ಅಂತರಾಷ್ಟ್ರೀಯ

ನನ್ನ ಪಾಕ್ ಪ್ರಧಾನಿ ಮಾಡಿ ಎಂದು ಮೊಬೈಲ್​ ಟವರ್​ ಏರಿದ!

Pinterest LinkedIn Tumblr


ಇಸ್ಲಾಮಾಬಾದ್​: ಮಾನಸಿಕ ಅಸ್ವಸ್ಥನೊಬ್ಬ ಮೊಬೈಲ್​ ಟವರ್​ ಏರಿ ನನ್ನನ್ನು ದೇಶದ ಪ್ರಧಾನಮಂತ್ರಿಯನ್ನಾಗಿ ಮಾಡುವಂತೆ ಬೇಡಿಕೆ ಇಟ್ಟಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.

ಮೊಹಮ್ಮದ್​ ಅಬ್ಬಾಸ್​ ಎಂಬ ವ್ಯಕ್ತಿ ಪಾಕಿಸ್ತಾನದ ಧ್ವಜ ಹಿಡಿದು ನನ್ನನ್ನು ಪ್ರಧಾನಿಯೆಂದು ಘೋಷಿಸದ ಹೊರತು ನಾನು ಕೆಳಗಿಳಿಯುವುದಿಲ್ಲ ಎಂದು ಹಠ ಹಿಡಿದಿದ್ದಾನೆ.

ಸ್ಥಳಕ್ಕೆ ತೆರಳಿದ ಪೊಲೀಸರು ವ್ಯಕ್ತಿಯನ್ನು ಕೆಳಗಿಳಿಸಲು ಮುಂದಾದಾಗ, “ಪ್ರಧಾನಿ ಎಂದು ಘೋಷಿಸಿದ ನಂತರ ನಾನೇ ಕೆಳಗಿಳಿಯುತ್ತೇನೆ. ಇಲ್ಲವಾದರೆ ಅಧಿಕಾರಿಗಳು ಪ್ರಧಾನಿ ಇಮ್ರಾನ್​ ಖಾನ್​ ನನ್ನ ಜತೆ ಮಾತನಾಡುವ ವ್ಯವಸ್ಥೆ ಮಾಡಬೇಕು. ಆಗ ನಾನೇ ಕೆಳಗಿಳಿಯುತ್ತೇನೆ” ಎಂದು ಪೊಲೀಸರಿಗೆ ತಾಕೀತು ಮಾಡಿದ್ದಾನೆ.

ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಆತನನ್ನು ಕೆಳಗಿಳಿಸಲು ಎಷ್ಟೇ ಮನವೊಲಿಸಲು ಯತ್ನಿಸಿದರೂ ಅದು ವಿಫಲವಾದಾಗ, ಶಾಫತ್​ ಅಲಿ ಎಂಬ ಮಿಮಿಕ್ರಿ ಕಲಾವಿದನನ್ನು ಸ್ಥಳಕ್ಕೆ ಕರೆಸಿ ಪ್ರಧಾನಿ ಧ್ವನಿಯಲ್ಲಿ ಮಾತನಾಡಿಸಿದ್ದಾರೆ.

ಶಾಫತ್​ನನ್ನೇ ಇಮ್ರಾನ್​ ಖಾನ್​ ಎಂದು ಭಾವಿಸಿದ ಟವರ್​ ಏರಿದ್ದ ವ್ಯಕ್ತಿ ಅವರ ಜತೆ ಐದು ನಿಮಿಷ ಮಾತನಾಡಿ ನಂತರ ಕೆಳಗಿಳಿದಿದ್ದಾನೆ.

ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದು ಪೊಲೀಸ್​ ಠಾಣೆಗೆ ಕರೆದೊಯ್ದಿದ್ದಾರೆ.

Comments are closed.