ಕರಾವಳಿ

ನಿತ್ಯಾನಂದ ಕಾರಂತ ಪೊಳಲಿಯವರಿಗೆ ಶೇಣಿ ಕಲೋತ್ಸವ ಪ್ರಶಸ್ತಿ : ಆಗಸ್ಟ್ 11ರಂದು ಪ್ರದಾನ

Pinterest LinkedIn Tumblr

karanth_sheni_art_awrd

ಮಂಗಳೂರು,ಅ.04: ಕಲ್ಕೂರ ಪ್ರತಿಷ್ಠಾನ ಮಂಗಳೂರು ಇದರ ವತಿಯಿಂದ ಆಗಸ್ಟ್ 11ನೇ ಗುರುವಾರ ನಗರದ ಡಾನ್‌ಬಾಸ್ಕೋ ಹಾಲ್‌ನಲ್ಲಿ ಜಗಲಿರುವ ಶೇಣಿ ಸಂಸ್ಮರಣೆ ಕಲೋತ್ಸವ ಸಮಾರಂಭದಲ್ಲಿ ಯಕ್ಷಗಾನ ಪ್ರಸಂಗಕರ್ತ ಪೊಳಲಿ ನಿತ್ಯಾನಂದ ಕಾರಂತರಿಗೆ ಶೇಣಿ ಕಲೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಯಕ್ಷಗಾನ ವಾಚಸ್ಪತಿ ಪೊಳಲಿ ಶಂಕರನಾರಾಯಣ ಶಾಸ್ತ್ರಿ ಹಾಗೂ ಗೌರಮ್ಮ ದಂಪತಿಗಳ ಸುಪುತ್ರ ನಿತ್ಯಾನಂದ ಕಾರಂತರು ಸುಪ್ರಸಿದ್ಧ ತುಳು ಯಕ್ಷಗಾನ ಪ್ರಸಂಗಗಳಾದ ಸತ್ಯದಪ್ಪೆ ಚೆನ್ನಮ್ಮ, ನಾಡಕೇದಗೆ, ಧರ್ಮಧಾರೆ, ಪಣಂಬೂರು ಕ್ಷೇತ್ರ ಮಹಾತ್ಮೆ, ದಂಡಕಾರಣ್ಯ ಮುಂತಾದ 20 ಪ್ರಸಂಗಗಳನ್ನು ರಚಿಸಿದ್ದಾರೆ. ಹವ್ಯಾಸಿ ಯಕ್ಷಗಾನ ಅರ್ಥಧಾರಿಯಾಗಿ, ಕಲಾವಿದರಾಗಿ, ಬರಹಗಾರನಾಗಿ ಚಿರಪರಿಚಿತರಾಗಿರುವ ಕಾರಂತರು ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೂ ಪಾತ್ರರಾಗಿರುವರು.

ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರ ತಂಡವನ್ನು ಐತಾಳರ ಜೊತೆಗೂಡಿ ಪ್ರಪ್ರಥಮ ಬಾರಿಗೆ ದುಬಾ, ಅಬುದಾಬಿಗೆ ಕರೆದೊಯ್ದಿರುವ ನಿತ್ಯಾನಂದ ಕಾರಂತರು ಅರ್ಹವಾಗಿಯೇ ಅನೇಕ ಸನ್ಮಾನಗಳಿಗೆ ಪಾತ್ರರಾಗಿದ್ದಾರೆ. ದುಬಾ ಕನ್ನಡ ಸಂಘದಿಂದ, ಅಮೇರಿಕಾದ ಡೆಟ್ರೋಯ್ಡ್‌ನ ಕನ್ನಡ ಸಂಘದಿಂದ, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಮಂಗಳೂರು ತಾಲೂಕು ಸಮ್ಮೇಳನದಲ್ಲೂ ಸನ್ಮಾನಿತರಾಗಿದ್ದಾರೆ.

ಅಗಸ್ಟ್ 11, ಗುರುವಾರ ಸಂಜೆ 5ಕ್ಕೆ ಮಂಗಳೂರು ಡಾನ್‌ಬಾಸ್ಕೋ ಹಾಲ್‌ನಲ್ಲಿ ಶೇಣಿ ಸಂಸ್ಮರಣೆ – ಶೇಣಿ ಕಲೋತ್ಸವ ಪುರಸ್ಕಾರ – ಯಕ್ಷಗಾನ ಬಯಲಾಟ ಜರಗಲಿರುವುದೆಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಶ್ರೀ ಎಸ್. ಪ್ರದೀಪ ಕುಮಾರ ಕಲ್ಕೂರ ತಿಳಿಸಿದ್ದಾರೆ.

Comments are closed.