ವರದಿ: ಎಂ.ಇಕ್ಬಾಲ್ ಉಚ್ಚಿಲ, ದುಬೈ
ಫೋಟೋ: ಅಶೋಕ್ ಬೆಳ್ಮಣ್-ಉದಯ್ ದುಬೈ
ದುಬೈ, ಸೆ.18: ಯುಎಇಯಲ್ಲಿ ಮೊದಲ ಬಾರಿಗೆ ಆಯೋಜಿಸಲಾದ ಸಾರ್ವಜನಿಕ ಶ್ರೀ ಗಣೇಶ ಉತ್ಸವದಲ್ಲಿ ಬೆಳಗ್ಗೆಯಿಂದ ಸಂಜೆಯ ವರೆಗೆ ಸಾವಿರಾರು ಮಂದಿ ಭಕ್ತರು ಪಾಲ್ಗೊಳ್ಳುವ ಮೂಲಕ ದೇವರ ಕೃಪೆಗೆ ಪಾತ್ರರಾದರು. ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಗಣಪತಿಯನ್ನು ಪೂಜಿಸುವ ಕಾರ್ಯಕ್ರಮದಲ್ಲಿ ಯುಎಇಯಲ್ಲಿ ಸಾವಿರಾರು ಮಂದಿ ಸೇರಿದ್ದು, ಇತಿಹಾಸದ ಪುಟ ಸೇರುವಂತೆ ಮಾಡಿದೆ.
ಯುಎಇಯಲ್ಲಿರುವ ಹಲವಾರು ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ಮಾರ್ಗದೀಪ ಸಾಂಸ್ಕೃತಿಕ ಸಮಿತಿ ಆಶ್ರಯದಲ್ಲಿ ದುಬೈಯ ಅಲ್ ಬರ್ಶಾದಲ್ಲಿರುವ ಜೆಎಸ್ಎಸ್ ಇಂಟರ್ನ್ಯಾಷನಲ್ ಸ್ಕೂಲ್ ಸಭಾಂಗಣದಲ್ಲಿ ಸಾರ್ವಜನಿಕ ಗಣೇಶ ಉತ್ಸವವನ್ನು ಪ್ರತಿಷ್ಠಾಪಿಸಿ, ವಿಸರ್ಜಿಸಲಾಯಿತು.
ಭವ್ಯ ವೇದಿಕೆಯಲ್ಲಿ ಗಣಪತಿ ವಿಗ್ರಹ ಪ್ರತಿಷ್ಠಾಪನೆ
ಜೆಎಸ್ಎಸ್ ಇಂಟರ್ನ್ಯಾಷನಲ್ ಸ್ಕೂಲ್ ಸಭಾಂಗಣದ ಭವ್ಯ ವೇದಿಕೆಯಲ್ಲಿ ಬೆಳಗ್ಗೆ ಚಂಡೆ-ಕೊಂಬು-ವಾದ್ಯದ ವೈಭವ ಪ್ರೇರಿತ ಮೆರವಣಿಗೆಯಲ್ಲಿ ತಂದು ಪ್ರತಿಷ್ಠಾಪಿಸಲಾಯಿತು.
ಸಾರ್ವಜನಿಕ ಶ್ರೀ ಗಣೇಶ ಉತ್ಸವ ಸಮಿತಿಯ ಗೌರವಾಧ್ಯಕ್ಷ ಹಾಗೂ ದುಬೈ ಫೋರ್ಚುನ್ ಗ್ರೂಪ್ ಆಫ್ ಹೊಟೇಲ್ಸ್ನ ಚೇರ್ಮೆನ್ ಪ್ರವೀಣ್ ಶೆಟ್ಟಿ, ದುಬೈ ಆ್ಯಕ್ಮೆ ಬಿಲ್ಡಿಂಗ್ ಮೆಟೀರಿಯಲ್ಸ್ನ ಆಡಳಿತ ನಿರ್ದೇಶಕ ಹರೀಶ್ ಶೇರಿಗಾರ್, ಚಿಲ್ಲಿವಿಲಿಯ ಸತೀಶ್ ವೆಂಕಟರಮಣ, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತಮ ಶೆಟ್ಟಿ, ಸಾರ್ವಜನಿಕ ಶ್ರೀ ಗಣೇಶ ಉತ್ಸವ ಸಮಿತಿ ಅಧ್ಯಕ್ಷ ಪ್ರಭಾಕರ ಅಂಬಲತೆರೆ, ಮನೋಹರ್ ತೋನ್ಸೆ ಸೇರಿದಂತೆ ಮತ್ತಿತರರು ಮೆರವಣಿಗೆಯಲ್ಲಿ ಪಾಲ್ಗೊಂಡು ವೇದಿಕೆಯಲ್ಲಿ ದೀಪ ಬೆಳಗಿಸುವ ಮೂಲಕ ಪ್ರತಿಷ್ಠಾಪನೆಗೆ ಚಾಲನೆ ನೀಡಿದರು.
ದೇವರ ಕೃಪೆಗೆ ಪಾತ್ರರಾದ ಸಾವಿರಾರು ಮಂದಿ ಭಕ್ತರು: ಆಶೀರ್ವಚನ ನೀಡಿದ ಯೋಗೇಶ್ವರೇಶ್ವರ ಸ್ವಾಮೀಜಿ
ಬೆಳಗ್ಗೆಯಿಂದ ರಾತ್ರಿ 7.30ರ ವರೆಗೆ ನಡೆದ ಪೂಜಾ ವಿಧಿ-ವಿಧಾನದಲ್ಲಿ ಸಾವಿರಾರು ಮಂದಿ ಭಕ್ತರು ಪಾಲ್ಗೊಂಡರು. ಕುಟುಂಬ ಸಮೇತರಾಗಿ ಬಂದ ಭಕ್ತಾಧಿಗಳು ಪೂಜಾ ವಿಧಿ-ವಿಧಾನದ ವೇಳೆ ಆಸನ ಬಿಟ್ಟು ಕದಲಲಿಲ್ಲ. ಪೂಜೆಯ ವೇಳೆ ಭಕ್ತಾಧಿಗಳಿಗೆ ಹಣ್ಣು-ಕಾಯಿ ನೀಡಲಾಯಿತು. ಮಹಾ ಮಂಗಳಾರತಿ, ಮಹಾಪ್ರಸಾದ ವಿತರಣೆ ಕೂಡಾ ನಡೆಯಿತು. ಪುರೋಹಿತರಾದ ಲಕ್ಷ್ಮಿಕಾಂತ್ ಭಟ್ ಪೂಜಾ ವಿಧಿ-ವಿಧಾನವನ್ನು ನೆರವೇರಿಸಿದರು. ಪೂಜೆಯ ವೇಳೆ ಶ್ರೀ ಕ್ಷೇತ್ರ ಮರಕಡದ ಶ್ರೀ ನರೇಂದ್ರನಾಥ ಯೋಗೇಶ್ವರೇಶ್ವರ ಸ್ವಾಮೀಜಿ ಪ್ರವಚನಗೈದರು. ಈ ವೇಳೆ ಅವರನ್ನು ಸನ್ಮಾನಿಸಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮ
ಬೆಳಗ್ಗೆಯಿಂದ ಸಂಜೆಯ ವರೆಗೆ ನಡೆದ ಪೂಜೆಯ ಮಧ್ಯೆ ಯುಎಇಯ ವಿವಿಧ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ದುಬೈ ಆ್ಯಕ್ಮೆ ಬಿಲ್ಡಿಂಗ್ ಮೆಟೀರಿಯಲ್ಸ್ನ ಆಡಳಿತ ನಿರ್ದೇಶಕ ಹಾಗೂ ಖ್ಯಾತ ಗಾಯಕರೂ ಆಗಿರುವ ಹರೀಶ್ ಶೇರಿಗಾರ್, ವಿಜಯ ಭಟ್ ತಮ್ಮ ಸುಮಧುರ ಕಂಠದ ಮೂಲಕ ಭಕ್ತಿಯ ಚಿಲುಮೆಯನ್ನು ಹರಿಸಿದರು. ಈರಣ್ಣ ಮೂಲಿಮನಿ ತಂಡದವರಿಂದ ಸುಗಮ ಸಂಗೀತ ಹಾಗೂ ವಿವಿಧ ನೃತ್ಯಪಟುಗಳಿಂದ ನೃತ್ಯ ಕಾರ್ಯಕ್ರಮ ಕೂಡಾ ನಡೆಯಿತು. ಈ ಮಧ್ಯೆ ಕರಾವಳಿಯ ಹುಲಿವೇಷ ಎಲ್ಲರ ಗಮನ ಸೆಳೆಯಿತು.
ಯುಎಇಯ ವಿವಿಧ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಿತು.
ವೈಭವಪೂರಿತ ಶೋಭಾಯಾತ್ರೆ-ಗಣಪತಿ ವಿಗ್ರಹ ವಿಸರ್ಜನೆ
ಬೆಳಗ್ಗೆ ಪ್ರತಿಷ್ಠಾಪನೆಗೊಂಡ ಗಣಪತಿ ಮೂರ್ತಿಯನ್ನು ಪೂಜಿಸಿದ ಬಳಿಕ ಸಂಜೆ ವಿಸರ್ಜಿಸಲಾಯಿತು. ಬೆಳಗ್ಗೆಯಿಂದಲೇ ಯುಎಇಯ ವಿವಿಧ ಭಜನಾ ಮಂಡಳಿಯವರು ಭಜನೆ-ಸಂಕೀರ್ತನೆಯನ್ನು ನಡೆಸಿಕೊಟ್ಟರು.
ಭಕ್ತಾಧಿಗಳ ಸಮ್ಮುಖದಲ್ಲಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದ ಬಳಿಕ ಸಂಜೆ ನಡೆದ ಶೋಭಯಾತ್ರೆಯಲ್ಲಿ ಗಣಪತಿಯ ವಿಗ್ರಹವನ್ನು ವಿಸರ್ಜಿಸಲಾಯಿತು. ಶೋಭಯಾತ್ರೆಯಲ್ಲಿ ಚಂಡೆ-ವಾದ್ಯ, ಹುಲಿವೇಷದ ತಂಡದವರು ಶೋಭಯಾತ್ರೆಗೆ ಇನ್ನಷ್ಟು ಮೆರುಗು ತಂದರು.
ಮಧ್ಯಾಹ್ನದ ಅನ್ನಸಂತರ್ಪಣೆಯನ್ನು ದಿವೀಶ್ ಆಳ್ವರ ನೇತೃತ್ವದಲ್ಲಿ ಬಾಲಕೃಷ್ಣ ಶೆಟ್ಟಿ ಮಡೂರುಗುತ್ತು ಹಾಗೂ ಅವರ ತಂಡ ಅಚ್ಚುಕಟ್ಟಾಗಿ ನೆರವೇರಿಸಿತು.
ಸಭಾ ಕಾರ್ಯಕ್ರಮ
ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ ಕೃಷ್ಣ ಪಾಲೇಮಾರ್, ಉದಯವಾಣಿ ಪತ್ರಿಕೆಯ ನ್ಯೂಸ್ ಬ್ಯೂರೋ ಮುಖ್ಯಸ್ಥ ಮನೋಹರ್ ಪ್ರಸಾದ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಗಣಪತಿ ಉತ್ಸವಕ್ಕೆ ಶುಭ ಹಾರೈಸಿದರು. ಇದೇ ವೇಳೆ ಅತಿಥಿಗಳನ್ನು ಸನ್ಮಾನಿಸಲಾಯಿತು. ಇದೇ ವೇಳೆ ವೇದಿಕೆಯಲ್ಲಿದ್ದ ಪ್ರವೀಣ್ ಶೆಟ್ಟಿ, ಹರೀಶ್ ಶೇರಿಗಾರ್, ಸತೀಶ್ ವೆಂಕಟರಮಣ, ಪ್ರಭಾಕರ ಅಂಬಲತೆರೆ, ಸರ್ವೋತಮ ಶೆಟ್ಟಿ ಹಾಗೂ ಬರಹಗಾರ, ಸಂಘಟಕ ಗಣೇಶ್ ರೈಯವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಅತಿಥಿಗಳನ್ನು ಪ್ರವೀಣ್ ಶೆಟ್ಟಿ ಸ್ವಾಗತಿಸಿದರು. ಗಣೇಶ್ ರೈ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
2 Comments
Shridhar
Good job, well detailed, well compiled and exhaustive.
Keep it up.
Prashant S.Rao
It was a unique & wonderful experience, in this part of the world, especially SHRI Ganesh Pooja & the Visarjan function was mesmerizing, fascinating, giving all the feel of divinity, festive spirit, joy, enjoyment of back home. Thanks for all the Sponsors, Organizers & everyone involved, who have worked so hard on it, for their all-out & astounding efforts………