ಕರಾವಳಿ

ಕರಾವಳಿಯ ಸಂಗೀತ ಮತ್ತು ನೃತ್ಯದ ಸಮಗ್ರ ಅಧ್ಯಯನಕ್ಕೆ ಸಂಶೋಧನಾ ಕೇಂದ್ರದ ಅಗತ್ಯ ಇದೆ : ಕಲಾಸಂಶೋಧಕಿ ಮನೋರಮಾ ಬಿ.ಎನ್

Pinterest LinkedIn Tumblr

DSC_1633

ಕರಾವಳಿಯ ಸಂಗೀತ ಮತ್ತು ನೃತ್ಯದ ಸಮಗ್ರ ಅಧ್ಯಯನಕ್ಕೆ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಸಂಶೋಧನಾ ಕೇಂದ್ರ ಆರಂಭಿಸುವ ಅಗತ್ಯ ಇದೆ, ಇದರಿಂದ ಕರಾವಳಿಯ ಸಮಗ್ರ ಕಲೆಗಳ ಅಧ್ಯಯನಕ್ಕೆ ಇದರಿಂದ ತುಂಬಾ ಸಹಕಾರಿಯಾಗಲಿದೆ ಎಂದು ಕಲಾಸಂಶೋಧಕಿ, ನೂಪುರ ಭ್ರಮರಿ ಸಂಪಾದಕಿ ಮನೋರಮಾ ಬಿ.ಎನ್ ಹೇಳಿದರು.

ಅವರು ಕಟೀಲಿನಲ್ಲಿ ಜರುಗಿದ 20ನೇ ಕರಾವಳಿ ಸಾಹಿತ್ಯ ಸಮ್ಮೇಳನದ ಎರಡನೇ ದಿನದ ಗೋಷ್ಟಿಯಲ್ಲಿ ಸಂಪನ್ಮೂಲ ವ್ಯಕ್ತ್ತಿಯಾಗಿ ಭಾಗವಹಿಸಿ ಕರಾವಳಿಯ ಕಲಾಕ್ಷೇತ್ರ : ಸಂಗೀತ ಮತ್ತು ನೃತ್ಯದಲ್ಲಿ ಹೊಸ ಬೆಳವಣಿಗೆಗಳು ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು.

ಹೊರರಾಜ್ಯಗಳಿಂದ ಕಲಿತು ಪ್ರಸಿದ್ಧಿಗೆ ಬಂದ ಗುರು-ಕಲಾವಿದರ ಸಂಖ್ಯೆಯೇ ಹೆಚ್ಚಾಗುತ್ತಿರುವಾಗ, ನಮ್ಮ ನಾಡಿನಲ್ಲಿ ಪಾರಂಪರಿಕವಾಗಿ ಇದ್ದ ಕಲಾಗುರುತುಗಳ ಬಗ್ಗೆ ಲಕ್ಷ್ಯವೇ ಇಂದಿನ ಕಾಲಕ್ಕೆ ಒದಗುತ್ತಿಲ್ಲ. ಇದರಿಂದ ಕರಾವಳಿಯದ್ದೇ ಅದ ಸ್ವಂತ, ಪುರಾತನ ಕಲಾಜಗತ್ತಿನ ಪರಿಚಯವೇ ಇಲ್ಲದೆ ಕೊಂಡಿಗಳೂ ಕಳಚಿಹೋಗಿವೆ. ಇದನ್ನು ವರುಶೋಧಿಸಿ ದಾಖಲೀಕರಣ ವಡುವ ಪ್ರಕ್ರಿಯ ಸಾಗಬೇಕಿದೆ. ಹಾಗೆ ನೋಡಿದರೆ ಯಕ್ಷಗಾನದಲ್ಲಿ ಈವರೆಗೆ ಆದ ಒಟ್ಟು ಸಂಶೋಧನೆಗಳಿಗೆ ಹೋಲಿಸಿದರೆ ಸಂಗೀತ ಮತ್ತು ನೃತ್ಯದಲ್ಲಿಯೇ ಕರ್ನಾಟಕದಲ್ಲಿ ಸಂಶೋಧನೆಗಳ ಪ್ರಮಾಣ ತೀರಾ ಕಡಿಮೆಯಿದೆ. ಯಾವುದೇ ಕಲೆಗಳಾದರೂ ಸರಿಯೇ, ಅವುಗಳನ್ನು ಬಳಕೆ ಮಾಡಿದಷ್ಟು ಅದರ ಶಕ್ತಿ ಹೆಚ್ಚುತ್ತದೆಯೇ ವಿನಾ ಸಂರಕ್ಷಣೆ ಎಂಬ ಹೆಸರಿನಲ್ಲಿ ಸುಮ್ಮನಿರಿಸಿದರೆ ಜಡ್ಡು ಹಿಡಿದುಹೋಗುತ್ತವೆ. ಸಂಗೀತ-ನೃತ್ಯಾದಿಗಳನ್ನು ಕಲಿಯುವವರ ಸಂಖ್ಯೆ ಹೆಚ್ಚಾಗಿದೆ, ಪರೀಕ್ಷೆಗಳನ್ನು ತೆಗೆದುಕೊಳ್ಳುವವರ ಸಂಖ್ಯೆ ಅಧಿಕವಾಗಿದೆ, ಕಾರ್ಯಕ್ರಮಗಳು ನಿರಂತರ ನಡೆಯುವಂತಾಗಿದೆ ಎಂದ ಮಾತ್ರಕ್ಕೆ ಕಲಾಕ್ಷೇತ್ರ ಪ್ರಗತಿ ಹೊಂದಿತೆಂದು ಅರ್ಥವಲ್ಲ, ಬೆಳವಣಿಗೆಗೂ, ಪ್ರಗತಿಗೂ ಇರುವ ಅಂತರವನ್ನು ಮೊದಲು ಮನಗಾಣಬೇಕು ಎಂದು ಎಂದು ಕರಾವಳಿಯ ಕಲಾಕ್ಷೇತ್ರಕ್ಕೆ ಸಂಬಂಧಿಸಿದಂತೆ ತಮ್ಮ ಸಂಶೋಧನಾ ಅನುಭವಗಳನ್ನೂ ಬಿಚ್ಚಿಟ್ಟರು.

ಶಾಸ್ತ್ರೀಯ, ಜಾನಪದ ಎಂಬ ಅವೈಜ್ಞಾನಿಕ ವರ್ಗೀಕರಣದಲ್ಲಿ ಕಲೆಗಳ, ಕಲಾವಿದರ ಮಧ್ಯೆ ದೊಡ್ಡ ಕಂದಕವೊಂದು 20ನೇ ಶತಮಾನದ ಮಧ್ಯಭಾಗದಲ್ಲಿ ಸೃಷ್ಟಿಯಾಗಿಹೋಗಿದೆ. ಭರತನಾಟ್ಯವೇ ಶ್ರೇಷ್ಟ ಕಲೆ ಎಂಬ ತಪ್ಪು ಗ್ರಹಿಕೆಯಿಂದಾಗಿ ಉಳಿದ ನೃತ್ಯಕಲೆಗಳ ಪಾರಂಪರಿಕ ಮಹತ್ತ್ವದ ಬಗ್ಗೆ ಗಮನ ಕಡಿಮೆಯಾಗಿದೆ. ಆದಾಗ್ಯೂ ಕಳೆದ 10-15 ವರುಷಗಳ ಅವಧಿಯಲ್ಲಿ ಅನೇಕ ಶಿಕ್ಷಣಸಂಸ್ಥೆಗಳ ಪ್ರಮುಖರಿಂದ, ಉತ್ಸವಗಳಿಂದ ಕರಾವಳಿಯಲ್ಲಿಯೂ ಒಂದಷ್ಟು ಜಾಗೃತಿ ಹುಟ್ಟಿಕೊಂಡಿದೆ. ಇಲ್ಲಿನ ವಿಮರ್ಶಾ ಕ್ಷೇತ್ರವಂತೂ ಬೆಂಗಳೂರಿನ ಬರೆವಣಿಗೆಯ ಮಟ್ಟಕ್ಕಿಂತಲೂ ಎಷ್ಟೋ ಹೆಚ್ಚಿದೆ. ಆದರೆ ಹಿಮ್ಮೇಳದವರ ಬೆಳವಣಿಗೆಯಲ್ಲಿ ಸೋಲುತ್ತಿದ್ದೇವೆ. ಪರವೂರಿನವರನ್ನೋ, ತಮಿಳ್ನಾಡಿನವರನ್ನೋ ಶ್ರೇಷ್ಠರೆಂಬ ಭಾವನೆಯಲ್ಲಿ ಕರೆಸಿ ಕಚೇರಿ-ಕಾರ್ಯಕ್ರಮ -ಗೋಷ್ಠಿಗಳನ್ನು ನಡೆಸಿದಾಕ್ಷಣ ಗುಣಮಟ್ಟ ಹೆಚ್ಚಾಗುವುದೋ, ಹಿರಿತನವೋ ಬಂದುಬಿಡುವುದಿಲ್ಲ; ಬದಲಾಗಿ ಹಿತ್ತಲ ಗಿಡದ ಔಷಧೀಯ ಅಂಶವನ್ನು ಗುರುತಿಸಿ ರಾಷ್ಟ್ರವ್ಯಾಪಿಯಾಗಿ ಹರಡುವಂತೆ ಮಾಡಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕರಾವಳಿಯ ಯಕ್ಷಗಾನ ಮತ್ತು ತಾಳಮದ್ದಳೆಯ ಹೊಸ ಬೆಳವಣಿಗೆಗಳ ಕುರಿತು ಯಕ್ಷಗಾನ ಪ್ರಸಂಗಕರ್ತ ವಿದ್ವಾಂಸ ಡಿ.ಎಸ್. ಶ್ರೀಧರ್ ವತ್ತು ಚಿತ್ರಕಲೆಯ ಕುರಿತು ಮಂಗಳೂರು ಚಿತ್ರಕಲಾ ಚಾವಡಿಯ ಅಧ್ಯಕ್ಷ ಗಣೇಶಸೋಮಯಾಜಿ ಉಪನ್ಯಾಸ ನೀಡಿದರು. ಸಭಾಧ್ಯಕ್ಷತೆಂನ್ನು ವಹಿಸಿದ ಹಿರಿಯ ರಂಗಕರ್ಮಿ ಸದಾನಂದ ಸುವರ್ಣ ಕರಾವಳಿಯ ಸಿನೆಮಾ ಮತ್ತು ರಂಗಭೂಮಿಯ ಕುರಿತ ಚರ್ಚೆಯ ಅಗತ್ಯವನ್ನು ಪ್ರಸ್ತುತಪಡಿಸಿ ಮಾತನಾಡಿದರು. ಭಾರತಿಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರೆ; ವೆಂಕಟೇಶ್ ನಾವಡ ಸ್ವಾಗತಿಸಿ, ಶೇಖರ್ ಅಜಾರ್ ವಂದಿಸಿದರು.

Write A Comment