ಅಂತರಾಷ್ಟ್ರೀಯ

ಟ್ರಂಪ್ ಸರ್ಕಾರದ ಇಬ್ಬಗೆ ನೀತಿ ಮತ್ತೆ ಬಹಿರಂಗ: ಪಾಕಿಸ್ತಾನಕ್ಕೆ 336 ಮಿಲಿಯನ್ ಡಾಲರ್ ನೆರವಿಗೆ ಬಜೆಟ್ ಪ್ರಸ್ತಾಪ

Pinterest LinkedIn Tumblr

ವಾಷಿಂಗ್ಟನ್: ಇತ್ತೀಚೆಗಷ್ಟೇ ಪಾಕಿಸ್ತಾನಕ್ಕೆ ನೀಡಲಾಗುತ್ತಿದ್ದ ಆರ್ಥಿಕ ನೆರವನ್ನು ಹಿಂಪಡೆಯುವ ಮಾತನಾಡುತ್ತಿದ್ದ ಅಮೆರಿಕ ಇದೀಗ ಮತ್ತೆ ಉಲ್ಟಾ ಹೊಡೆದಿದ್ದು, ಟ್ರಂಪ್ ಸರ್ಕಾರ ಪಾಕಿಸ್ತಾನಕ್ಕೆ ಸುಮಾರು 336 ಮಿಲಿಯನ್ ಡಾಲರ್ ಆರ್ಥಿಕ ನೆರವು ನೀಡುವ ಬಜೆಟ್ ಪ್ರಸ್ತಾವನೆಗೆ ಮುಂದಾಗಿದೆ.

ಮೂಲಗಳ ಪ್ರಕಾರ ಅಮೆರಿಕದ 2018-19ನೇ ಸಾಲಿನಲ್ಲಿ 4 ಟ್ರಿಲಿಯನ್ ಮೊತ್ತದ ಬಜೆಟ್ ಮಂಡನೆ ಮಾಡಲಾಗುತ್ತಿದ್ದು, ಈ ಪೈಕಿ ಪಾಕಿಸ್ತಾನಕ್ಕೆ 336 ಮಿಲಿಯನ್ ಡಾಲರ್ ಆರ್ಥಿಕ ನೆರವು ನೀಡುವ ಪ್ರಸ್ತಾಪಕ್ಕೆ ಮುಂದಾಗಿದೆ. ಈ ಪೈಕಿ ಪಾಕಿಸ್ತಾನದ ನಾಗರಿಕ ನೆರವುಗಳಿಗಾಗಿ ಅಮೆರಿಕ 256 ಮಿಲಿಯನ್ ಡಾಲರ್ ಮೀಸಲಿಟ್ಟಿದ್ದು, ಸುಮಾರು 80 ಮಿಲಿಯನ್ ಡಾಲರ್ ಹಣವನ್ನು ಪಾಕಿಸ್ತಾನಿ ಸೇನೆಗಾಗಿ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಪಾಕಿಸ್ತಾನದಲ್ಲಿ ರಾಜಕೀಯ ಸ್ಥಿರತೆ ಮತ್ತು ಆರ್ಥಿಕ ಉತ್ತೇಜನಕ್ಕಾಗಿ ಮತ್ತು ಪಾಕಿಸ್ತಾನದಲ್ಲಿ ಅಮೆರಿಕ ವಾಣಿಜ್ಯ ಉತ್ತೇಜನಕ್ಕಾಗಿ ಈ ಆರ್ಥಿಕ ನೆರವು ನೀಡಲಾಗುತ್ತಿದೆ ಎಂದು ಹೇಳಲಾಗುತ್ತಿದೆಯಾದರೂ ಅಮರಿಕದ ಈ ನಡೆ ಇದೀಗ ಹಲವು ದೇಶಗಳ ಹುಬ್ಬೇರುವಂತೆ ಮಾಡಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವೈಟ್ ಹೌಸ್, ಪಾಕಿಸ್ತಾನದಲ್ಲಿರುವ ಉಗ್ರರ ಮಟ್ಟಹಾಕಲು ಸರ್ಕಾರಕ್ಕೆ ಅಮೆರಿಕದ ನೆರವು ಅತ್ಯಗತ್ಯವಾಗಿದ್ದು, ಈ ಕಾರಣಕ್ಕಾಗಿ ಪಾಕಿಸ್ತಾನಕ್ಕೆ 80 ಮಿಲಿಯನ್ ಡಾಲರ್ ಹಣದ ನೆರವಿನ ಪ್ರಸ್ತಾಪ ಮಂಡಿಸಲಾಗಿದೆ. ಈ ಮೂಲಕ ಪಾಕಿಸ್ತಾನ ಉಗ್ರ ನಿಗ್ರಹ ಕಾರ್ಯಾಚರಣೆ ತೀವ್ರವಾಗಬಹುದು. ದಕ್ಷಿಣ ಏಷ್ಯಾ ನೀತಿಗೆ ಅನುಗುಣವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಮೆರಿಕ ವಿಶ್ವಾಸ ವ್ಯಕ್ತಪಡಿಸಿದೆ.

ಈಗಾಗಲೇ ಅಮೆರಿಕದ ಸೈನಿಕರು ಆಫ್ಘಾನಿಸ್ತಾನಿ ಸೈನಿಕರೊಂದಿಗೆ ಸೇರಿ ಪಾಕ್-ಆಫ್ಘನ್ ಗಡಿಯಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆಯಾದರೂ, ಪಾಕಿಸ್ತಾನಿ ಗಡಿಯಲ್ಲಿರುವ ಉಗ್ರರ ವಿರುದ್ಧ ಯಾವುದೇ ರೀತಿಯ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪಾಕಿಸ್ತಾನಿ ಸೈನಿಕರೇ ಇವರ ವಿರುದ್ಧ ಕಾರ್ಯಾಚರಣೆ ನಡೆಸಬೇಕು ಎಂದು ಅಮೆರಿಕ ಈ ಹಿಂದೆ ಆಗ್ರಹಿಸಿತ್ತು.

Comments are closed.