ಕುಂದಾಪುರ: ತಾಯಿಯೋರ್ವಳು ತನಗೆ ಬೇಡವೆಂದು ಕಾಡಿನಲ್ಲಿ ಎಸೆದ ಮಗು ಅದ್ಯೇಗೋ ಪತ್ರಕರ್ತರ ಕೈಗೆ ಸಿಕ್ಕು ರಕ್ಷಿಸಲ್ಪಟ್ಟು ಈಗ ತಂದೆ-ತಾಯಿ ಆರೈಕೆಯಲ್ಲಿ ಉತ್ತಮವಾಗಿ ಬೆಳೆಯುತ್ತಿದೆ. ಮಗುವಿನ ರಕ್ಷಿಸಿ ತಾಯಿ ಮಡಿಲಿಗೆ ಪುನಃ ಸೇರಿಸಿದ ಈ ಮಾನವೀಯ ಘಟನೆ ನಡೆದು ಈ ನಾಗರಪಂಚಮಿಯ ಶುಭ ದಿನಕ್ಕೆ ಎರಡು ವರ್ಷದ ನೆನಪು.
ಶಿವಮೊಗ್ಗ ಮೂಲದ ಯುವಕ ಹಾಗೂ ಕುಂದಾಪುರದ ಹಟ್ಟಿಯಂಗಡಿ ಮೂಲದ ಯುವತಿ ಪರಸ್ಪರ ಪ್ರೇಮಿಸುತ್ತಿದ್ದು ಮದುವೆಗೂ ಮುನ್ನ ಆಕೆ ಗರ್ಭವತಿಯಾಗಿದ್ದಳು. ಈ ವಿಚಾರ ತಿಳಿಯುತ್ತಿದ್ದಂತೆಯೇ ಪ್ರಿಯಕರ ಇವಳಿಂದ ಕೊಂಚ ದೂರಾಗಿದ್ದ. ಗಂಡನಿಲ್ಲದೇ ಮಗುವನ್ನು ಹೆತ್ತು ಸಾಕುವುದು ಆಕೆಗೆ ಕಷ್ಟವಾಗಿತ್ತು. ಅದಕ್ಕಾಗಿಯೇ ತನ್ನ ತಾಯಿಯೊಂದಿಗೆ ಸೇರಿಕೊಂಡು ಫ್ಲಾನ್ ಮಾಡಿ ಸಾಗರಕ್ಕೆ ಹೊರಡುತ್ತಾಳೆ. ಆದರೇ ಓಮ್ನಿ ಕಾರಿನಲ್ಲಿ ತೆರಳುವಾಗ ಮಾರ್ಗ ಮಧ್ಯೆ ಈಕೆಗೆ ಪ್ರಸವ ವೇದನೆಯಾಗಿ ಕಾರನ್ನು ನಿಲ್ಲಿಸಿ ಸಮೀಪದ ಕಾಡಿಗೆ ತಾಯಿ ಮಗಳು ತೆರಳುತ್ತಾರೆ. ಅಲ್ಲಿಯೇ ಆಕೆಗೆ ಹೇರಿಗೆಯೂ ಆಗುತ್ತೆ. ತಂದೆಯಿಲ್ಲದೇ ಮಗು ಜನ್ಮ ತಾಳಿದ್ದಾಗಿತ್ತು. ಆದರೇ ಅದನ್ನು ಸಮಾಜದೆದುರು ಹೇಗೆ ಸಾಕುವುದೆಂಬ ಭವನೆಯಿಂದಲೇ ತಾಯಿ ಮಗಳಿಬ್ಬರೂ ಆ ಮಗುವನ್ನು ಅದೇ ಕಾಡಿನಲ್ಲಿ ಬಿಟ್ಟು ತಮ್ಮೂರಿಗೆ ವಾಪಾಸ್ಸಾಗುತ್ತಾರೆ.
(ಫೈಲ್ ಫೋಟೋ)
ಮಗುವಿನ ರಕ್ಷಣೆ…
ಈ ವಿಚಾರ ಅದ್ಯೇಗೋ ಬಾಯಿಂದ ಬಾಯಿಗೆ ಬಿದ್ದು ಕುಂದಾಪುರದ ಚಾಲುಕ್ಯ ಪತ್ರಿಕೆ ಸಂಪಾದಕ ಚಂದ್ರಮ ತಲ್ಲೂರು, ಪತ್ರಕರ್ತ ಜಯಶೇಖರ್ ಮಡಪ್ಪಾಡಿ ಅವರಿಗೆ ತಿಳಿಯುತ್ತೆ. ಅವರು ಕಾರ್ಯಾಚರಣೆ ನಡೆಸಿ ಅದೇ ಓಮ್ನಿ ಕಾರಿನ ಚಾಲಕನ ಮೂಲಕ ಸ್ಥಳಕ್ಕೆ ತೆರಳಿ ಮಗುವನ್ನು ಪತ್ತೆ ಹಚ್ಚುತ್ತಾರೆ. ಆಗಸ್ಟ್ ತಿಂಗಳೆನ್ನುವುದು ಮಳೆಯ ತಿಂಗಳು. ಈ ನವಜಾತ ಶಿಶು ಒಂದು ರಾತ್ರಿ ಒಂದು ಸಂಪೂರ್ಣ ಹಗಲು ಅದೇ ಮಳೆಯಲ್ಲಿ ತೊಯ್ದು ಹೋಗಿತ್ತು. ಕೂಡಲೇ ಮಗುವನ್ನು ಕುಂದಾಪುರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ನೀಡಲಾಗಿತ್ತು. ಅಂದಿನ ಕುಂದಾಪುರ ಡಿವೈಎಸ್ಪಿ ಸಿ.ಬಿ. ಪಾಟೀಲ್, ವೃತ್ತನಿರೀಕ್ಷಕ ದಿವಾಕರ್, ಕುಂದಾಪುರ ತಹಶಿಲ್ದಾರ್ ಗಾಯತ್ರಿ ಅವರು ಈ ವಿಚಾರದ ಬಗ್ಗೆ ಗಂಭೀರವಾಗಿ ಪರಿಗಣಿಸಿದ್ದರು.
ನಾಗರಪಂಚಮಿ ದಿನ ಸಿಕ್ಕವಳು ಈ ಪಂಚಮಿ…
ಕಾಡಿನಲ್ಲಿ ಮಳೆಯಲ್ಲಿ ನೆನೆದಿದ್ದ ಆ ಮಗುವಿಗೆ ಉತ್ತಮ ಚಿಕಿತ್ಸೆ ಕೊಡಿಸಲಾಗಿತ್ತು. ನಾಗರಪಂಚಮಿಯ ಹಿಂದಿನ ದಿನ ಜನಿಸಿ ಸಾವು ಬದುಕಿನ ನಡುವೆ ಹೋರಾಟ ನಡೆಸಿ ನಾಗರಪಂಚಮಿ ದಿನ ರಕ್ಷಿಸಲ್ಪಟ್ಟ ಈ ಮಗುವಿಗೆ “ಪಂಚಮಿ” ಎಂದು ಹೆಸರಿಡಲಾಗಿತ್ತು. ಈ ಪ್ರಕರಣ ಮಕ್ಕಳ ಕಲ್ಯಾಣ ಸಮಿತಿ ಬರುವ ಕಾರಣ ವಿಚಾರಣೆ ವೇಳೆ ತಾಯಿ ಅಪ್ರಾಪ್ತೆದು ತಿಳಿದು ಸಿ.ಡಬ್ಲ್ಯೂಸಿ ಸಂಸ್ಥೆಯು ಮಗುವನ್ನು ಹಟ್ಟಿಯಂಗಡಿಯ ನಮ್ಮಭೂಮಿ ಪುನರ್ವಸತಿ ಕೇಂದ್ರಕ್ಕೆ ನೀಡಿದ್ದರು.
ಪಂಚಮಿ ಸಮ್ಮುಖ ತಂದೆ-ತಾಯಿ ಮದುವೆಯಾಗಿತ್ತು…
ಅಪ್ರಾಪ್ತೆಯಾಗಿದ್ದ ಮಗುವಿನ ತಾಯಿಗೆ 2015 ಫೆಬ್ರವರಿ 25ಕ್ಕೆ 18 ವರ್ಷ ತುಂಬಿದ ಕಾರಣ ಆಕೆಗೆ ಮಗುವ ಪಡೆಯುವ ಹಕ್ಕಿದ್ದು, ಕಾನೂನಾತ್ಮಕವಾಗಿ ಮಗು ಪಡೆಯಲು ಮದುವೆಯಾಗಬೇಕಾಗಿತ್ತು. ಕೂಡಲೇ ಎರಡೂ ಕಡೆಯವರು ಮಾತುಕತೆ ನಡೆಸಿ ಮದುವೆ ನಿಶ್ಚಯಿಸಿ ಸುಮೂಹೂರ್ತದಲ್ಲಿ ಠಾಣೆ ಸಮೀಪದಲ್ಲಿಯೇ ಇರುವ ಶ್ರೀ ರಕ್ತೇಶ್ವರೀ ದೇವಸ್ಥಾನದಲ್ಲಿ ಇಬ್ಬರ ಮದುವೆ ಹಿಂದೂ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ನಡೆಯಿತು. ಮದುವೆಗೆ ಇಬ್ಬರ ಮಗು “ಪಂಚಮಿ” ಸಾಕ್ಷಿಯಾದಳು.
ಮದುವೆಯ ಬಳಿಕ ಪಂಚಮಿಯ ಜೊತೆ ಸಾಗರದಲ್ಲಿ ನೆಲೆಸಿರುವ ಈ ಜೋಡಿ ಅನ್ಯೋನ್ಯವಾಗಿ ಜೀವನ ಸಾಗಿಸುತ್ತಿದೆ. ಇನ್ನು ಒಂದು ವಿಶೇಶ ಅಚ್ಚರಿಯೆಂದರೇ ಪಂಚಮಿ ಹುಟ್ಟಿದ್ದು ನಾಗರ ಪಂಚಮಿಯ ಹಿಂದಿನ ದಿನ ರಾತ್ರಿ. ಈ ಬಾರಿಯ ನಾಗರಪಂಚಮಿಯ ಹಿಂದಿನ ದಿನಾ ಆಕೆಗೊಬ್ಬ ಸಹೋದರನು ಜನಿಸಿದ್ದಾನೆ ಎನ್ನುವ ಮಾಹಿತಿ ಕುಟುಂಬ ಮೂಲಗಳಿಂದ ತಿಳಿದಿದೆ.
ಇದೆಲ್ಲಾ ವಿಚಾರಗಳು ತಿಳಿದಿರುವ ಜನರಾಡುವ ಮಾತುಗಳು ಏನೆಂದರೇ ನಿಜಕ್ಕೂ `ಪಂಚಮಿ ಲಕ್ಕಿ ಮಗು’..!
ವರದಿ- ಯೋಗೀಶ್ ಕುಂಭಾಸಿ
Comments are closed.