ಬೆಂಗಳೂರು: ತನ್ನ ಸುಮಾರು 28 ವರ್ಷಗಳ ನಾಡು-ನುಡಿ ಸಹಿತವಾದ ಸಮಾಜಮುಖಿ ಸೇವೆ ಮತ್ತು ಸಾಧನೆಗಳಿಗಾಗಿ ‘ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ’ಗೆ ಆಯ್ಕೆಗೊಂಡಿರುವ ಬಹ್ರೈನ್ ವಾಸ್ತವ್ಯದ ಯಶಸ್ವಿ ಯುವ ಸಂಘಟಕ ತಥಾ ಸಮಾಜ ಸೇವಕ ಲೀಲಾಧರ್ ಬೈಕಂಪಾಡಿಯವರು ಹೊರನಾಡ ಸಾಧಕರಿಗೆ ಮೀಸಲಾಗಿರುವ 2014ರ ಸಾಲಿನ ಪ್ರತಿಷ್ಠಿತ ‘ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ’ಯನ್ನು ಇತ್ತೀಚೆಗೆ ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ. ಎಚ್. ಎಲ್. ಎನ್. ರಾವ್ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಜರಗಿದ ಅತಿ ಅದ್ದೂರಿಯ 40ನೆಯ ಆರ್ಯಭಟ ಸಾಂಸ್ಕೃತಿಕ ಉತ್ಸವದಲ್ಲಿ ಸ್ವೀಕರಿಸಿದರು.
ಈ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ನ್ಯಾಯಮೂರ್ತಿ ಡಾ. ಎಂ. ರಾಮ ಜೋಯಿಸ್ [ನಿವೃತ್ತ ಮುಖ್ಯ ನ್ಯಾಯಾಧೀಶರು, ಉಚ್ಛನ್ಯಾಯಾಲಯ ಮತ್ತು ಮಾಜಿ ರಾಜ್ಯಪಾಲರು], ನಾಡೋಜ ಡಾ. ಮಹೇಶ್ ಜೋಶಿ [ಹೆಚ್ಚುವರಿ ಮಹಾನಿರ್ದೇಶಕರು, ದೂರದರ್ಶನ ಕೇಂದ್ರ – ದೆಹಲಿ ದಕ್ಷಿಣ ವಲಯ] ಹಾಗೂ ಶ್ರೀ ಬಿ. ಜಿ. ಜ್ಯೋತಿಪ್ರಕಾಶ್ ಮಿರ್ಜಿ [ನಿವೃತ್ತ ಪೋಲಿಸ್ ಆಯುಕ್ತರು, ಬೆಂಗಳೂರು ನಗರ] ಮುಂತಾದ ಉನ್ನತ ಮಟ್ಟದ ಗಣ್ಯ ಅತಿಥಿಗಳು ಉಪಸ್ಥಿತರಿದ್ದು ವಿವಿಧ ಸಾಧಕರ ವಿಧ್ಯುಕ್ತ ಸಮ್ಮಾನಕ್ಕೆ ಸಾಕ್ಷಿಯಾದರು.
ಗತ 17 ವರ್ಷಗಳಿಂದ ಕೊಲ್ಲಿಯ ಬಹ್ರೈನ್ ದೇಶವನ್ನು ತನ್ನ ಕರ್ಮಭೂಮಿಯನ್ನಾಗಿಸಿಕೊಂಡಿರುವ ಲೀಲಾಧರ್ ಬೈಕಂಪಾಡಿಯವರು ಮೂಲತಃ ಮಂಗಳೂರಿನ ಬೈಕಂಪಾಡಿ ಗ್ರಾಮದವರಾಗಿದ್ದು, ಸಂಘ ಜೀವನದ ಮನೋಭಾವನೆಯೊಂದಿಗೆ ಸೇವೆ ಮತ್ತು ಸಹಾಯಕ್ಕೆ ಸದಾ ಅದ್ಯತೆಯನ್ನು ನೀಡುತ್ತಾ ಬಂದ ಕುಟುಂಬ ಪರಿಸರದಲ್ಲಿ ಹುಟ್ಟಿ ಬೆಳೆದವರಾಗಿರುತ್ತಾರೆ. ದೇಶ ಮತ್ತು ವಿದೇಶದಲ್ಲಿ ವಿವಿಧ ಸಮೂಹ ಮತ್ತು ಸಂಘಟನೆಗಳೊಂದಿಗೆ ತನ್ನನ್ನು ತೊಡಗಿಸಿಕೊಂಡಿರುವ ಇವರು ಓರ್ವ ಬಹುಮುಖ ಪ್ರತಿಭೆಯ ವ್ಯಕ್ತಿಯಾಗಿಯೂ ಅಂತೆಯೇ ಓರ್ವ ಬಹುವಿಧ ಕ್ಷೇತ್ರಗಳ ಸಾಧಕನಾಗಿಯೂ ತುಳು-ಕನ್ನಡಿಗರು ಹಾಗೂ ಭಾರತೀಯರ ಮಧ್ಯೆ ಗೌರವಿಸಲ್ಪಡುತ್ತಾರೆ.
ನಿರಂತರವಾದ ವೈವಿಧ್ಯಮಯ ಸೇವೆ ಮತ್ತು ಸಾಧನೆಗಳಿಗಾಗಿ ಇವರು ಈಗಾಗಲೇ ರಾಷ್ಟ್ರೀಯ ಭೂಷಣ ಪ್ರಶಸ್ತಿ, ರಾಷ್ಟ್ರೀಯ ಏಕತಾ ಪ್ರಶಸ್ತಿ ಮತ್ತು ಸಮಾಜ ರತ್ನ ರಾಷ್ಟ್ರೀಯ ಪುರಸ್ಕಾರಗಳಂತಹ ಮೂರು ರಾಷ್ಟ್ರೀಯ ಪ್ರಶಸ್ತಿಗಳನ್ನು ಪ್ರಸಕ್ತ ಒಂದೇ ವರ್ಷದ ಅವಧಿಯಲ್ಲಿ ಪಡೆದು ವರ್ಷದೊಳಗೆ ಸರಣಿಯಲ್ಲಿ ತ್ರೈ-ಪ್ರಶಸ್ತಿಗಳ ಪುರಸ್ಕಾರವನ್ನು ಸ್ವೀಕರಿಸಿದ ಕೊಲ್ಲಿ ಯಾ ಬಹ್ರೈನ್ ವಾಸ್ತವ್ಯದ ಪ್ರಥಮ ಅನಿವಾಸಿ ಭಾರತೀಯ ತಥಾ ಕನ್ನಡಿಗ ಎಂಬ ವಿಶಿಷ್ಟ ಗೌರವಕ್ಕೆ ಪಾತ್ರರಾಗಿದ್ದಾರೆ. ಪ್ರಶಸ್ತಿಗಳ ಯಾದಿಯಲ್ಲಿ ಈ ‘ಆರ್ಯಭಟ ಪ್ರಶಸ್ತಿ’ಯು ಇವರ ಪ್ರಥಮ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಯಾಗಿರುತ್ತದೆ.