ಶಿಕಾಗೊ, ಆ. 4: ಶಿರವಸ್ತ್ರ ‘ನಿಖಾಬ್’ನ್ನು ಧರಿಸಿರುವುದಕ್ಕಾಗಿ ತನ್ನನ್ನು ಅಮೆರಿಕದ ಡಿಪಾರ್ಟ್ಮೆಂಟ್ ಸ್ಟೋರೊಂದರಿಂದ ಹೊರದಬ್ಬಲಾಗಿದೆ ಎಂದು 32 ವರ್ಷದ ಮುಸ್ಲಿಮ್ ಮಹಿಳೆಯೊಬ್ಬರು ಆರೋಪಿಸಿದ್ದಾರೆ.
ಇಂಡಿಯಾನ ರಾಜ್ಯದ ಗ್ಯಾರಿ ಪಟ್ಟಣದ ಸಾರಾ ಸಫಿ ನಿಖಾಬ್ ತೊಟ್ಟು ‘ಫ್ಯಾಮಿಲಿ ಡಾಲರ್’ ಅಂಗಡಿಗೆ ಸೋಮವಾರ ತನ್ನ ಮಕ್ಕಳೊಂದಿಗೆ ಹೋಗಿದ್ದರು. ”ನಾನು ಅಂಗಡಿಯೊಳಗೆ 10 ಹೆಜ್ಜೆಗಳನ್ನು ಇಟ್ಟಿರಬಹುದು. ಕೌಂಟರ್ನಲ್ಲಿದ್ದ ಮಹಿಳೆಯೊಬ್ಬರು, ‘ಮ್ಯಾಮ್, ನೀವು ಒಂದೋ ಮುಖದ ಬಟ್ಟೆಯನ್ನು ತೆಗೆಯಬೇಕು, ಇಲ್ಲವೇ ನನ್ನ ಅಂಗಡಿಯೊಂದ ಹೊರಹೋಗಬೇಕು’ ಎನ್ನುವುದು ಕೇಳಿಸಿತು” ಎಂದು ಸಾರಾ ಟಿವಿ ಚಾನೆಲ್ನೊಂದಿಗೆ ಮಾತನಾಡುತ್ತಾ ಹೇಳಿದರು.
ತಾನು ಧಾರ್ಮಿಕ ಕಾರಣಗಳಿಗಾಗಿ ನಿಖಾಬ್ ಧರಿಸುತ್ತೇನೆ ಎಂದು ಸಾರಾ ಉತ್ತರಿಸಿದರು. ಆದರೆ, ಅದನ್ನು ಕೇಳಿಸಿಕೊಳ್ಳದ ಕೌಂಟರ್ನಲ್ಲಿದ್ದ ಮಹಿಳೆ, ”ನನಗೆ ಅರ್ಥವಾಗುತ್ತದೆ, ಆದರೆ, ಇದು ಹೆಚ್ಚಿನ ಅಪರಾಧ ಕೃತ್ಯಗಳು ನಡೆಯುವ ಸ್ಥಳ ಹಾಗೂ ನಾವು ಇಲ್ಲಿ ಹಲವು ಬಾರಿ ದರೋಡೆಗೊಳಗಾಗಿದ್ದೇವೆ ಎನ್ನುವುದನ್ನು ನೀವೂ ಅರ್ಥ ಮಾಡಿಕೊಳ್ಳಬೇಕು. ನೀವು ಒಂದೋ ಮುಖದಿಂದ ಬಟ್ಟೆಯನ್ನು ತೆಗೆಯಬೇಕು, ಇಲ್ಲದಿದ್ದರೆ ಇಲ್ಲಿಂದ ಜಾಗ ಖಾಲಿ ಮಾಡಬೇಕು” ಎಂದರು. ಬಳಿಕ ಸಾರಾ ಅನಿವಾರ್ಯವಾಗಿ ಅಂಗಡಿಯಿಂದ ಹೊರಹೋದರು.
Comments are closed.