದಲ್ಲಿ ಕೈಕೊಳ್ಳುತ್ತಾರೆ. ಬೈದ್ಯನಾಥ ದೇವಸ್ಥಾನವು ಜಾರ್ಖಂಡ್ ರಾಜ್ಯದಲ್ಲಿದೆ ಮತ್ತು ಪ್ರತಿ ವರ್ಷ ಸಾವಿರಾರು ಯಾತ್ರಾರ್ಥಿಗಳು ಭೇಟಿನೀಡುತ್ತಾರೆ.
ಬೈದ್ಯನಾಥ ದೇವಸ್ಥಾನದ ಹಿಂದಿರುವ ಕಥೆ :
ರಾಕ್ಷಸ ರಾಜ ರಾವಣನು ಮಹಾನ್ ಶಿವಭಕ್ತ ಎಂಬುದು ಗೊತ್ತೇ ಇದೆ. ದೇವರನ್ನು ಒಲಿಸಿಕೊಳ್ಳಲು ಆತ ಹಲವಾರು ವೃತ ಪೂಜೆ ತಪಗಳನ್ನು ಮಾಡುತ್ತಾನೆ. ಇದರಿಂದ ಪ್ರಸನ್ನನಾದ ಶಿವ ದೇವರು ರಾವಣನಲ್ಲಿ ವರವನ್ನು ಬೇಡಿಕೊಳ್ಳಲು ಹೇಳುತ್ತಾನೆ. ಅತಿ ಬುದ್ಧಿವಂತನಾದ ರಾವಣನು ಶಿವನಲ್ಲಿ ತಾನು ನಿಮ್ಮನ್ನು ನಾನಿರುವ ಲಂಕೆಗೆ ಕೊಂಡೊಯ್ಯುವುದಾಗಿಯೂ ಆದ್ದರಿಂದ ತಾವು ತನ್ನೊಂದಿಗೆ ಲಿಂಗದ ರೂಪದಲ್ಲಿ ಬರಬೇಕೆಂದು ಕೇಳಿಕೊಳ್ಳುತ್ತಾನೆ.
ನಂತರ ಶಿವನು ರಾವಣನಿಗೆ ಜ್ಯೋತಿರ್ಲಿಂಗವನ್ನು ಲಂಕೆಗೆ ಒಯ್ಯಲು ಪ್ರಸಾದಿಸುತ್ತಾರೆ. ಆದರೆ ಯಾವುದೇ ಕಾರಣಕ್ಕೂ ಲಿಂಗವನ್ನು ನೆಲದಲ್ಲಿ ಇಡಬಾರದೆಂಬ ಷರತ್ತನ್ನು ಶಿವನು ರಾವಣನಿಗೆ ಹೇಳಿದನು. ಹಾಗೇನಾದರು ಇಟ್ಟಪಕ್ಷದಲ್ಲಿ, ಆ ಲಿಂಗವು ಅದೇ ಸ್ಥಳದಲ್ಲಿ ಶಾಶ್ವತವಾಗಿ ಸ್ಥಾಪಿತವಾಗಿಹೋಗಿಬಿಡುವುದೆಂದು ಎಚ್ಚರಿಕೆ ಕೊಟ್ಟನು. ಹೀಗೆ ರಾವಣನು ತನ್ನ ಪ್ರಯಾಣವನ್ನು ಮುಂದುವರಿಸುತ್ತಾನೆ.
ರಾವಣನು ಜ್ಯೋತಿರ್ಲಿಂಗವನ್ನು ಲಂಕೆಯಲ್ಲಿ ಪ್ರತಿಷ್ಟಾಪಿಸಿದರೆ ನಂತರ ಆತ ಮಹಾನ್ ಪರಾಕ್ರಮಿಯಾಗುತ್ತಾನೆ ಮತ್ತು ಇವನನ್ನು ಸೋಲಿಸಲು ಯಾರಿಂದಲೂ ಸಾಧ್ಯವಾಗದು ಎಂದು ದೇವತೆಗಳು ಭಯಬೀಳುತ್ತಾರೆ. ಹೀಗೆ ವಿಷ್ಣು ದೇವರು ಒಂದು ಉಪಾಯವನ್ನು ಆಲೋಚಿಸುತ್ತಾರೆ. ಮಳೆಯ ದೇವರು ಎಂದೇ ಪ್ರತೀತರಾದ ವರುಣನು ರಾವಣನ ಹೊಟ್ಟೆಯನ್ನು ಪ್ರವೇಶಿಸುತ್ತಾನೆ. ಹೀಗಾಗಿ ರಾವಣನಿಗೆ ಮೂತ್ರ ಶಂಕೆ ಮಾಡಲು ಆತುರವಾಗುತ್ತದೆ. ರಾವಣನು ಲಿಂಗವನ್ನು ಯಾರಾದರೂ ಹಿಡಿದುಕೊಳ್ಳಬೇಕೆಂಬ ಉದ್ದೇಶದಿಂದ ಸುತ್ತ ಮುತ್ತಲೂ ನೋಡುತ್ತಾನೆ. ವಿಷ್ಣು ದೇವರು ಬ್ರಾಹ್ಮಣನ ರೂಪದಲ್ಲಿ ರಾವಣನ ಎದುರು ಪ್ರತ್ಯಕ್ಷರಾಗಿ ರಾವಣನು ಲಿಂಗವನ್ನು ಕೆಳಗಿಡಬಾರದೆಂಬ ತಾಕೀತನ್ನು ಮಾಡಿ ತಾನು ಇದೀಗ ಬರುವುದಾಗಿ ತಿಳಿಸಿ ಬಹಿರ್ದಿಸೆಗೆ ತೆರಳುತ್ತಾನೆ. ಸೂರ್ಯಾಸ್ತದವರೆಗೆ ಮಾತ್ರವೇ ತನಗೆ ಈ ಲಿಂಗವನ್ನು ಹಿಡಿದುಕೊಳ್ಳಲು ಸಾಧ್ಯ ಅದರ ನಂತರ ಇದನ್ನು ನಾನು ಕೆಳಗಿಡುತ್ತೇನೆ ಎಂದು ತಿಳಿಸಿ ಬ್ರಾಹ್ಮಣ ಲಿಂಗವನ್ನು ಹಿಡಿದುಕೊಳ್ಳುತ್ತಾನೆ.
ರಾವಣ ಬಹಿರ್ದಿಸೆಗೆ ಹೋದ ಸಂದರ್ಭದಲ್ಲಿ, ವರುಣ ತನ್ನ ಆಟವನ್ನು ಪ್ರಾರಂಭಿಸುತ್ತಾನೆ ಮತ್ತು ಸೂರ್ಯಾಸ್ತದವರೆಗೆ ರಾವಣನಿಗೆ ಮೂತ್ರಶಂಕೆ ಮಾಡಲಾಗುವುದಿಲ್ಲ. ಈ ಸಂದರ್ಭದಲ್ಲಿ ಬ್ರಾಹ್ಮಣ ಹೇಳಿದಂತೆ ಲಿಂಗವನ್ನು ಭೂಮಿಯ ಮೇಲೆ ಇಡುತ್ತಾನೆ ಮತ್ತು ಅದು ಅಲ್ಲಿಯೇ ಭದ್ರಗೊಳ್ಳುತ್ತದೆ. ರಾವಣ ಬಂದಾಗ ಲಿಂಗವು ನೆಲದಲ್ಲಿ ಭದ್ರವಾಗಿ ಊರಿರುವುದು ಅರಿವಾಗುತ್ತದೆ. ಲಿಂಗವನ್ನು ನೆಲದಿಂದ ಕೀಳಲು ರಾವಣ ಪ್ರಯತ್ನಿಸುತ್ತಾನೆ ಆದರೆ ರಾವಣನ ಪ್ರಯತ್ನ ವಿಫಲವಾಗುತ್ತದೆ. ರಾವಣನು ಸಿಟ್ಟಿನಲ್ಲಿ, ಲಿಂಗದ ತಲೆಗೆ ಮುಷ್ಟಿಯಿಂದ ರಾವಣ ಒದೆಯುತ್ತಾನೆ. ಬೈದ್ಯನಾಥ ಜ್ಯೋತಿರ್ಲಿಂಗದ ಶಿರದಲ್ಲಿ ಈ ಮುಷ್ಟಿ ಪ್ರಹಾರವನ್ನು ನಮಗೆ ಈಗಲೂ ಕಾಣಬಹುದು.
ಶ್ರಾವಣ ಮಾಸದ ಸಮಯದಲ್ಲಿ ಭಕ್ತರು ಕಟ್ಟುನಿಟ್ಟಾಗಿ ಸಸ್ಯಾ ಹಾರಿಗಳಾಗಿರಬೇಕು. ಹೀಗಾಗಿ ಬೈದ್ಯನಾಥ ದೇವಾಸ್ಥಾನದಲ್ಲಿ ಶಿವನು ನೆಲೆಸಿದ್ದು ಅವನನ್ನು ತುಂಬು ಹೃದಯದಿಂದ ಪೂಜಿಸಿದವರಿಗೆ ಅವರ ಇಚ್ಚೆಗಳನ್ನೆಲ್ಲ ಪೂರೈಸುತ್ತಾನೆ. ಸತ್ಯ ಹೃದಯದಿಂದ ನಿರ್ಮಲ ಭಕ್ತಿಯಿಂದ ಬೈದ್ಯನಾಥ ದೇವರನ್ನು ಪೂಜಿಸಿದರೆ ಅವರು ಸಕಲ ಇಷ್ಟಾರ್ಥಗಳನ್ನು ನೆರೆವೇರಿಸಿಕೊಡುತ್ತಾರೆ ಎಂಬುದು ನಿಜವಾಗಿದೆ.
Comments are closed.