ಕರಾವಳಿ

ಬೆಳ್ಳಂಬೆಳಗ್ಗೆ ಭ್ರಷ್ಟರ ಬಾಗಿಲು ಬಡಿದ ಲೋಕಾಯುಕ್ತ ಪೊಲೀಸರು; 8 ಮಂದಿ ಭ್ರಷ್ಟ ಅಧಿಕಾರಿಗಳು ಬಲೆಗೆ: ಕೋಟ್ಯಂತರ ರೂ.ಮೌಲ್ಯದ ಅಕ್ರಮ ಆಸ್ತಿ-ಪಾಸ್ತಿಯನ್ನು ಪತ್ತೆ

Pinterest LinkedIn Tumblr

Lokayu

ಬೆಂಗಳೂರು, ಜೂ. 11: ಬೆಂಗಳೂರು, ಬೆಳಗಾವಿ, ಮೈಸೂರು, ದಕ್ಷಿಣ ಕನ್ನಡ, ಬಾಗಲಕೋಟೆ ಸೇರಿದಂತೆ ರಾಜ್ಯದ ವಿವಿಧೆಡೆ ಏಕಕಾಲಕ್ಕೆ ದಾಳಿ ನಡೆಸಿರುವ ಲೋಕಾಯುಕ್ತರು 8 ಮಂದಿ ಭ್ರಷ್ಟ ಅಧಿಕಾರಿಗಳನ್ನು ಬಲೆಗೆ ಕೆಡವಿ ಕೋಟ್ಯಂತರ ರೂ.ಮೌಲ್ಯದ ಅಕ್ರಮ ಆಸ್ತಿ-ಪಾಸ್ತಿಯನ್ನು ಪತ್ತೆಹಚ್ಚಿದ್ದಾರೆ.

ಲೋಕೋಪಯೋಗಿ ಇಲಾಖೆ ಮುಖ್ಯ ಇಂಜಿನಿಯರ್ ತ್ಯಾಗರಾಜ್, ಬಿಡಗಿ ಠಾಣೆ ಎಎಸ್‍ಐ ಜಗದೀಶ್, ಪುತ್ತೂರು ವಲಯ ಅರಣ್ಯಾಧಿಕಾರಿ ಬಾಲಕೃಷ್ಣ, ಚಿಕ್ಕೋಡಿ ಲೋಕೋಪಯೋಗಿ ಲೆಕ್ಕಾಧಿಕಾರಿ ಕೃಷ್ಣ ಮಹದೇವಪ್ಪ, ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಸಹಾಯಕ ಇಂಜಿನಿಯರ್ ಮಲ್ಲಿಕಾರ್ಜುನಯ್ಯ ನಾಯನೇಗಲಿ, ಕುಂದರಗಿ ಸಹಕಾರಿ ಹಾಲು ಒಕ್ಕೂಟದ ವ್ಯವಸ್ಥಾಪಕ ನಾಗಯ್ಯ ಹಿರೇಮಠ, ಮಂಡ್ಯ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಅಣ್ಣೇಗೌಡ, ಹಿರೇಬೂದಿ ಗ್ರಾಮ ಲೆಕ್ಕಿಗ ಸಿದ್ದಪ್ಪ ಸಿಂಗಾಡಿ ಲೋಕಾಯುಕ್ತರ ಬಲೆಗೆ ಬಿದ್ದಿರುವ ಭ್ರಷ್ಟ ಅಧಿಕಾರಿಗಳು.

ತ್ಯಾಗರಾಜ್ ಅವರ ನ್ಯಾಯಾಂಗ ಬಡಾವಣೆಯ ಮನೆ, ಕಚೇರಿ, ಎಎಸ್‍ಐ ಜಗದೀಶ್ ಅವರ ರಘುವನಹಳ್ಳಿಯ ಬಂಗಲೆ, ತಲಘಟ್ಟಪುರದ ವಾಣಿಜ್ಯ ಮಳಿಗೆ, ಕಚೇರಿ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ಕೋಟ್ಯಂತರ ರೂ. ಮೌಲ್ಯದ ಅಕ್ರಮ ಆಸ್ತಿಪಾಸ್ತಿಯನ್ನು ಪತ್ತೆ ಹಚ್ಚಿದ್ದಾರೆ.

ಬೆಳಗಾವಿ ಚಿಕ್ಕೋಡಿಯ ಲೋಕೋಪಯೋಗಿ ಲೆಕ್ಕಾಧಿಕಾರಿ ಕೃಷ್ಣ ಮಹದೇವಪ್ಪ ಅವರ ಬುದ್ಧನಗರದ ಮನೆ, ಕಚೇರಿ, ಮಲ್ಲಿಕಾರ್ಜುನಯ್ಯ ಅವರ ನವನಗರದ ಮನೆ, ಕಚೇರಿ, ನಾಗಯ್ಯ ಹಿರೇಮಠ ಅವರ ಕುಂದರಗಿಯ ಮನೆ, ಕಚೇರಿ, ಹಿರೇಕೋಡಿ ಗ್ರಾಮ ಲೆಕ್ಕಿಗ ಸಿದ್ದಾರ್ಥ ಸಿಂಗಾಡಿ ಅವರ ಇಂದಿರಾನಗರದ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ಅಕ್ರಮ ಆಸ್ತಿ-ಪಾಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ.

ಬಲೆಗೆ ಬಿದ್ದಿರುವ ಎಲ್ಲ ಭ್ರಷ್ಟ ಅಧಿಕಾರಿಗಳು ಆದಾಯಕ್ಕಿಂತ ನೂರಾರು ಪಟ್ಟು ಅಕ್ರಮ ಆಸ್ತಿಪಾಸ್ತಿಯನ್ನು ಗಳಿಸಿರುವುದು ಪತ್ತೆಯಾಗಿದೆ. ಅಧಿಕಾರಿಗಳಿಂದ ವಶಪಡಿಸಿಕೊಂಡಿರುವ ದಾಖಲೆ ಪತ್ರಗಳ ಪರಿಶೀಲನೆ ನಡೆಸಿದ್ದು, ಸಂಜೆಯ ವೇಳೆ ಅವುಗಳ ಒಟ್ಟಾರೆ ಮೌಲ್ಯ ತಿಳಿದುಬರಲಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

ಲೋಕಾಯುಕ್ತ ಜಿಲ್ಲಾ ಎಸ್.ಪಿ.ಗಳ ನೇತೃತ್ವದಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಗಿದ್ದು, ಬಲೆಗೆ ಬಿದ್ದಿರುವ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ಹಲವು ದೂರುಗಳು ದಾಖಲಾಗಿದ್ದವು. ಅವುಗಳನ್ನು ಆದರಿಸಿ ಈ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ತ್ಯಾಗರಾಜ್- ಮುಖ್ಯ ಇಂಜಿನಿಯರ್, ಲೋಕೋಪಯೋಗಿ ಇಲಾಖೆ

  • ಜಗದೀಶ್- ಎಎಸ್ಐ, ಬಿಡದಿ, ಪೊಲೀಸ್ ಠಾಣೆ

  • ಬಾಲಕೃಷ್ಣ – ವಲಯಾರಣ್ಯಾಧಿಕಾರಿ, ಪುತ್ತೂರು

  • ಕೃಷ್ಣಮಹದೇವಪ್ಪ- ಲೆಕ್ಕಾಧಿಕಾರಿ, ಲೋಕೋಪಯೋಗಿ ಚಿಕ್ಕೋಡಿ

  • ಮಲ್ಲಿಕಾರ್ಜುನಯ್ಯ ನಾಯನೇಗಲಿ- ಸಹಾಯಕ ಇಂಜಿನಿಯರ್, ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಬಾಗಲಕೋಟೆ

  • ನಾಗಯ್ಯ ಹಿರೇಮಠ -ಸಹಕಾರಿ ಹಾಲು ಒಕ್ಕೂಟದ ವ್ಯವಸ್ಥಾಪಕ, ಕುಂದರಗಿ

  • ಅಣ್ಣೇಗೌಡ- ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ, ಮಂಡ್ಯ

  • ಸಿದ್ದಪ್ಪ ಸಿಂಗಾಡಿ – ಗ್ರಾಮ ಲೆಕ್ಕಿಗ, ಹಿರೇಬೂದಿ

ಬಿಡದಿ ಪೊಲೀಸ್ ಠಾಣೆ ಎಎಸ್‍ಐ ಜಗದೀಶ್ ಕಬೇರ

ಲೋಕಾಯಕ್ತರ ಬಲೆಗೆ ಬಿದ್ದಿರುವ ಬಿಡದಿ ಪೊಲೀಸ್ ಠಾಣೆ ಎಎಸ್‍ಐ ಜಗದೀಶ್ ಕುಬೇರನಾಗಿದ್ದಾನೆ. ಆತ ತಲಘಟ್ಟಪುರದಲ್ಲಿ 50 ಅಂಗಡಿಗಳನ್ನು ಒಳಗೊಂಡ ಬೃಹತ್ ವಾಣಿಜ್ಯ ಮಳಿಗೆ ಹೊಂದಿದ್ದಾನೆ. ಅವುಗಳನ್ನು ಬಾಡಿಗೆಗೆ ಬಿಟ್ಟು ಐಷಾರಾಮಿ ಜೀವನ ನಡೆಸುತ್ತಿರುವ ಜಗದೀಶ್ ಬಳಿ ನಾಲ್ಕು ದುಬಾರಿ ಬೆಲೆಯ ಕಾರುಗಳಿವೆ.

ಕಾರುಗಳ ಜೊತೆ ಎರಡು ದುಬಾರಿ ಬೈಕ್‍ಗಳನ್ನು ಓಡಿಸುವ ಜಗದೀಶನಿಗೆ ರಘುವನಹಳ್ಳಿಯಲ್ಲಿ ಕೃಪಾನಿಲಯ ಹೆಸರಿನ ಐದು ಮಹಡಿಗಳ ಅಪಾರ್ಟ್‍ಮೆಂಟ್‍ಇದೆ.ರಘುವನಹಳ್ಳಿಯ ಭಾರಿ ಬಂಗಲೆಯಲ್ಲಿ ಐಷಾರಾಮಿ ಜೀವನ ನಡೆಸುತ್ತಿರುವ ಜಗದೀಶನ ಬಳಿ ಕೋಟ್ಯಾಂತರ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದ್ದು ಅದರ ದಾಖಲಿ ಪತ್ರಗಳನ್ನು ವಶಪಡಿಸಿಕೊಂಡಿರುವ ಎಸ್‍ಪಿ ನಾರಾಯಣ ಅವರು ಪರಿಶೀಲನೆ ನಡೆಸಿದ್ದಾರೆ.

ಪೊಲೀಸ್ ಠಾಣೆಯಲ್ಲಿ ಕೇವಲ ಎಎಸ್‍ಐ ಯಾಗಿರುವ ಜಗದೀಶನಿಗೆ ಇಷ್ಟೊಂದು ಪ್ರಮಾಣದ ಆಸ್ತಿ ಎಲ್ಲಿಂದ ಬಂತು ಎನ್ನುವುದೇ ಅಚ್ಚರಿಯ ಸಂಗತಿಯಾಗಿದೆ.ಅಷ್ಟೇ ಅಲ್ಲ ಆತನ ಆಸ್ತಿ ಪಾಸ್ತಿ ನೋಡಿ ಲೋಕಾಯುಕ್ತ ಅಧಿಕಾರಿಗಳೇ ಬೆರಗಾಗಿ ಹೋಗಿದ್ದಾರೆ.

Write A Comment