ಕರ್ನಾಟಕದ ಗಡಿನಾಡು ಕಾಸರಗೋಡಿನ ಅಪ್ಪಟ ಕನ್ನಡ ಭಾಷಾಭಿಮಾನಿ, ದೇಶಾಭಿಮಾನಿ, ಸ್ವಾತಂತ್ರ್ಯ ಹೋರಾಟಗಾರ ನಾಡೋಜ ಡಾ|| ಕಯ್ಯಾರ ಕಿಞ್ಞಣ್ಣ ರೈ ತಮ್ಮ 101 ನೇ ವಯಸ್ಸಿನಲ್ಲಿ ಬದಿಯಡ್ಕ ಗ್ರಾಮದ ತಮ್ಮ ಮನೆಯಲ್ಲಿ ಇಂದು ಅಸ್ತಂಗತರಾಗಿದ್ದಾರೆ. ಕವಿ ಮನಸಿನ ಅಪ್ಪಟ ಕನ್ನಡಿಗ ಕಯ್ಯಾರ ಕಿಞ್ಞಣ್ಣ ರೈಯವರಿಗೆ ವಿಶ್ವಕನ್ನಡಿಗರ ಭಾವಪೂರ್ವಕ ಶ್ರಂದ್ಧಾಂಜಲಿ.
ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಿದ ರಸಋಷಿಗಳ ಸಾಲಿನಲ್ಲಿ ಕಯ್ಯಾರರು ಒರ್ವ ಮಹರ್ಷಿಯಂತೆ ಕಂಡು ಬರುತ್ತಾರೆ. ಕನ್ನಡ, ತುಳು ಭಾಷೆಗಾಗಿ ತನ್ನ ಜೀವನವ ನ್ನೇ ಮುಡಿಪಾಗಿಟ್ಟ ಕವಿ ಮನಸಿನ ಅಪ್ಪಟ ಕನ್ನಡಿಗ ಡಾ| ಕಯ್ಯಾರ ಕಿಞ್ಞಣ್ಣ ರೈವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುವ ವಿಶೇಷ ಲೇಖನ….
ಡಾ|| ಕಯ್ಯಾರ ಕಿಞ್ಞಣ್ಣ ರೈಯವರ ಹೆಜ್ಜೆಗುರುತುಗಳು….
ಕರ್ನಾಟಕದ ಕಡಲ ತೀರದ ಕಾಸರಗೋಡಿನ ಪೆರಡಾಲ ಗ್ರಾಮದಲ್ಲಿ ಕಯ್ಯಾರ ಕಿಞ್ಞಣ್ಣ ರೈಯವರು 1915 ಜೂನ್ 8 ರಂದು ಬಂಟ ಮನೆತನದ ಶ್ರೀ ದುಗ್ಗಪ್ಪ ರೈ ಮತ್ತು ಶ್ರೀಮತಿ ದ್ಯೇಯಕ್ಕ ರೈ ದಂಪತಿಗಳ ಮಗನಾಗಿ ಜನಿಸಿದರು. ಬಾಲ್ಯದಲ್ಲೇ ತಾಯಿಯ ತೆಕ್ಕೆಯಲ್ಲಿ ಮಲಗಿ ಕನ್ನಡ, ತುಳು ಗೀತೆ, ಕಥೆ, ಸಾಹಿತ್ಯವನ್ನು ಸವಿಯುತ್ತಾ ಕನ್ನಡ ಕಲಿತವರು. ತನ್ನ ಹನ್ನೆರಡನೆಯ ವಯಸ್ಸಿನ ಲ್ಲೇ ಕೈಬರಹ ಪತ್ರಿಕೆ “ಸುಶೀಲ” ಸೃಷ್ಠಿಸಿದರು. ಭಾರತ ಸ್ವಾತಂತ್ರ್ಯಕ್ಕಾಗಿ ಹೋರಾಟದ ಚಳುವಳಿ ನಡೆಸುತಿದ್ದ ಕಾಲ, ಮಹಾತ್ಮ ಗಾಂಧಿಯವರ ಹೋರಾಟದಿಂದ ಪ್ರೇರಿತರಾಗಿ ದೇಶದ ಸ್ವಾತಂತ್ರ್ಯದ ಕನಸು ಕಂಡರು.ಕವಿಯಾಗಿ, ಬರಹಗಾರರಾಗಿ ತಮ್ಮ ಬರಹಗಳ ಮೂಲಕ ಜನ ಜಾಗೃತಿ ಮೂಡಿಸುವ ಛಲ ತೊಟ್ಟರು. ಗಾಂಧೀಜಿ ಯವರು ಕಯ್ಯಾರರನ್ನು ಸತ್ಯಾಗ್ರಹಿಯಾಗಿ ಸತ್ಯಾಗ್ರಹಕ್ಕೆ ನೇಮಕ ಮಾಡಿದ್ದರು.
ಅಂದಿನ ವರ್ಷಗಳಲ್ಲಿ ಕನ್ನಡ, ಸಂಸ್ಕೃತ ಪದವಿಯನ್ನು ಪಡೆದವರು ಹೆಚ್ಚಾಗಿ ಅಧ್ಯಾಪಕ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುತಿದ್ದರು. ಪದವಿಯನ್ನು ಪಡೆದ ಕಯ್ಯಾರರು ಮಂಗಳೂರಿಗೆ ಬಂದು ಆಂಗ್ಲಭಾಷೆಯನ್ನು ಕಲಿತು, ಪತ್ರಿಕೋದ್ಯಮವನ್ನು ಆರಿಸಿಕೊಂಡರು. “ಸ್ವದೇಶಾಭಿಮಾನಿ” ಮಂಗಳೂರಿನ ಪ್ರಾರಂಭದ ಕನ್ನಡ ಪತ್ರಿಕೆಯಾಗಿತ್ತು. ಉಪಸಂಪಾದಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಸ್ವಾತಂತ್ರ್ಯ ಸಂಗ್ರಾಮದ ಲೇಖನಗಳನ್ನು ಬರೆದು ಪ್ರಕಟಿಸುತಿದ್ದರು.
1942 ರಲ್ಲಿ ಕರ್ನಾಟಕ ಮಾಧ್ಯಮ ಸಮ್ಮೇಳನ ಆಯೋಜನೆ ಮಾಡಿ, ಮದ್ರಾಸ್, ಬೆಂಗಳೂರು, ಮೈಸೂರಿನಿಂದ ಮಾಧ್ಯಮ ಪ್ರತಿನಿಧಿಗಳನ್ನು ಬರಮಾಡಿಕೊಂಡು ಸಮ್ಮೇಳನ ನಡೆಸಿದ ದಾಖಲೆ ಕಯ್ಯಾರರದ್ದು.
ಪತ್ರಿಕೋದ್ಯಮದಲ್ಲಿ ಪ್ರಸಿದ್ದಿ, ಗೌರವ, ಗಳಿಕೆ, ಅನುಕೂಲ, ಸೌಲಭ್ಯ ಹೆಚ್ಚಿದ್ದರೂ, ಕಯ್ಯಾರರ ಮನ ತನ್ನ ಗ್ರಾಮದ ಕಡೆಗೆ ಸೆಳೆಯುತಿತ್ತು. ದೇಶಕ್ಕಾಗಿ ಹೋರಾಟ, ಸ್ವಾತಂತ್ರ್ಯ ಚಳುವಳಿಯಲ್ಲಿ ತೊಡಗಿಸಿಕೊಂಡಿದ್ದ ಪರಿಣಾಮ ಅಖಂಡ ಭಾರತದ ಅಭ್ಯುದಯಕ್ಕಾಗಿ ಛಲತೊಟ್ಟರು. ಹಳ್ಳಿ ರಾಷ್ಟ್ರದ ಅಡಿಪಾಯ ಎಂಬುದನ್ನು ಅರಿತ ಕೈಯಾರರು ತಮಗೆ ಸಿಗುತಿದ್ದ ಎಲ್ಲಾ ಸೌಲಭ್ಯಗಳನ್ನು ಬಿಟ್ಟು ಕಾಸರಗೋಡಿನ ತಮ್ಮ ಹಳ್ಳಿಯಲ್ಲಿ ಬಂದು ನೆಲೆಸಿದರು. ಭಾರತಕ್ಕೆ ಸ್ವಾತಂತ್ರ್ಯ ದೊರೆತು ಭಾರತೀಯರು ಸ್ವಂತಿಕೆಯನ್ನು ಮೆರೆಯುವ ಅವಕಾಶ ದೊರೆಯಿತು.
ಕಾಸರಗೋಡಿನ ಬದಿಯಡ್ಕ ಪಂಚಾಯಿತಿಯ ಅಧ್ಯಕ್ಷರಾಗಿ ಜನಸೇವೆ ಮಾಡುವ ಅವಕಾಶ ದೊರೆಯಿತು. ಸರ್ಕಾರದಿಂದ ಅಭಿವೃದ್ಧಿಗಾಗಿ ದೊರೆತ ಹಣವನ್ನು ರಸ್ಥೆ ನಿರ್ಮಾಣ, ಪ್ರಾಥಮಿಕ ಸವಲತ್ತು, ಸೌಲಭ್ಯಗಳನ್ನು ನಿರ್ಮಿಸಿಕೊಟ್ಟರು ತಮ್ಮ ಹದಿನೈದು ವರ್ಷಗಳ ಅವಧಿಯಲ್ಲಿ ಭಾರತದ ಕೇಂದ್ರ ಸರ್ಕಾರ ಬದಿಯಡ್ಕ ಗ್ರಾಮದ ಅಭಿವೃದ್ಧಿಯನ್ನು ಗುರುತಿಸಿ, “ಅತ್ಯುತ್ತಮ ಗ್ರಾಮ” ಪ್ರಶಸ್ತಿಯನ್ನು ನೀಡಿದೆ. ಅಂದಿನ ವರ್ಷಗಳಲ್ಲಿ ಇದು ಅತ್ಯಂತ ಗೌರವದ ವಿಚಾರವಾಗಿತ್ತು.
ಕಯ್ಯಾರರು ನಂತರದ ವರ್ಷದಲ್ಲಿ ಕಾಸರಗೋಡಿನ ನವಜೀವನ ಪ್ರೌಢಶಾಲೆಯಲ್ಲಿ ಅಧ್ಯಾಪಕ ವೃತ್ತಿಯನ್ನು ಪ್ರಾರಂಭಿಸಿದರು. ತುಳು ಭಾಷೆಯ ತಾಯಿ ಜನ್ಮನೀಡಿದರೆ, ಕನ್ನಡ ತಾಯಿ ಸಾಕು ತಾಯಿಯಾಗಿದ್ದು ಇಬ್ಬರು ತಾಯಿಯ ಸೇವೆಗಾಗಿ ಜೀವನವನ್ನೇ ಮುಡಿಪಾಗಿಟ್ಟರು. ಇವರ ನಿಸ್ವಾರ್ಥ, ಪ್ರಾಮಾಣಿಕ ಸೇವೆಗಾಗಿ 1969 ರಲ್ಲಿ “ಅತ್ಯುತ್ತಮ ಶಿಕ್ಷಕ” ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದರು.
ಕೈಯಾರರ ಪ್ರಕಟಣೆಗಳು
ಕನ್ನಡ ಭಾಷೆಯಲ್ಲಿ ಐವತ್ತಕಿಂತಲೂ ಹೆಚ್ಚು ಪುಸ್ತಕ ಬರೆದಿದ್ದಾರೆ. ಕವಿಯಾಗಿ, ಬರಹಗಾರರಾಗಿ ಅವರು ವ್ಯಾಕರಣ ಪುಸ್ತಕ, ಮಕ್ಕಳ ಸಾಹಿತ್ಯ ಇತ್ಯಾದಿ ಕೃತಿಗಳನ್ನು ರಚಿಸಿರುವ ಕಯ್ಯಾರರ ಪ್ರಕಟಣೆಗಳು :
ಕವನ : ಮಕ್ಕಳ ಪದ್ಯ ಮಂಜರಿ, ಎನ್ನಪ್ಪೆ ತುಳುವಪ್ಪೆ (ತುಳು ಕವನ), ಕೊರಗ ಕೆಲವು ಕವನಗಳು, ಶತಮಾನದ ಗಾನ, ಪ್ರತಿಭಾ ಪಯಸ್ವಿನಿ.
ಚೇತನ ಪಂಚಮಿ (ಕನ್ನಡ ಉಪನಿಷತ್ತುಗಳು)
ವ್ಯಾಕರಣ ಮತ್ತು ಪ್ರಬಂಧ
ಕಥೆಗಳು : ರತ್ನಸಿರಿ, ಲಕ್ಷ್ಮೀಶನ ಕಥೆಗಳು, ಅನ್ನ ದೇವರು ಮತ್ತು ಇತರ ಕಥೆಗಳು, ಪರಶುರಾಮ, ಎ. ಬಿ. ಶೆಟ್ಟಿ, ಕನ್ನಡ ಶಕ್ತಿ ಕಾರ್ನಾಡು ಸದಾಶಿವರಾವ್, ನಾರಾಯಣ ಕಿಲ್ಲೆ ಇತ್ಯಾದಿ.
ಜೀವನ ಚರಿತ್ರೆ : ರಾಷ್ಟ್ರಕವಿ ಗೋವಿಂದ ಪೈ, ಸಂಸ್ಕೃತಿಯ ಹೆಗ್ಗುರುತುಗಳು, ಮಲಯಾಳಂ ಸಾಹಿತ್ಯ ಚರಿತ್ರೆ.
ನಾಟಕ : ವಿರಾಗಿಣಿ
ಆತ್ಮ ಚರಿತ್ರೆ : ದುಡಿಮೆಯೇ ನನ್ನ ದೇವರು.
ಕವಿ ಕಯ್ಯಾರರು ರಚಿಸಿದ “ಶೀಮುಖ” “ಐಕ್ಯಗಾನ” “ಪುನರ್ನವ” “ಶಾಂತಮಾನ” ಕೃತಿಗಳಿಂದ ಪ್ರಖ್ಯಾತರಾಗಿದ್ದಾರೆ.
“ಏರುತಿವುದು ಹಾರುತಿವುದು ನೋಡು ನಮ್ಮ ಬಾವುಟ” ಓದಿದ ಪದ್ಯ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲೇ ದೇಶಭಕ್ತಿಯನ್ನು ಜಾಗೃತಿಗೊಳಿಸಿದೆ.
ಹಣ್ಣು ಮಾರುವವನ ಹಾಡು, ಕರ್ನಾಟಕದ ಉದ್ದಗಲಗಳಲ್ಲಿ ದೊರೆಯುವ ವಿವಿಧ ಹಣ್ಣುಗಳಾದ, ನಂಜನಗೂಡಿನ ರಸಬಾಳೆ, ಕೊಡಗಿನ ಕಿತ್ತಳೆ, ಬೀದರ ಸೀಬೆ ಹಣ್ಣು, ಮಧುಗಿರಿ ದಾಳಿಂಬೆ, ಬೆಳವಲದ ಸಿಹಿ ಲಿಂಬೆ, ಬೆಳಗಾವಿ ಸಿಹಿ ಸಪೋಟ, ದೇವನ ಹಳ್ಳಿ ಚಕ್ಕೋತ, ಗಂಜಾಮ್ ಅಂಜೀರ್, ತುಮಕೂರು ಹಲಸು, ಧಾರವಾಡ ಅಪೂಸು, ಮಲೆ ನಾಡಿನ ಅನಾನಸು ಸವಿಯಿರಿ, ಬಗೆ ಬಗೆ ಹಣ್ಣುಗಳ, ನಾಡಿನ ಹಣ್ಣುಗಳ ಬಗ್ಗೆ ಬರೆದ ಕವನ ವಾಚಕರ ಬಾಯಲ್ಲಿ ನೀರೂರಿಸುತ್ತದೆ.
ಹಾಡೊಮ್ಮೆ ಹಾಡಬೇಕು…. ಐಕ್ಯವೊಂದೆ ಮಂತ್ರ….ಐಖ್ಯದಿಂದ ಸ್ವಾತಂತ್ರ್ಯ… ಕಯ್ಯಾರ ರ ಕವನ ಚಿತ್ರ ಗೀತೆಯಾಗಿ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಪಡವಾರಳ್ಳಿ ಪಾಂಡವರು ಕನ್ನಡ ಚಿತ್ರದಲ್ಲಿ ಅಳವಡಿಸಿದ ಗೀತೆ ಇಂದಿಗೂ ಗೀತ ಪ್ರಿಯರು ಗುನು ಗುನಿಸುತ್ತಿರುತ್ತಾರೆ.
ಕಾಸರಗೋಡಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪಸಿದ ಸಾಧನೆ ಕಯ್ಯಾರರದ್ದು. ಕಾಸಗೋಡಿನಲ್ಲಿ 1947, 1972, 1979, 1990, 1998 ರಲ್ಲಿ ಸಾಹಿತ್ಯ ಸಮ್ಮೇಳನ ನಡೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
1968 ರಲ್ಲಿ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಚುನಾವಣೆಗೂ ಮುನ್ನ ನ್ಯಾಯಮೂರ್ತಿ ಮಹಾಜನ್ ಸಮಿತಿಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಭಾಷೆ ಮತ್ತು ಸಂಸ್ಕೃತಿಯನ್ನು ಭೌಗೋಳಿಕವಾಗಿ ಮಾನದಂಡವನ್ನಾಗಿ ಇಟ್ಟುಕೊಂಡು ಗಡಿ ನಿರ್ಮಿಸುವ ಸಲಹೆ ನೀಡಲಾಗಿತ್ತು. ದುರಾದೃಷ್ಟವಶಾತ್ ಅಂದಿನ ಆಡಳಿತದಲ್ಲಿದ್ದ ಸರ್ಕಾರದ ಇಚ್ಚಾಶಕ್ತಿ ಕೊರತೆ, ಸರ್ಕಾರ ತೆಗೆದುಕೊಳ್ಳ ಬೇಕಾದ ನಿರ್ಧಾರಗಳಿಗೆ ಜನ ಪ್ರತಿನಿಧಿಗಳ ಬೆಂಬಲ ದೊರೆಯದೇ ಇದ್ದದ್ದು, ಕಾಸರಗೋಡಿನಲ್ಲಿ ಕನ್ನಡ ಭಾಷಾಅಲ್ಪ ಸಂಖ್ಯಾತರಾಗಿದ್ದುದರಿಂದ, ಮಲಯಾಳಂ ಭಾಷಿಗರು ಹೆಚ್ಚಾಗಿದ್ದುದರಿಂದ ಕರ್ನಾಟಕದ ಅವಿಭಾಜ್ಯ ಭಾಗವಾಗಿದ್ದ ಕಾಸರಗೋಡು ಕರ್ನಾಟಕದ ಕೈತಪ್ಪಿ, ಕೇರಳ ರಾಜ್ಯದಲ್ಲಿ ವೀಲಿನವಾಯಿತು.
ಆ ಸಂದರ್ಭದಲ್ಲಿ ಕಯ್ಯಾರರು ಮನನೊಂದು ರಚಿಸಿದ ಕವನ: “ಬೆಂಕಿ ಬಿದ್ದಿದೆ ನಮ್ಮ ಮನೆಗೆ” ಓ ಬೇಗ ಬನ್ನಿ ಕನ್ನಡ ಗಡಿ ಕಾಯೋಣ ಬನ್ನಿ, ಕನ್ನಡ ನುಡಿ ಕಾಯೋಣ ಬನ್ನಿ ಎಂಬ ಕವಿವಾಣಿ ಅಂದಿನ ಆಡಳಿತ ವ್ಯವಸ್ಥೆಯ ಕಿವಿಗೆ ಕೇಳಿಸಲೇ ಇಲ್ಲ. ಕೇಳಿದರೂ ಕೇಳದಂತೆ ಇದ್ದ ಅಂದಿನವರ ವರ್ತನೆಗೆ ಕವಿ ಹೃದಯ ಬಹಳಷ್ಟು ನೊಂದಿತ್ತು.
ಕನ್ನಡಿಗರೆಲ್ಲರೂ ಒಗ್ಗೂಡಿ, ಭಾಷೈಕ್ಯತೆಯ ಮನೋಭಾವದಿಂದ ಕ್ರಿಯಾತ್ಮಕ ರೀತಿಯಲ್ಲಿ ಸ್ಪಂದಿಸಿದಿದ್ದರೆ, ಕಾಸರಗೋಡು ಕೇರಳದ ಪಾಲಾಗುತಿರಲಿಲ್ಲ ಎಂದು ಇಂದಿಗೂ ಮನದಾಳದ ನೋವನ್ನು ಕೈಯಾರರು ತೋಡಿಕೊಳ್ಳುತ್ತಾರೆ.
1997 ರಲ್ಲಿ ಮಂಗಳೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಯ್ಯಾರ ಕಿಞ್ಞಣ್ಣ ರೈಯವರು ಸಮ್ಮೇಳನ ಅಧ್ಯಕ್ಷರಾಗಿದ್ದರು. ಅಂದಿನ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಕಾಸರಗೋಡು ಕರ್ನಾಟಕಕ್ಕೆ ಸೇರ್ಪಡೆಯಾಗಬೇಕೆಂದು ತಮ್ಮ ಧ್ವನಿಯನ್ನು ಕರ್ನಾಟಕ ಸರ್ಕಾರಕ್ಕೆ ಮುಟ್ಟಿಸಿದ್ದರು.
“ಗಡಿನಾಡ ಕಿಡಿ”ಕಯ್ಯಾರ ಕಿಞ್ಞಣ್ಣ ರೈಯವರಿಗೆ 75 ವರ್ಷ ತುಂಬಿದಾಗ ಜನ್ಮದಿನಾಚರಣೆಯನ್ನು ಕಾಸರಗೋಡಿನ ಕನ್ನಡಿಗರು ಒಟ್ಟು ಸೇರಿ ಹಿರಿಯ ಕವಿಗೆ “ಗಡಿನಾಡ ಕಿಡಿ” ಅಭಿನಂದನಾ ಗ್ರಂಥವನ್ನು ಸಮರ್ಪಿಸಿ ಗೌರವಿಸಿದ್ದರು.
“ಗೌರವ ಡಾಕ್ಟರೇಟ್”ಅಪ್ಪಟ ಗಾಂಧಿವಾದಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಕವಿ, ಸಾಹಿತಿ, ಕನ್ನಡ, ತುಳು ಭಾಷೆ ಹಾಗೂ ಸಮಾಜದ ಏಳಿಗೆಗಾಗಿ ತಮ್ಮನ್ನು ಸಮರ್ಪಿಸಿಕೊಂಡು ತಮ್ಮ ಇಳಿವಯಸಿನಲ್ಲಿಯೂ ಯುವ ಜನಾಂಗಕ್ಕೆ ಸ್ಪೂರ್ತಿ, ಉತ್ಸಾಹದ ಚಿಲುಮೆ ಕಯ್ಯಾರ ಕಿಞ್ಞಣ್ಣ ರೈಯವರನ್ನು 2005 ರಲ್ಲಿ ಮಂಗಳೂರು ವಿಶ್ವ ವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
ಸನ್ಮಾನದ ಸರಮಾಲೆಗಳು
* ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ – 1969
* ಅತ್ಯುತ್ತಮ ಶಿಕ್ಷಕ ರಾಷ್ಟ್ರ ಪ್ರಶಸ್ತಿ – 1969
* ಮಣಿಪಾಲ್ ಪ್ರೌಢ ಶಿಕ್ಷಣ ಅಕಾಡೆಮಿ ಗೌರವ ಫೆಲೋಶಿಪ್ – 1970
* ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಸ್ಥಾನ, ಗೌರವ ಸನ್ಮಾನ – 1998
* ಪೇಜಾವರ ಸಾಹಿತ್ಯ ಪ್ರಶಸ್ತಿ – 2004
* ಆಳ್ವಾಸ್ ನುಡಿಸಿರಿ ಪ್ರಶಸ್ತಿ – 2005
* ಆದರ್ಶ ರತ್ನ ಪ್ರಶಸ್ತಿ – 2006
* ನಾಡೋಜ ಪ್ರಶಸ್ತಿ – 2006
* ಕರ್ನಾಟಕ ಏಕಿಕರಣ ಪ್ರಶಸ್ತಿ – 2007
* ಕನ್ನಡ ಸಾಹಿತ್ಯ ಪರಿಷತ್ ಗೌರವ ಫೆಲೋಶಿಪ್ – ೨೦೦೯
* ಪ್ರಥಮ ಗಡಿನಾಡ ರತ್ನ ಪ್ರಶಸ್ತಿ
ಹಾಗೂ ಹಲವಾರು ಸಂಘ ಸಂಸ್ಥೆಗಳು ಹಲವಾರು ಬಾರಿ ಸನ್ಮಾನ ಗೌರವ ಸಮರ್ಪಿಸಿದ್ದಾರೆ.
ಕಾಸರಗೋಡು ಕರ್ನಾಟಕಕ್ಕೆ ಸೇರ್ಪಡೆಯ ಹೋರಾಟಕ್ಕೆ ಇಂದಿಗೆ 60 ವರ್ಷ ತುಂಬಿದೆ. ಹಿರಿಯ ಮನಸ್ಸಿನ ಕನಸು ನನಸಾಗದಿರುವುದು, ಕರ್ನಾಟಕ ಸರ್ಕಾರ ಗಡಿ ವಿಚಾರದಲ್ಲಿ ಪರಿಹಾರ ಕಂಡು ಕೊಳ್ಳದೆ, ಸುವರ್ಣ ಮಹೋತ್ಸವವನ್ನು ಆಚರಿಸಿದ್ದು ಅರ್ಥ ಹೀನವಾಗಿದೆ ಎಂದು ಇಂದಿಗೂ ಕಯ್ಯಾರರು ನೊಂದುಕೊಳ್ಳುತ್ತಾರೆ
ನೂರರ ಗಡಿಯಲ್ಲಿಯೂ ಕೈಯ್ಯಾರರ ಮಧುರ ಧ್ವನಿಯಲ್ಲಿ ಕವನ ಸಂಕಲನದ ಪ್ರಾರ್ಥನೆಯಲ್ಲಿ ಆಯ್ದ ಕೆಲವು ಸಾಲುಗಳು:
ಬಾನಿನಲ್ಲಿ ಬಯಲಲ್ಲಿ ಕಡಲಲ್ಲಿ ಸಿಡಿಲಲ್ಲಿ ಎಲ್ಲೆಲ್ಲಿಯೂ ನೀನಿರುವೆ ದೇವ ದೇವಾ…
ಹಾಡಿನಲ್ಲಿ ಬೀಡಿನಲ್ಲಿ ಪರಿಮಳದಲ್ಲಿ ಸಂಗೀತ ನಾದದಲ್ಲಿ ನಿನ್ನ ಸನ್ನಿಧಿಯಲ್ಲಿ ನೀನಿರುವೆ ದೇವ ದೇವಾ…
ವೇದ ಪುರಾಣಗಳು ಬೈಬಲ್ ಕುರಾನ್ ಗಳು ನಿನ್ನನ್ನೆ ಹೊಗಳುತಿದೆ ದೇವ ದೇವಾ…
ರಾಮ ಜಿನ ಗೌತಮರು ಏಸು ಪೈಗಂಬರರು ಎಲ್ಲರೂ ನಿನ್ನವರು ದೇವ ದೇವಾ…
ಸಕಲ ಮತ ಧರ್ಮಗಳು ಸಕಲ ಜಗ ಜೀವಿಗಳು ನಿನ್ನ ಲೀಲೆಗಳು ದೇವ ದೇವಾ…
ಸನ್ಮಾರ್ಗದಲ್ಲಿ ನಡೆಸು, ಸದ್ಗತಿಯನ್ನು ಕೊಡಿಸು ದೇವ ದೇವಾ….ಎಲ್ಲೆಲ್ಲೂ ನೀನಿರುವೆ ದೇವ ದೇವಾ…
ಧ್ವನಿ ಪ್ರತಿಷ್ಠಾನದ ವತಿಯಿಂದ 100ನೇ ವರ್ಷದ ಶುಭಾಶಯ ಅರ್ಪಣೆ
ಕಯ್ಯಾರ ಕಿಞ್ಞಣ್ಣ ರೈಯವರಿಗೆ ದುಬಾಯಿಯಲ್ಲಿ 2014 ಮಾರ್ಚ್ 7ನೇ ತಾರೀಕು ಶುಕ್ರವಾರ ಧ್ವನಿ ಪ್ರತಿಷ್ಠಾನ ಆಶ್ರಯದಲ್ಲಿ ಆಯೋಜಿಸಲಾದ “ಕವಿ ಕಯ್ಯಾರ 100” – ಕವಿ ಗೋಷ್ಠಿಯ ಮೂಲಕ ಶುಭಾಶಯ ಅರ್ಪಣೆ ಸಲ್ಲಿಸಲಾಗಿತ್ತು.
ವಿಶ್ವಮಾನವತೆಯ ತತ್ವವನ್ನು ಮೈಗೂಡಿಸಿಕೊಂಡು ಇಂದಿಗೂ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದು ಸುಂದರ ಬದುಕನ್ನು ಕಟ್ಟಿ ಪರಿಪೂರ್ಣ ಜೀವನ ನಡೆಸಿ ತಮ್ಮ ಅಂತಿಮ ಯಾತ್ರೆಯನ್ನು ಮುಗಿಸಿದ ನಾಡೋಜ ಡಾ|| ಕಯ್ಯಾರ ಕಿಞ್ಞಣ್ಣ ರೈ ಯವರಿಗೆ ವಿಶ್ವಕನ್ನಡಿಗರ ಗೌರವ್ಪೂರ್ವಕ ಅಂತಿಮ ಶ್ರದ್ಧಾಂಜಲಿ ಅರ್ಪಣೆ….
ಬಿ. ಕೆ. ಗಣೇಶ್ ರೈ
ಅರಬ್ ಸಂಯುಕ್ತ ಸಂಸ್ಥಾನ