ಅಂತರಾಷ್ಟ್ರೀಯ

ಇಸ್ರೇಲ್ ಪ್ರಧಾನಿ ನೇತನ್ಯಾಹು ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲಿಸಲು ಇಸ್ರೇಲ್ ಪೊಲೀಸ್ ಶಿಫಾರಸ್ಸು!

Pinterest LinkedIn Tumblr

ಟೆಲ್ ಅವಿವ್: ಪ್ರಮುಖ ಬೆಳವಣಿಗೆಯಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲಿಸಲು ಇಸ್ರೇಲ್ ಪೊಲೀಸರು ಶಿಫಾರಸ್ಸು ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಇಸ್ರೇಲ್ ಪ್ರಧಾನಿ ನೇತನ್ಯಾಹು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದು, ಕಿಕ್ ಬ್ಯಾಕ್ ಪಡೆದಿದ್ದಾರೆ. ಹೀಗಾಗಿ ಅವರ ವಿರುದ್ಧ ನಂಬಿಕೆ ದ್ರೋಹ ಮತ್ತು ಭ್ರಷ್ಟಾಚಾರ ಪ್ರಕರಣ ದಾಖಲಿಸುವಂತೆ ಇಸ್ರೇಲಿ ಅಟಾರ್ನಿ ಜನರಲ್ ಅವಿಚೈ ಮ್ಯಾಂಡೆಲ್ಬ್ಲಿಟ್ ಅವರಿಗೆ ಶಿಫಾರಸ್ಸು ಮಾಡಲಾಗಿದೆ ಎಂದು ತಿಳಿದುಬಂದಿದೆ. ಪ್ರಧಾನಿ ನೇತನ್ಯಾಹು ವಿರುದ್ಧದ 2 ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ತಮ್ಮ ಬಳಿ ಪುರಾವೆಗಳಿದ್ದು, ಅವರ ವಿರುದ್ದ ಪ್ರಕರಣ ದಾಖಲಿಸಬಹುದು ಎಂದು ಇಸ್ರೇಲ್ ಪೊಲೀಸರು ಶಿಫಾರಸ್ಸಿನಲ್ಲಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಪ್ರಸ್ತುತ ಇಸ್ರೇಲಿ ಪೊಲೀಸರು ಅಟಾರ್ನಿ ಜನರಲ್ ಅವಿಚೈ ಮ್ಯಾಂಡೆಲ್ಬ್ಲಿಟ್ ಅವರಿಗೆ ತಮಗೆ ದೊರೆತಿರುವ ಸಾಕ್ಷ್ಯಾಧಾರಗಳ ಪ್ರತಿಯನ್ನೂ ಕೂಡ ನೀಡಿದ್ದು, ಅಟಾರ್ನಿ ಜನರಲ್ ಅವರು ಸಾಕ್ಷ್ಯಾಧಾರಾಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಈ ಪ್ರಕ್ರಿಯೆ ಸುಮಾರು ಒಂದು ತಿಂಗಳ ಕಾಲ ಸಮಯ ಹಿಡಿಯಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾನು ಭ್ರಷ್ಟಾಚಾರ ನಡೆಸಿಲ್ಲ ಎಂದ ನೇತನ್ಯಾಹು
ಇನ್ನು ಅತ್ತ ಇಸ್ರೇಲ್ ಪೊಲೀಸರ ಶಿಫಾರಸ್ಸು ಮಾಧ್ಯಮಗಳಲ್ಲಿ ಬಹಿರಂಗವಾಗುತ್ತಿದ್ದಂತೆಯೇ ಇತ್ತ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿರುವ ಇಸ್ರೇಲ್ ಪ್ರಧಾನಿ ನೇತನ್ಯಾಹು ತಾವು ಯಾವುದೇ ಭ್ರಷ್ಟಾಚಾರದಲ್ಲಿ ತೊಡಗಿಲ್ಲ. ತಮ್ಮ ವಿರುದ್ಧ ಎಲ್ಲ ಆರೋಪಗಳು ಸುಳ್ಳು ಎಂದು ಹೇಳಿದ್ದಾರೆ. ಅಲ್ಲದೆ ಮುಂದಿನ ಚುನಾವಣೆಯಲ್ಲಿ ನನ್ನ ಪ್ರಮಾಣಿಕತೆ ಏನು ಎಂಬುದನ್ನು ದೇಶದ ಜನತೆ ತೋರಿಸಲಿದ್ದಾರೆ. ಪ್ರಮಾಣಿಕವಾಗಿದ್ದರೆ ಮತ್ತೊಬ್ಬರಿಗೆ ಹೆದರುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.

ಇಸ್ರೇಲ್ ಪ್ರಧಾನಿ ನೇತನ್ಯಾಹು ಅವರ ಪತ್ನಿ ಸಾರಾ ಅವರ ಬಳಿ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳು, ದುಬಾರಿ ಸಿಗಾರ್ ಗಳು ಮತ್ತು ಬೆಲೆ ಬಾಳುವ ಉಡುಗೊರೆಗಳು ಪತ್ತೆಯಾಗಿದ್ದು, ಇದೇ ಇಸ್ರೇಲ್ ಪ್ರಧಾನಿ ವಿರುದ್ಧ ಭ್ರಷ್ಟಾಚಾರ ಆರೋಪ ಬರಲು ಕಾರಣ ಎಂದು ಹೇಳಲಾಗುತ್ತಿದೆ.

Comments are closed.