ಕರಾವಳಿ

ದಾವೂದ್ ಇಬ್ರಾಹಿಂನ ‘ಡಿ’ ಕಂಪೆನಿಗೆ ಮಂಗಳೂರು ಮೂಲದ ವ್ಯಕ್ತಿ ಸಂಪರ್ಕದೂತ : ಸಿಸಿಬಿಯಿಂದ ಸ್ಫೋಟಕ ಮಾಹಿತಿ

Pinterest LinkedIn Tumblr

Davud_D_Compeny

ಬೆಂಗಳೂರು / ಮಂಗಳೂರು : ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಭೂಗತ ದೊರೆ ದಾವೂದ್ ಇಬ್ರಾಹಿಂನ ‘ಡಿ’ ಕಂಪೆನಿಗೆ ಸಂಪರ್ಕದೂತನಾಗಿ ಮಂಗಳೂರು ಮೂಲದ ವ್ಯಕ್ತಿಯೊಬ್ಬ ಕಾರ್ಯನಿರ್ವಹಿಸುತ್ತಿದ್ದ ಎಂಬ ಸ್ಫೋಟಕ ಮಾಹಿತಿಯೊಂದು ಬೆಳಕಿಗೆ ಬಂದಿದೆ.

ಸಿಸಿಬಿ ನಡೆಸಿ ಮಹತ್ವದ ತನಿಖೆಯಲ್ಲಿ ಈ ಮಾಹಿತಿ ತಿಳಿದು ಬಂದಿದ್ದು, ದಾವೂದ್ ಇಬ್ರಾಹಿಂನ ‘ಡಿ’ ಕಂಪೆನಿಗೆ ಸಂಪರ್ಕ ಕೊಂಡಿಯಾಗಿ ಕಾರ್ಯಾಚರಿಸುತ್ತಿದ್ದ ವ್ಯಕ್ತಿಯನ್ನು ಮಂಗಳೂರು ಮೂಲದ ರಾಕೇಶ್ ಅಲಿಯಾಸ್ ಅಲ್ತಾಫ್ ಎಂದು ಹೆಸರಿಸಲಾಗಿದೆ.

ಈ ಹಿನ್ನೆಲೆಯಲ್ಲಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ರಾಕೇಶ್ ಪತ್ತೆಗೆ ಸಿಸಿಬಿ ತೀವ್ರ ಕಸರತ್ತು ನಡೆಸಿದೆ. ಕೆಲ ದಿನಗಳ ಹಿಂದೆ ಇಂಟರ್ಪೋಲ್ ಮೂಲಕ ಆತನ ಬಂಧನಕ್ಕೆ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿದೆ. ರಾಜ್ಯದಲ್ಲಿ ಹಿಂದೂ ಪರ ಸಂಘಟನೆ ನೇತಾರರ ಹತ್ಯೆ ಹಾಗೂ ಕೋಮುದಳ್ಳುರಿ ಹುಟ್ಟು ಹಾಕಲು ಸಂಚು ರೂಪಿಸಿರುವ ಡಿ ಕಂಪೆನಿಗೆ ರಾಕೇಶ್ ಸ್ವಯಂ ಸೇವಕರ ನಿಯೋಜನೆಗೆ ಮುಂದಾಗಿದ್ದ ಎಂಬ ಮಾಹಿತಿಯು ಲಭ್ಯವಾಗಿದೆ.

ಉಳ್ಳಾಲ ಮೂಲದ ಅಲ್ತಾಫ್ ರಾಕೇಶ್ ಅಲಿಯಾಸ್ ಅಲ್ತಾಫ್ ಮೂಲತಃ ಮಂಗಳೂರಿನ ಉಳ್ಳಾಲ ಕಡೆಯವನು. ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿರುವ ಆತ, ದಶಕಗಳಿಂದ ಕರಾವಳಿ ಪ್ರದೇಶದ ಭೂಗತ ಪಾತಕ ಲೋಕದಲ್ಲಿ ಸಕ್ರಿಯವಾಗಿದ್ದಾನೆ.

ಕರಾವಳಿ ನಂಟಿನ ಮೂಲಕವೇ ಆತ ಡಿ-ಕಂಪೆನಿ ಸಂಪರ್ಕಕ್ಕೆ ಬಂದಿದ್ದಾನೆ. ಮುಸಲ್ಮಾನನಾದರೂ ತನ್ನ ಹೆಸರನ್ನು ಹಿಂದೂ ಧರ್ಮೀಯನಂತೆ ಬದಲಾಯಿಸಿಕೊಂಡಿದ್ದಾನೆ. ತನ್ನ ಪಾತಕಿ ಕೃತ್ಯಗಳ ರಕ್ಷಣೆಗೆ ಆತ ಹಿಂದೂ ಹೆಸರು ಬಳಸಿದ್ದಾನೆ. ದುಬೈನಲ್ಲಿ ಆತ ಅಡಗಿರುವ ಬಗ್ಗೆ ಮಾಹಿತಿ ಇದೆ. ಈಗಾಗಲೇ ಮಂಗಳೂರು, ಮುಂಬಯಿ ಹಾಗೂ ಬೆಂಗಳೂರಿನಲ್ಲಿ ಅಲ್ತಾಫ್ ನ ಸಂಪರ್ಕದಲ್ಲಿದ್ದ ಕೆಲವರ ವಿಚಾರಣೆ ನಡೆದಿದೆ ಎನ್ನಲಾಗಿದೆ.

2015ರ ಆಗಸ್ಟ್ ನಲ್ಲಿ ನಗರದ ರೆಸಿಡೆನ್ಸಿ ರಸ್ತೆಯ ಟೈಮ್ಸ್ ಬಾರ್ ಆಯಂಡ್ ರೆಸ್ಟೋರೆಂಟ್ನಲ್ಲಿ ನಡೆದಿದ್ದ ಬಾರ್ನ ಪಾಲುದಾರ ಹಾಗೂ ಮಂಗಳೂರು ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ಆಖ್ತರ್ ಶಮಿ ಅಲಿಯಾಸ್ ಚೇತನ್ ಮೇಲಿನ ಶೂಟೌಟ್ ಪ್ರಕರಣದ ತನಿಖೆ ಜಾಡು ಹಿಡಿದು ಸಾಗಿದ ಸಿಸಿಬಿಗೆ, ರಾಕೇಶ್ ನ ‘ಸಂಪರ್ಕ’ ಕೊಂಡಿಗಳು ಪತ್ತೆಯಾಗಿವೆ.

ದಶಕಗಳಿಂದ ಮಂಗಳೂರು, ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಪ್ರದೇಶದಲ್ಲಿ ಅಪರಾಧ ಚಟುವಟಿಕೆಯಲ್ಲಿ ತೊಡಗಿದ್ದ ರಾಕೇಶ್, ತನ್ನ ಕಾರ್ಯವ್ಯಾಪ್ತಿಯನ್ನು ಬೆಂಗಳೂರಿಗೂ ವಿಸ್ತರಿಸಲು ಯತ್ನಿಸಿದ್ದಾನೆ. ಆತನ ಬೆನ್ನಿಗಿರುವುದು ‘ಡಿ’ ಕಂಪೆನಿಯ ಸೇನಾಧಿಪತಿ ಛೋಟಾ ಶಕೀಲ್ ಎಂಬ ಮಾಹಿತಿ ಈ ರಹಸ್ಯ ಕಾರ್ಯಾಚರಣೆಯಿಂದ ತಿಳಿದು ಬಂದಿದೆ.

ಮುಂಬಯಿ ಪಾತಕಿಗಳ ಮೂಲಕ ಛೋಟಾ ಶಕೀಲ್ ಸ್ನೇಹ ವಲಯಕ್ಕೆ ಬಂದ ರಾಕೇಶ್, ಅನಂತರ ರಾಜ್ಯದಲ್ಲಿ “ಡಿ’ ಕಂಪೆನಿಯ ಸಂಘಟನೆಗೆ ಹೊಣೆಗಾರಿಕೆ ಹೊತ್ತಿದ್ದಾನೆ. ಕೇರಳ ಮೂಲದ ರಶೀದ್ ಮಲಬಾರಿ, ಮುಂಬೈನ ಜಾವೇದ್ ಚಿಕ್ನಾನ ರೀತಿ ಛೋಟಾ ಶಕೀಲ್ನ ನಂಬಿಕಸ್ತ ಬಂಟರ ಪಡೆಯಲ್ಲಿ ರಾಕೇಶ್ ಕೂಡ ಸ್ಥಾನ ಪಡೆದಿದ್ದಾನೆ ಎನ್ನಲಾಗಿದೆ.

ಎಂಟು ತಿಂಗಳ ಹಿಂದೆ ಮಂಗಳೂರು ಕಾರಾಗೃಹದಲ್ಲಿ ನಡೆದಿದ್ದ ಎರಡು ಗುಂಪುಗಳ ಘರ್ಷಣೆಯಲ್ಲಿ ಹತನಾದ ಛೋಟಾ ಶಕೀಲ್ ಸಹಚರ, ಮಂಗಳೂರಿನ ಕುಖ್ಯಾತ ಪಾತಕಿ ಮಾಡೂರ್ ಯೂಸುಫ್ ಗೆ ಕೂಡ ರಾಕೇಶ್ ಜತೆ ಆಪ್ತ ಸ್ನೇಹವಿತ್ತು. ಅಲ್ಲದೆ ಛೋಟಾ ಶಕೀಲ್ ತಂಡಕ್ಕೆ ರಾಕೇಶ್ ಮೂಲಕವೇ ಮಾಡೂರ್ ಯೂಸೂಫ್ ಸೇರಿದ್ದ. ಹೀಗಾಗಿ ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಸ್ಥಳೀಯವಾಗಿ ಅಪರಾಧ ಚಟುವಟಿಕೆಯಲ್ಲಿ ತೊಡಗಿರುವ ಕ್ರಿಮಿನಲ್ ಗಳನ್ನು ಹುಡುಕಿ ಡಿ-ಕಂಪೆನಿಗೆ ಕೊಂಡಿ ಹಾಕಿದ್ದಾನೆ ಎಂದು ಮೂಲಗಳಿಂದ ತಿಳಿದು ಬಂದಿದೆ.

Comments are closed.