ಕರಾವಳಿ

ಗಂಡನು ಕೈಬಿಟ್ಟ-ಮನೆಯಿಂದಲೂ ದೂರಾದಳು..ದಿಕ್ಕಿಲ್ಲದ ಯುವತಿ ಹಾಗೂ ಮಗುವಿಗೆ ‘ಸ್ಪೂರ್ತಿ’ ಆಸರೆ

Pinterest LinkedIn Tumblr

ಕುಂದಾಪುರ: ತಾಲ್ಲೂಕಿನ ಅಮಾಸೆಬೈಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ವೇಳೆಗೆ ತಿರುಗಾಡುತ್ತಿದ್ದ ಯುವತಿ ಹಾಗೂ ಆಕೆಯ ಎರಡು ವರ್ಷದ ಪ್ರಾಯದ ಮಗುವನ್ನು ರಕ್ಷಿಸಿದ ಪೊಲೀಸರು ತೆಕ್ಕಟ್ಟೆ ಸಮೀಪದ ಕೆದೂರಿನ ಸ್ಫೂರ್ತಿಧಾಮಕ್ಕೆ ದಾಖಲಿಸಿದ್ದಾರೆ.

ಬುಧವಾರ ರಾತ್ರಿ 9 ಗಂಟೆಗೆ ಅಮಾಸೆಬೈಲು ಪ್ರದೇಶದಲ್ಲಿ ತಿರುಗಾಡುತ್ತಿದ್ದ 26 ವರ್ಷದ ಮಹಿಳೆ ಮಮತಾ (ಹೆಸರು ಬದಲಾಯಿಸಲಾಗಿದೆ) ಹಾಗೂ ಆಕೆಯ ಎರಡು ವರ್ಷ ಪ್ರಾಯದ ಮಗುವಿಗೆ ಆಶ್ರಯ ನೀಡಲಾಗಿದೆ.

Kedur_Spoorthidama_News

ಆಶ್ರಯಕ್ಕೆ ಒಳಪಟ್ಟ ಯುವತಿಯು ಕುಂದಾಪುರ ತಾಲೂಕಿನ ಅಮಾಸೆಬೈಲಿನ ಜಡ್ಡಿನಗದ್ದೆ ಪ್ರದೇಶದವಳೆನ್ನಲಾಗಿದೆ. ಆಕೆ ಸುಮಾರು 6 ವರ್ಷಗಳ ಹಿಂದೆ ಕಿರಿಮಂಜೇಶ್ವರದ ಅನ್ಯಕೋಮಿನ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಳು. ಕೊಲ್ಲೂರು ದೇವಸ್ಥಾನದಲ್ಲಿ ಮನೆಯವರಿಗೆ ತಿಳಿಸದೇ ಮದುವೆಯಾದ ಇವರು ಹೆಮ್ಮಾಡಿ ಹಾಗೂ ಕೊಲ್ಲೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಾರೆ. ಮೊದಲ ಹೆಣ್ಣು ಮಗು ಹೃದಯರೋಗದಿಂದ ತೀರಿಕೊಂಡಿತ್ತು ಈಗ 2 ವರ್ಷದ ಹೆಣ್ಣು ಮಗುವೊಂದಿದೆ.

ವರ್ಷಗಳ ಹಿಂದೆ ಕೌಟುಂಬಿಕ ಸಮಸ್ಯೆಯಿಂದಾಗಿ ಗಂಡನನ್ನು ತ್ಯಜಿಸಿದ ಆಕೆ ತನ್ನ ಮಗುವಿನೊಂದಿಗೆ ಅಮಾಸೆಬೈಲಿನ ನಿವಾಸಕ್ಕೆ ಬಂದು ತಂದೆ ತಾಯಿ ಜೊತೆ ಇದ್ದು ಅವರಿವರ ಮನೆಯಲ್ಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದಳು. ಆದರೇ ಬುಧವಾರ ರಾತ್ರಿ ತಂದೆ ಕೂಗಾಡಿ ಗಲಾಟೆ ಮಾಡಿದ್ದರಿಂದ ಮನನೊಂದು ತನ್ನ ಮಗುವಿನೊಂದಿಗೆ ಮನೆಬಿಟ್ಟು ಬಂದೆ. ಅಮಾಸೆಬೈಲು ಬಳಿ ತಿರುಗುತ್ತಿದ್ದಾಗ ಪೋಲೀಸರು ನನ್ನನ್ನು ಇಲ್ಲಿಗೆ ಕರೆತಂದಿದ್ದಾರೆ ಎಂದು ಸಂಸ್ಥೆಗೆ ಬಂದ ಮೇಲೆ ಹೇಳಿಕೊಂಡಿದ್ದಾಳೆ. ತನ್ನ ಗಂಡ ಯಾವುದೋ ತಪ್ಪಿಗೆ ಅಪರಾಧಿಯಾಗಿ ಜೈಲಿನಲ್ಲಿದ್ದಾರೆ ಎಂದು ಕೂಡ ಆಕೆ ಹೇಳುತ್ತಾರೆ.

ಸದ್ಯ ತಾಯಿ ಮತ್ತು ಮಗು ಸ್ಫೂರ್ತಿಧಾಮದಲ್ಲಿ ಆಶ್ರಯದಲ್ಲಿದ್ದಾರೆ.

Comments are closed.