ಅಂತರಾಷ್ಟ್ರೀಯ

ಹಿಂದು ದೇವರಾಗಿ ಇಮ್ರಾನ್‌ ಫೋಟೋ : ಪಾಕ್‌ ಸರಕಾರದಿಂದ ತನಿಖೆ

Pinterest LinkedIn Tumblr


ಇಸ್ಲಾಮಾಬಾದ್‌ : ಪಾಕ್‌ ಮಾಜಿ ಕ್ರಿಕೆಟಿಗ ಮತ್ತು ಪಾಕಿಸ್ಥಾನ್‌ ತೆಹರೀಕ್‌ ಎ ಇನ್ಸಾಫ್ (ಪಿಟಿಐ) ಪಕ್ಷದ ಮುಖ್ಯಸ್ಥರಾಗಿರುವ ಇಮ್ರಾನ್‌ ಖಾನ್‌ ಅವರನ್ನು ಹಿಂದೂ ದೇವರಂತೆ ಕಾಣಿಸುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.

ಪಾಕ್‌ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಹಿಂದೂ ಶಾಸಕ ರಮàಶ್‌ ಲಾಲ್‌ ಅವರು ಈ ವಿಷಯವನ್ನು ಈಚೆಗೆ ಎತ್ತಿದ್ದರು. ಪರಿಣಾಮವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಡಲಾಗಿರುವ ಈ ವಿವಾದಾತ್ಮಕ ಫೋಟೋಗಳ ಹಿಂದಿರುವವರನ್ನು ಬಂಧಿಸಿ ಕಾನೂನು ಪ್ರಕಾರ ಶಿಕ್ಷಿಸಲು ದೇಶದ ಒಳಾಡಳಿತ ಸಚಿವಾಲಯಕ್ಕೆ ಸೂಚಿಸಲಾಗಿರುವುದಾಗಿ ತಿಳಿದು ಬಂದಿದೆ.

ಇಮ್ರಾನ್‌ ಖಾನ್‌ ಅವರನ್ನು ಹಿಂದೂ ದೇವರಂತೆ ಕಾಣಿಸುವ ಫೋಟೋಗಳನ್ನು ಬಳಸಿಕೊಂಡು ಮಾಡಲಾಗುತ್ತಿರುವ ದ್ವೇಷಯುಕ್ತ ಭಾಷಣಗಳು ಮತ್ತು ಸಾಮಾಜಿಕ ಮಾಧ್ಯಮಗಳ ಅಭಿಯಾನವನ್ನು ಹಿಂದೂ ಶಾಸಕರು ಪ್ರತಿಭಟಿಸಿದುದನ್ನು ಅನುಸರಿಸಿ ರಾಷ್ಟ್ರೀಯ ಅಸೆಂಬ್ಲಿ ಸ್ಪೀಕರ್‌ ಸರ್ದಾರ್‌ ಅಯಾಜ್‌ ಸಾದಿಕ್‌ ಅವರು ಒಳಾಡಳಿತ ಸಚಿವಾಲಯಕ್ಕೆ ಈ ವಿಷಯದ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಿದರೆಂದು ಪಾಕಿಸ್ಥಾನದ ಡಾನ್‌ ನ್ಯೂಸ್‌ ವರದಿ ಮಾಡಿದೆ.

ಇಮ್ರಾನ್‌ ಖಾನ್‌ ಅವರ ಪಿಟಿಐ ಪಕ್ಷ “ತಾನು ದೇಶದಲ್ಲಿನ ಹಿಂದೂ ಸಮುದಾಯದವರನ್ನು ಬೆಂಬಲಿಸುತ್ತಿದ್ದು ಹಿಂದೂ ವಿರೋಧಿ ಅಲ್ಲ’ ಎಂದು ಹೇಳಿಕೊಂಡಿದೆ. ಪಕ್ಷದ ಉಪಾಧ್ಯಕ್ಷ ಶಾ ಮೆಹಮೂದ್‌ ಕುರೇಶಿ ಅವರು ಬೇರೆ ಯಾವುದೋ ಪಕ್ಷದ ಸಾಮಾಜಿಕ ಮಾಧ್ಯಮ ವಿಭಾಗ ಈ ರೀತಿಯ ಕುಚೋದ್ಯದ ಅಭಿಯಾನ ಕೈಗೊಂಡಿರಬಹುದು’ ಎಂದು ಹೇಳಿದ್ದಾರೆ.

“ಒಂದೊಮ್ಮೆ ನನ್ನ ಪಿಟಿಐ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಈ ಹಿಂದೆ ಪಾಕಿಸ್ಥಾನವನ್ನು ತೊರೆದು ಹೋಗಿರುವ ಹಿಂದುಗಳು ದೇಶಕ್ಕೆ ಮರಳಿ ಬರಬಹುದು’ ಎಂದು ಇಮ್ರಾನ್‌ ಖಾನ್‌ 2014ರಲ್ಲಿ ಹೇಳಿದ್ದರು.

-ಉದಯವಾಣಿ

Comments are closed.