
ಮಂಗಳೂರು,ಜುಲೈ.12: ತುಳುನಾಡಿನ ಇತಿಹಾಸದ ಸೂಕ್ಷ್ಮಅಂಶಗಳನ್ನು ಪರಿಗಣಿಸಿದಂತೆ ಕಂಡುಬಂದಿಲ್ಲ. ಇಲ್ಲಿನ ಪುರಾತನ ಚರಿತ್ರೆಯ ಬಗ್ಗೆ ನಿರ್ಲಕ್ಷ ವಹಿಸಲಾಗಿದೆ. ಆದರೆ ಬಳಿಕ ಬಂದ ದೇಶೀಯ ಇತಿಹಾಸಕಾರರು ತುಳು ನಾಡಿನ ಚರಿತ್ರೆಯ ಸ್ಪಷ್ಟ ಚಿತ್ರಣ ನೀಡಿದ್ದಾರೆ ಎಂದು ಖ್ಯಾತ ಇತಿಹಾಸ ತಜ್ಞ ಪ್ರೊ.ಕೇಶವನ್ ವೆಲುತಾಟ್ ಹೇಳಿದ್ದಾರೆ.
ಅವರಿಂದ ಸಂತ ಅಲೋಶಿಯಸ್ ಕಾಲೇಜಿನ ಇತಿಹಾಸ ವಿಭಾಗದ ವತಿಯಿಂದ ರಚಿತ ‘ದಕ್ಷಿಣ ಕನ್ನಡ ಆಫ್ಟರ್ 1947- ಸಮ್ ರಿಫ್ಲೆಕ್ಷನ್ಸ್‘ ಎಂಬ ಪುಸ್ತಕವನ್ನು ನಗರದ ಸಂತ ಅಲೋಶಿಯಸ್ ಕಾಲೇಜು ಸಭಾಂಗಣದಲ್ಲಿ ಬಿಡುಗಡೆಗೊಳಿಸಿ ಬಳಿಕ ತುಳುನಾಡಿನ ಇತಿಹಾಸದ ಬಗ್ಗೆ ಉಪನ್ಯಾಸ ನೀಡಿದರು. ಒಂದು ಕಾಲದ ಚರಿತ್ರೆ ಆ ಕಾಲದ ಘಟನೆಗಳ ದಾಖಲೆಯಾಗಬೇಕೇ ಹೊರತು ಆ ಕಾಲದ ವಾಸ್ತವವನ್ನು ಮರೆಮಾಚುವ ಅಥವಾ ನಿರಾಕರಿಸುವಂತಿರಬಾರದು.

ಚರಿತ್ರೆ ಭವಿಷ್ಯದಲ್ಲಿ ಜನರ ಜ್ಞಾನ ಸಂಪಾದನೆಗೆ ಸಹಾಯವಾಗಬೇಕು ಎಂದರು. ಭಾರತದಲ್ಲಿ ವಸಾಹತುಶಾಹಿ ಆಳ್ವಿಕೆ ಆರಂಭವಾದ ಬಳಿಕ ಸ್ಥಳೀಯವಾಗಿದ್ದ ಜ್ಞಾನ ಸಂಪತ್ತಿನ ಬಗ್ಗೆ ತಿರಸ್ಕಾರದ ಭಾವನೆ ಹೊಂದಿರುವುದು ಕಂಡುಬರುತ್ತದೆ. ತುಳುನಾಡಿನ ಬಗ್ಗೆ ಬಾಸೆಲ್ ಮಿಶನರಿ ಕಾಲದಲ್ಲಿ ಅದ್ಭುತವಾದ ದಾಖಲೀಕರಣ ಕಾರ್ಯ ನಡೆಯಿತು. ಇಲ್ಲಿನ ಭೂತಾರಾಧನೆಯ ಸಂಧಿ, ಪಾಡ್ದನಗಳನ್ನು ಸಂಗ್ರಹಿಸಲಾಯಿತು. ಆದರೆ ಚರಿತ್ರೆಯ ದಾಖಲಾತಿಯ ಸಂದರ್ಭದಲ್ಲಿ ಇಲ್ಲಿನ ಭೂತಾ ರಾಧನೆಯನ್ನು ‘ಡೆವಿಲ್ ವರ್ಷಿಪ್’ ಎಂದು ಕರೆದರು. ತುಳುನಾಡಿನ ಜನರು ಡೆವಿಲ್(ರಾಕ್ಷಸರು)ಗಳನ್ನು ಪೂಜಿಸುವವರು ಎಂದು ದಾಖಲಿಸಿದರು.
ಅಲ್ಲದೆ, ತುಳುನಾಡಿನ ಮೂಲ ನಿವಾಸಿಗಳಾದ ಕೊರಗ ಸಮುದಾಯ, ಅವರ ರಾಜನಾಗಿದ್ದ ಭಾಷಿಕನ ಬಗ್ಗೆ ದಾಖಲಾತಿಗಳು ಈ ಚರಿತ್ರೆಯಲ್ಲಿ ದೊರಕುವುದಿಲ್ಲ. ಆದರೆ ನಂತರ ಬಂದ ಇಲ್ಲಿನ ಸ್ಥಳೀಯರಾದ ದೇಶಿಯ ಇತಿಹಾಸಕರು ಪ್ರಥಮ ಬಾರಿಗೆ ತುಳುನಾಡು ಕರ್ನಾಟಕದ ಒಂದು ಭಾಗ ಎಂದು ದಾಖಲಿಸಿದ್ದಾರೆ ಎಂದವರು ವಿವರಿಸಿದರು.
ಸಾಹಿತಿಗಳಾದ ಮಂಜೇಶ್ವರ ಗೋವಿಂದ ಪೈ, ಕಯ್ಯರ ಕಿಂಞಣ್ಣ ರೈ, ಶೀನಪ್ಪ ಹೆಗಡೆ ಮೊದಲಾದವರ ಮೂಲಕ ತುಳುನಾಡಿನ ಇತಿಹಾಸದ ಬಗ್ಗೆ ಕೆಲವು ಮಾಹಿತಿಗಳು ದೊರಕುತ್ತವೆ ಎಂದರು. ತುಳುನಾಡಿನ ಚರಿತ್ರೆಯಲ್ಲಿ ಇಲ್ಲಿನ ಗ್ರಾಮ ಪದ್ಧತಿ, ಇಲ್ಲಿನ ವಸಾಹತುಶಾಹಿ ಆಳ್ವಿಕೆಗೆ ಮೊದಲಿನ ಆಡಳಿತ ಪದ್ಧತಿ ಎಲ್ಲವೂ ಒಳಗೊಂಡಿದೆ ಎಂದು ಕೇಶವನ್ ವೆಲುತಾಟ್ ತಿಳಿಸಿದರು.
ಸಮಾರಂಭದಲ್ಲಿ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ರೆಕ್ಟರ್ ವಂ.ಡಿಯೋನಿಸಿಯಸ್ ವಾಝ್, ಕಾಲೇಜಿನ ಪ್ರಭಾರ ಪ್ರಾಂಶುಪಾಲ ವಂ.ಮೆಲ್ವಿನ್ ಡಿಕುನ್ಹಾ, ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ವಿಶಾನ್ಝ್ ಪಿಂಟೊ ಮೊದಲಾದವರು ಉಪಸ್ಥಿತರಿದ್ದರು.
Comments are closed.