ಅಂತರಾಷ್ಟ್ರೀಯ

ಅಫ್ಘಾನಿಸ್ತಾನದಲ್ಲಿ ಆತ್ಮಹತ್ಯಾ ಬಾಂಬರ್‌ ನಿಂದ 10 ಮಂದಿ ಹಿಂದೂ, ಸಿಖ್ಖರ ಬಲಿ!

Pinterest LinkedIn Tumblr


ಕಾಬೂಲ್: ಅಫ್ಘಾನಿಸ್ತಾನದ ಜಲಾಲಾಬಾದ್‌ನ ಪೂರ್ವ ಪಟ್ಟಣದಲ್ಲಿ ಸಿಖ್ಖರು ಮತ್ತು ಹಿಂದೂಗಳನ್ನು ಗುರಿಯಾಗಿಸಿ ಆತ್ಮಹತ್ಯಾ ಬಾಂಬರ್‌ ಒಬ್ಬ ನಡೆಸಿದ ದಾಳಿಗೆ ಕನಿಷ್ಠ 10 ಮಂದಿ ಬಲಿಯಾಗಿದ್ದಾರೆ.

ಈ ದಾಳಿಯಲ್ಲಿ ಇನ್ನೂ ಐವರು ಗಾಯಗೊಂಡಿದ್ದಾರೆ ಎಂದು ನಂಗಹಾರ್‌ ಪ್ರಾಂತ್ಯದ ಪೊಲೀಸ್ ಮುಖ್ಯಸ್ಥ ಜನರಲ್ ಗುಲಾಂ ಸನಾಯೀ ಸ್ಟಾನೆಕ್‌ಝಾಯಿ ತಿಳಿಸಿದ್ದಾರೆ. ಗವರ್ನರ್ಸ್‌ ಕಂಪೌಂಡ್‌ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಗುಂಪನ್ನು ಗುರಿಯಾಗಿಸಿ ಆತ್ಮಹತ್ಯಾ ಬಾಂಬರ್‌ ದಾಳಿ ನಡೆಸಿದ್ದಾನೆ. ಬಲಿಯಾದ ಜನರ ಗುಂಪು ಅಧ್ಯಕ್ಷ ಅಶ್ರಫ್ ಘನಿ ಅವರನ್ನು ಭೇಟಿ ಮಾಡಲು ಹೋಗುತ್ತಿತ್ತು.

ದಾಳಿಯ ಹೊಣೆಯನ್ನು ಯಾವುದೇ ಗುಂಪು ಹೊತ್ತುಕೊಂಡಿಲ್ಲ. ಆದರೆ ತಾಲಿಬಾನ್ ಮತ್ತು ಇತರ ಇಸ್ಲಾಮಿಕ್ ಉಗ್ರ ಸಂಘಟನೆಗಳು ಈ ಪ್ರಾಂತ್ಯದಲ್ಲಿ ಸಕ್ರಿಯವಾಗಿವೆ.

ಅಫ್ಘಾನಿಸ್ತಾನದಲ್ಲಿ ಅತ್ಯಂತ ಕಡಿಮೆ ಸಂಖ್ಯೆಯಲ್ಲಿರುವ ಸಿಖ್‌ ಮತ್ತು ಹಿಂದೂಗಳು ದಶಕಗಳ ಕಾಲದ ತಾರತಮ್ಯ ಮತ್ತು ವೈರತ್ವದಿಂದ ತೀರಾ ಶೋಚನೀಯ ಸ್ಥಿತಿಯಲ್ಲಿದ್ದಾರೆ. ಪ್ರಸ್ತುತ ಎರಡೂ ಸಮುದಾಯದ ಒಟ್ಟು ಜನಸಂಖ್ಯೆ ಸುಮಾರು 1,000ದಷ್ಟು ಮಾತ್ರ ಇದೆ. ಇಸ್ಲಾಮಿಕ್ ಉಗ್ರ ಸಂಘಟನೆಗಳು ಪದೇ ಪದೇ ಅವರನ್ನು ಗುರಿಯಾಗಿಸಿ ದಾಳಿ ನಡೆಸುತ್ತಿವೆ.

Comments are closed.