ಮಂಗಳೂರು,ಜುಲೈ.16: ಮಂಗಳೂರು ವಿಶ್ವವಿದ್ಯಾನಿಲಯದ ವಿವಿಧ ಸ್ನಾತಕೋತ್ತರ ಪದವಿ ಕೋರ್ಸ್‌ಗಳನ್ನು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಪರಿಚಯಿಸುವ ಉದ್ದೇಶದಿಂದ ಕ್ಯಾಂಪಸ್ ನೋಡ ಬನ್ನಿ ಎನ್ನುವ “ಓಪನ್ ಹೌಸ್’ ಕಾರ್ಯಕ್ರಮಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ವಿಶ್ವ ವಿದ್ಯಾನಿಲಯವು ಸಮಾಜದಲ್ಲಿ ಎದುರಾಗುವ ಸವಾಲು ಮತ್ತು ಸಮಸ್ಯೆಗಳ ಬಗ್ಗೆ ವಿಧ್ಯಾರ್ಥಿಗಳಲ್ಲಿ ಸ್ಥೈರ್ಯ ಹಾಗೂ ಸಮಸ್ಯೆಗಳ ಕುರಿತು ಸಂಶೋಧನೆ ನಡೆಸಲು ಪ್ರೋತ್ಸಾಹ ನೀಡುವಂತಹ ಸೃಜನಶೀಲ ವ್ಯಕ್ತಿತ್ವಗಳನ್ನು ಸೃಷ್ಟಿಸುವ ಕೇಂದ್ರಗಳಾಗಬೇಕು ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಮಾಹಿತಿ ಕೈಪಿಡಿಯನ್ನು ಮಂಗಳೂರು ಪೊಲೀಸ್ ಕಮಿಷನರ್ ಚಂದ್ರಶೇಖರ್ ಎಂ. ಬಿಡುಗಡೆಗೊಳಿಸಿ ಮಾತನಾಡಿ, ಜಿಲ್ಲೆಯ ಪೊಲೀಸ್ ಇಲಾಖೆಯ ಕಾನ್‌ಸ್ಟೆಬಲ್‌ಗಳಲ್ಲಿ ಶೇ. 36ರಷ್ಟು ಮಂದಿ ಹೊರಜಿಲ್ಲೆಯವರಾಗಿದ್ದಾರೆ. ಅವರಿಗೆ ತುಳು ಭಾಷೆಯ ಪರಿಚಯವಿಲ್ಲದೆ ಜನರೊಂದಿಗೆ ಸಂವಹನ ನಡೆಸಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಮಂಗಳೂರು ವಿಶ್ವವಿದ್ಯಾನಿಲಯದ ನೇತೃತ್ವದಡಿ ಎರಡು ಬ್ಯಾಚ್‌ಗಳಂತೆ 84 ಮಂದಿ ಪೊಲೀಸರಿಗೆ ತುಳು ಭಾಷೆಯ ತರಬೇತಿ ನೀಡಲಾಗಿದೆ. ಈ ಮೂಲಕ ಪೊಲೀಸರ ಹಾಗೂ ಜನರ ಬಾಂಧವ್ಯ ಗಟ್ಟಿಯಾಗಬಹುದು. ಪೊಲೀಸ್ ಇಲಾಖೆಯ ಹಾಗೂ ಮಂಗಳೂರು ವಿ.ವಿ. ನಂಟು ಯಶಸ್ವಿಯಾಗಿ ಮುಂದುವರಿದಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿ.ವಿ. ಉಪಕುಲಪತಿ ಪ್ರೊ.ಭೈರಪ್ಪ ಮಾತನಾಡಿ, ಮಂಗಳೂರು ವಿ.ವಿ. ವಿವಿಧ ವಿಭಾಗಗಳು ತಯಾರಿಸಿದ 17 ವರದಿಗಳನ್ನು ಕೇಂದ್ರದ ಮಾನವ ಸಂಪದ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ.ಕೆ.ಎಂ. ಲೋಕೇಶ್ ಸ್ವಾಗತಿಸಿದರು. ಕನ್ನಡ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಧನಂಜಯ ಕುಂಬ್ಳೆ ಕಾರ್ಯಕ್ರಮ ನಿರ್ವಹಿಸಿದರು.
ಓಪನ್‌ಹೌಸ್ ಕಾರ್ಯಕ್ರಮದ ಸಂಯೋಜಕ ಪ್ರೊ.ಟಿ.ಎನ್. ಶ್ರೀಧರ್ ವಂದಿಸಿದರು.
Comments are closed.