ಅಂತರಾಷ್ಟ್ರೀಯ

ಮಹಾವಂಚಕ ನೀರವ್‌ ಮೋದಿ ನ್ಯೂಯಾರ್ಕ್‌ ಹೋಟೆಲ್‌ನಲ್ಲಿ ಪತ್ತೆ

Pinterest LinkedIn Tumblr


ನ್ಯೂಯಾರ್ಕ್‌: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ 11,400 ಕೋಟಿ ರೂಪಾಯಿ ಪಂಗನಾಮ ಹಾಕಿ ಈ ವರ್ಷ ಜನವರಿ 1ರಂದೇ ಭಾರತ ತೊರೆದಿದ್ದ ಮಹಾ ವಂಚಕ ಚಿನ್ನದ ಆಭರಣಗಳ ಉದ್ಯಮಿ ನೀರವ್‌ ಮೋದಿ ಇದೀಗ ನ್ಯೂಯಾರ್ಕ್‌(ಅಮೆರಿಕ)ನ ಐಷಾರಾಮಿ ಹೋಟೆಲೊಂದರಲ್ಲಿ ವಾಸ್ತವ್ಯ ಹೂಡಿದ್ದಾರೆ ಎಂದು ಗೊತ್ತಾಗಿದೆ. ನೀರವ್‌ ಜತೆ ಇನ್ನೂ ಮೂವರು ವಿದೇಶಕ್ಕೆ ತೆರಳಿದ್ದು, ಈ ಸಂಬಂಧ ಫೆಬ್ರವರಿ ಮೊದಲ ವಾರದಲ್ಲೇ ಅವರಿಗೆ ಲುಕ್‌ಔಟ್‌ ನೋಟಿಸ್‌ ಜಾರಿಗೊಳಿಸಲಾಗಿತ್ತು.

ನೀರವ್‌ ಮೋದಿ ನ್ಯೂಯಾರ್ಕ್‌ನ ಮ್ಯಾನ್‌ಹಟ್ಟನ್‌ನಲ್ಲಿ ‘ಜೆ.ಡಬ್ಲ್ಯು. ಮಾರಿಯಟ್ಸ್‌ ಎಸೆಕ್ಸ್‌ ಹೌಸ್‌’ನ ಕೊಠಡಿಯೊಂದರಲ್ಲಿ ವಾಸವಿರುವುದಾಗಿ ಮೂಲಗಳು ತಿಳಿಸಿವೆ. ಈ ಹೋಟೆಲ್‌ ನೀರವ್‌ ಅವರ ಸುಸಜ್ಜಿತ ‘ಮ್ಯಾಡಿಸನ್‌ ಅವೆನ್ಯೂ’ ಜ್ಯುವೆಲ್ಲರಿ ಸ್ಟೋರ್‌ಗೆ ಅತಿ ಸನಿಹದಲ್ಲೇ ಇದೆ ಎನ್ನಲಾಗಿದೆ.

”ಆತ ಯಾರೇ ಆಗಿರಲಿ, ಎಷ್ಟೇ ಪ್ರತಿಷ್ಠಿತ ವ್ಯಕ್ತಿಯಾಗಿರಲಿ, ಆತನನ್ನು ಸುಮ್ಮನೆ ಬಿಡುವುದಿಲ್ಲ, ಆತನ ಪಾಸ್‌ಪೋರ್ಟ್‌ಅನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು,” ಎಂದು ಗುರುವಾರ ಕೇಂದ್ರ ಸರಕಾರ ಎಚ್ಚರಿಕೆ ನೀಡಿದ್ದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು.

ನೀರವ್‌ ಕುಟುಂಬ ಎಸೆಕ್ಸ್‌ ಹೌಸ್‌ನ 36ನೇ ಮಹಡಿಯ ಕೋಣೆಯಲ್ಲಿ ವಾಸ್ತವ್ಯ ಹೂಡಿರುವುದು ಗುರುವಾರವೇ ಪತ್ತೆಯಾಗಿತ್ತು. 46 ವರ್ಷದ ನೀರವ್‌ ಮೋದಿಯನ್ನು ತಾವು ಗುರುತಿಸಿರುವುದಾಗಿ ಹೋಟೆಲ್‌ ಸಿಬ್ಬಂದಿ ಹೇಳಿಕೊಂಡಿದ್ದಾರೆ. ನೀರವ್‌ ಪತ್ನಿ ಅಮಿತ್‌ ಮೋದಿ ಗುರುವಾರ ಪದೇಪದೇ ಹೋಟೆಲ್‌ಗೆ ಹೋಗಿ ಬರುವುದನ್ನು ಹೋಟೆಲ್‌ ಸಿಬ್ಬಂದಿ ವೀಕ್ಷಿಸಿದ್ದಾರೆ.

ನಿರವ್‌ ಮೋದಿ ಚಿಕ್ಕಪ್ಪನ ಕಂಪನಿ ವಿರುದ್ಧ ಸಿಬಿಐ ಎಫ್‌ಐಆರ್‌

ಹೊಸದಿಲ್ಲಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌(ಪಿಎನ್‌ಬಿ)ನ ದೂರಿನ ಅನ್ವಯ ಕೋಟ್ಯಧೀಶ ಚಿನ್ನದ ಆಭರಣಗಳ ವ್ಯಾಪಾರಿ ನೀರವ್‌ ಮೋದಿಯ ಸಂಬಂಧಿಯೂ ಆದ ಬಿಸ್ನೆಸ್‌ ಪಾಟ್ರ್ನರ್‌ ಮೆಹುಲ್‌ ಚೋಕ್ಸಿ ಒಡೆತನದ ‘ಗೀತಾಂಜಲಿ ಗ್ರೂಪ್‌’ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಹೊಸ ಎಫ್‌ಐಆರ್‌ ದಾಖಲಿಸಿಕೊಂಡಿದೆ. ಜತೆಗೆ ಕಂಪನಿಯ ಮೂಲಗಳನ್ನು ಪತ್ತೆಹಚ್ಚಲು ಈಗಾಗಲೇ ಇಂಟರ್‌ಪೋಲ್‌ ಜತೆ ಸಂಪರ್ಕ ಸಾಧಿಸಿದ್ದೂ ಆಗಿದೆ.

ಫೆಬ್ರವರಿ 13ರಂದು ಪಿಎನ್‌ಬಿ ಸಲ್ಲಿಸಿದ ದೂರಿನ ಆಧಾರದಲ್ಲಿ ಹೊಸ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ. ಅದರ ಪ್ರಕಾರ, ಪಿಎನ್‌ಬಿಗೆ ಆದ ನಷ್ಟ 4,886 ಕೋಟಿ ರೂಪಾಯಿಗಳಿಗೂ ಅಧಿಕ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

ಸಿಬಿಐ ಅಧಿಕಾರಿಗಳು ಶುಕ್ರವಾರ ಮುಂಬಯಿ, ಪುಣೆ, ಸೂರತ್‌, ಜೈಪುರ, ಹೈದರಾಬಾದ್‌ ಹಾಗೂ ಕೊಯಮತ್ತೂರಿನ 20 ವಿವಿಧ ಸ್ಥಳಗಳಲ್ಲಿರುವ ಗೀತಾಂಜಲಿ ಗ್ರೂಪ್‌ ಕಚೇರಿಗಳ ಶೋಧ ನಡೆಸಿದರು.

”ಆರೋಪಿ ಸ್ಥಾನದಲ್ಲಿರುವ ಗೀತಾಂಜಲಿ ಗ್ರೂಪ್‌ನ ಮೆಹುಲ್‌ ಚೋಕ್ಸಿ ಮತ್ತು ಇತರ ನಿರ್ದೇಶಕರು ನಿವಾಸಗಳು, ಗ್ರೂಪ್‌ನ ಇತರ ಕಾರ್ಖಾನೆಗಳು, ಕಚೇರಿಗಳನ್ನೊಳಗೊಂಡ ಕಾರ್ಖಾನೆಗಳು, ಕಾರ್ಖಾನೆಗಳು ಹಾಗೂ ನಿವಾಸಗಳಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ,” ಎಂದು ಸಿಬಿಐ ವಕ್ತಾರರು ಶುಕ್ರವಾರ ದಿಲ್ಲಿಯಲ್ಲಿ ತಿಳಿಸಿದರು.

ಖಾಸಗಿ ವ್ಯಕ್ತಿಗಳ ಜತೆ ಪಿತೂರಿ ನಡೆಸಿದ ಪಿಎನ್‌ಬಿ ಅಧಿಕಾರಿಗಳು, ಆರೋಪಕ್ಕೊಳಗಾಗಿರುವ ಕಂಪನಿಗಳ ಪೂರೈಕೆದಾರರಿಗೆ ಹಣ ಬಿಡುಗಡೆ ಮಾಡಲು ಅಥವಾ ಆರೋಪಿತ ಕಂಪನಿಗಳ ಸಾಲಸೋಲಗಳನ್ನು ಚುಕ್ತಾ ಮಾಡಲು ಅನುಕೂಲವಾಗುವಂತೆ ಭಾರತೀಯ ಬ್ಯಾಂಕುಗಳ ವಿದೇಶಿ ಶಾಖೆಗಳಿಗೆ ಅನಧಿಕೃತ ಸಾಲ ಖಾತರಿ ಪತ್ರಗಳು ಹಾಗೂ ವಿದೇಶಿ ಸಾಲ ಪತ್ರಗಳನ್ನು ಕಳುಹಿಸಿದ್ದಾರೆ ಎನ್ನಲಾಗಿದೆ.

ಇಂಟರ್‌ಪೋಲ್‌ ಸಂಪರ್ಕಿಸಿದ ಸಿಬಿಐ

ಆರೋಪಿಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಸಿಬಿಐಯು ಡಿಫ್ಯೂಷನ್‌ ನೋಟಿಸ್‌ ರವಾನಿಸುವಂತೆ ಕೋರಲು ಇಂಟರ್‌ಪೋಲ್‌ಅನ್ನು ಸಂಪರ್ಕಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೀರವ್‌ ಮೋದಿ ಮತ್ತು ಆತನ ಕುಟುಂಬ ತಲೆ ಮರೆಸಿಕೊಂಡಿರುವ ಸ್ಥಳವನ್ನು ಅತೀ ಶೀಘ್ರದಲ್ಲೇ ಪತ್ತೆ ಹಚ್ಚುವ ಭರವಸೆಯಲ್ಲಿ ಸಿಬಿಐ ಇದೆ ಎಂದು ಅವರು ಹೇಳಿದ್ದಾರೆ.

ಮೋಸದ ವ್ಯವಹಾರದ ಮೂಲಕ ಪಿಎನ್‌ಬಿಗೆ 11,400 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಮೊತ್ತ ವಂಚಿಸಿರುವ ನೀರವ್‌ ಮೋದಿ ಇನ್ನೇನು ವಂಚನೆ ಬೆಳಕಿಗೆ ಬರುವುದು ಖಚಿತ ಎನ್ನುವ ಸುಳಿವು ಸಿಗುತ್ತಲೇ ದೇಶ ತೊರೆದಿದ್ದಾರೆ ಎನ್ನಲಾಗಿದೆ.

ಭಾರತೀಯ ಪಾಸ್‌ಪೋರ್ಟ್‌ ಹೊಂದಿರುವ 46 ವರ್ಷ ಪ್ರಾಯದ ನೀರವ್‌ ಜನವರಿ 1ರಂದು ದೇಶ ತೊರೆದಿದ್ದರು. ಬೆಲ್ಜಿಯಂ ಪೌರತ್ವ ಹೊಂದಿರುವ ಆತನ ಸಹೋದರ ನಿಶಾಲ್‌ ಕೂಡ ಅಂದೇ ವಿದೇಶಕ್ಕೆ ಹಾರಿದ್ದಾರೆ. ಅವರಿಬ್ಬರೂ ಜತೆಯಾಗಿ ಹೋದರೇ ಅಥವಾ ಪ್ರತ್ಯೇಕವಾಗಿ ಹೋದರೇ ಎಂಬುದು ಇನ್ನಷ್ಟೇ ಪತ್ತೆಯಾಗಬೇಕಿದೆ.

ಅಮೆರಿಕ ಪೌರತ್ವ ಹೊಂದಿರುವ ನೀರವ್‌ ಮೋದಿ ಪತ್ನಿ ಅಮಿ, ಜನವರಿ 6ರಂದು ಹಾಗೂ ನೀರವ್‌ ಅವರ ಬಿಸ್ನೆಸ್‌ ಪಾಟ್ರ್ನರ್‌ ಮೆಹುಲ್‌ ಚೋಕ್ಸಿ ಜನವರಿ 4ರಂದು ದೇಶ ತೊರೆದಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ಒದಗಿಸಿದದ್ದಾರೆ.

ಮುಂದುವರಿದ ಇ.ಡಿ ದಾಳಿ, ಒಂದು ವಾರದೊಳಗೆ ಹಾಜರಾಗುವಂತೆ ಸಮನ್ಸ್‌ ಜಾರಿ

ಮುಂಬಯಿ: ಪಿಎನ್‌ಬಿಯಲ್ಲಿ ನಡೆದ 11,400 ಕೋಟಿ ರೂಪಾಯಿಗಳ ಅವ್ಯವಹಾರಕ್ಕೆ ಸಂಬಂಧಪಟ್ಟಂತೆ ನೀರವ್‌ ಮೋದಿ ಹಾಗೂ ಅವರ ಬಿಸ್ನೆಸ್‌ ಪಾಟ್ರ್ನರ್‌ ಮೆಹುಲ್‌ ಚೋಕ್ಸಿ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ಶುಕ್ರವಾರ ಸಮನ್ಸ್‌ ಜಾರಿ ಮಾಡಿದೆ. ಏತನ್ಮಧ್ಯೆ, ಆರೋಪಿಗಳಿಗೆ ಸೇರಿದ ಆಸ್ತಿಪಾಸ್ತಿಗಳನ್ನು ಪತ್ತೆ ಹಚ್ಚುವ ತಮ್ಮ ಕಾಯಕವನ್ನು ಸಿಬಿಐ ಅಧಿಕಾರಿಗಳು ಶುಕ್ರವಾರವೂ ಮುಂದುವರಿಸಿದರು.

ಹಣ ದುರ್ಬಳಕೆ ತಡೆ ಕಾಯ್ದೆ ಅನ್ವಯ ನೀರವ್‌ ಮತ್ತು ಚೋಕ್ಸಿಗೆ ಸಮನ್ಸ್‌ ಜಾರಿಗೊಳಿಸಲಾಗಿದ್ದು, ಒಂದು ವಾರದೊಳಗೆ ಇ.ಡಿ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ. ಆರೋಪಿಗಳು ಈಗಾಗಲೇ ದೇಶ ತೊರೆದಿರುವುದರಿಂದ ನೋಟಿಸ್‌ಗಳನ್ನು ಅವರ ಒಡೆತನದ ಕಂಪನಿಗಳ ನಿರ್ದೇಶಕರಿಗೆ ಹಸ್ತಾಂತರಿಸಲಾಗಿದೆ.

ಪಿಎನ್‌ಬಿಯಿಂದ ಮತ್ತೆ 8 ಅಧಿಕಾರಿಗಳ ಅಮಾನತು

ಹೊಸದಿಲ್ಲಿ: ದೇಶದ ಅತೀ ದೊಡ್ಡ ಬ್ಯಾಂಕಿಂಗ್‌ ಹಗರಣದ ಕೇಂದ್ರ ಬಿಂದುವೆನಿಸಿಕೊಂಡಿರುವ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಶುಕ್ರವಾರ ಜನರಲ್‌ ಮ್ಯಾನೇಜರ್‌ ಸೇರಿದಂತೆ ಮತ್ತೆ 8 ಅಧಿಕಾರಿಗಳನ್ನು ಅಮಾನತುಗೊಳಿಸಿದೆ. ಇದರೊಂದಿಗೆ ಅಮಾನುತುಗೊಂಡ ಬ್ಯಾಂಕ್‌ ಸಿಬ್ಬಂದಿ ಸಂಖ್ಯೆ 18ಕ್ಕೇರಿದೆ. ಬಹುಕೋಟಿ ವಂಚನೆ ಪ್ರಕರಣದಲ್ಲಿ ಶಾಮೀಲಾದ ಶಂಕೆಯ ಮೇಲೆ ಇವರನ್ನು ಅಮಾನತುಗೊಳಿಸಲಾಗಿದೆ ಎಂದು ಸರಕಾರದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಏತನ್ಮಧ್ಯೆ, ಇತರ ಬ್ಯಾಂಕುಗಳಿಗೆ ನೀಡಬೇಕಿರುವ ಬಾಕಿ ಹಣವನ್ನು ಮಾರ್ಚ್‌ 31ರೊಳಗೆ ಪಿಎನ್‌ಬಿ ಸಂದಾಯ ಮಾಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಾಸ್‌ಪೋರ್ಟ್‌ ಅಮಾನತುಗೊಂಡರೂ ನೀರವ್‌ಗಿಲ್ಲ ಚಿಂತೆ!?

ನೀರವ್‌ ಮೋದಿ ಮತ್ತು ಅವರ ಚಿಕ್ಕಪ್ಪ ಮೆಹುಲ್‌ ಚೋಕ್ಸಿಯ ಪಾಸ್‌ಪೋರ್ಟ್‌ಗಳನ್ನು ವಿದೇಶಾಂಗ ಇಲಾಖೆ ನಾಲ್ಕು ವಾರಗಳ ಮಟ್ಟಿಗೆ ಅಮಾನತುಗೊಳಿಸಿದೆ. ಇದಕ್ಕೆ ಒಂದು ವಾರದೊಳಗೆ ಸ್ಪಂದಿಸದಿದ್ದರೆ ಅವರ ಪಾಸ್‌ಪೋರ್ಟ್‌ಗಳನ್ನು ಕಾಯಂ ಆಗಿ ವಜಾಗೊಳಿಸುವುದಾಗಿ ಎಚ್ಚರಿಕೆ ಬೇರೆ ನೀಡಲಾಗಿದೆ. ಆದರೆ, ನೀರವ್‌ ಈಗಾಗಲೇ ಇತರ ದೇಶಗಳ ಪೌರತ್ವ ಅಥವಾ ಕಾಯಂ ವಾಸದ ಹಕ್ಕು ಪಡೆದುಕೊಂಡಿರುವ ಸಾಧ್ಯತೆಗಳಿದ್ದು, ಈ ಬೆಳವಣಿಗೆ ಅವರ ಮೇಲೆ ಹೆಚ್ಚೇನೂ ಪರಿಣಾಮ ಬೀರದು ಎನ್ನಲಾಗುತ್ತಿದೆ. ವಿದೇಶ ಪರ್ಯಟನೆ ವೇಳೆ ನೀರವ್‌ ಬೆಲ್ಜಿಯಂ ಪಾಸ್‌ಪೋರ್ಟ್‌ ಬಳಸುತ್ತಿದ್ದುದನ್ನು ತಾವು ನೋಡಿರುವುದಾಗಿ ವಜ್ರೋದ್ಯಮ ಮೂಲಗಳು ಸುಳಿವು ನೀಡಿವೆ.

‘ಯುಪಿಎ ಯುಗದಲ್ಲಿ ಆರಂಭ; ಎನ್‌ಡಿಎ ಅವಧಿಯಲ್ಲಿ ಅಂತ್ಯ’

ಯುಪಿಎ ಅವಧಿಯಲ್ಲಿ ಆರಂಭಗೊಂಡಿದ್ದ ಈ ಹಗರಣ ಇದೀಗ ಎನ್‌ಡಿಎ ಅವಧಿಯಲ್ಲಿ 10-50 ಪಟ್ಟು ದೊಡ್ಡದಾಯಿತು ಎಂದು ಅಲಹಾಬಾದ್‌ ಬ್ಯಾಂಕ್‌ನ ಮಾಜಿ ನಿರ್ದೇಶಕ ದಿನೇಶ್‌ ದುಬೆ ಶುಕ್ರವಾರ ಹೇಳಿದ್ದಾರೆ. ಮೆಹುಲ್‌ ಚೋಕ್ಸಿ ಅವರ ಒಡೆತನದ ‘ಗೀತಾಂಜಲಿ ಜೆಮ್ಸ್‌’ಗೆ ಸಾಲ ಮಂಜೂರು ಮಾಡುವಂತೆ ಒತ್ತಡ ಬಂದಿದ್ದರಿಂದ ತಾನು ನಿರ್ದೇಶಕ ಹುದ್ದೆಗೆ ರಾಜೀನಾಮೆ ನೀಡಬೇಕಾಗಿ ಬಂತು ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ. ”2013ರಲ್ಲಿ ಗೀತಾಂಜಲಿ ಜೆಮ್ಸ್‌ ವಿರುದ್ಧ ನಾನು ಸರಕಾರ ಹಾಗೂ ಆರ್‌ಬಿಐಗೆ ‘ಅಸಮ್ಮತಿ ಸೂಚನೆ’ ರವಾನಿಸಿದ್ದೆ. ಆದರೆ ಪ್ರಯೋಜನವಾಗಲಿಲ್ಲ. ಸಾಲ ಮಂಜೂರು ಮಾಡುವಂತೆ ಆದೇಶ ನೀಡಲಾಯಿತು. ಜತೆಗೆ ಒತ್ತಡ ಹೇರಲಾಯಿತು. ಹೀಗಾಗಿ ರಾಜೀನಾಮೆ ನೀಡಿದೆ,” ಎಂದು ದುಬೆ ಹೇಳಿದ್ದಾರೆ.

Comments are closed.