ಅಂತರಾಷ್ಟ್ರೀಯ

ವಿಜಯ ಮಲ್ಯಗೆ ಮತ್ತೆ ಹಿನ್ನಡೆ; ₹ 585 ಕೋಟಿ ಪಾವತಿಗೆ ಬ್ರಿಟನ್ ಹೈಕೋರ್ಟ್‌ ಸೂಚನೆ

Pinterest LinkedIn Tumblr

ಲಂಡನ್/ಸಿಂಗಪುರ: ಉದ್ಯಮಿ ವಿಜಯ್ ಮಲ್ಯ ಅವರು ಮತ್ತೊಂದು ಕಾನೂನು ಹೋರಾಟದಲ್ಲಿ ಸೋಲನುಭವಿಸಿದ್ದಾರೆ. ಸಿಂಗಪುರ ಮೂಲದ ಬಿಒಸಿ ವಿಮಾನ ಗುತ್ತಿಗೆ ಸಂಸ್ಥೆಗೆ ಸುಮಾರು ₹585 ಕೋಟಿ (9 ಕೋಟಿ ಡಾಲರ್) ಪಾವತಿಸಬೇಕು ಎಂದು ಬ್ರಿಟನ್ ಹೈಕೋರ್ಟ್ ಹೇಳಿದೆ.

2014ರಲ್ಲಿ ಬಿಒಸಿ ಸಂಸ್ಥೆಯಿಂದ ಕಿಂಗ್‌ಫಿಷರ್ ಏರ್‌ಲೈನ್ಸ್ ಸಂಸ್ಥೆಯು ವಿಮಾನಗಳನ್ನು ಗುತ್ತಿಗೆ ಪಡೆದಿದ್ದ ಪ್ರಕರಣ ಇದಾಗಿದೆ.

ಪ್ರತಿವಾದಿಗಳು ತಮ್ಮ ವಾದ ಸಮರ್ಥಿಸಿಕೊಳ್ಳಲು ವಿಫಲರಾಗಿದ್ದಾರೆ ಎಂದು ನ್ಯಾಯಾಧೀಶ ಪಿಂಕೆನ್ ಅವರು ಫೆಬ್ರುವರಿ 5ರಂದು ಹೊರಡಿಸಿರುವ ಆದೇಶದಲ್ಲಿ ಉಲ್ಲೇಖಿಸಿದ್ದಾರೆ. ಕಿಂಗ್‌ಫಿಷರ್ ಏರ್‌ಲೈನ್ಸ್ ಹಾಗೂ ಯುನೈಟೆಡ್ ಬ್ರಿವರೀಸ್ (ಹೋಲ್ಡಿಂಗ್ಸ್) ಈ ಪ್ರಕರಣದ ಪ್ರತಿವಾದಿಗಳು.

ವಿಮಾನ ಗುತ್ತಿಗೆ ಸಂಸ್ಥೆ ಬಿಒಸಿ ಹಾಗೂ ಕಿಂಗ್‌ಫಿಷರ್ ನಡುವೆ ವಿಮಾನ ಗುತ್ತಿಗೆ ಒಪ್ಪಂದವಾಗಿತ್ತು. ನಾಲ್ಕರ ಪೈಕಿ ಮೂರು ವಿಮಾನಗಳನ್ನು ಪೂರೈಸಲಾಗಿತ್ತು. ಮೂರು ವಿಮಾನಗಳ ಬಾಕಿ ಮೊತ್ತ ಪಾವತಿಸದ ಕಾರಣ ನಾಲ್ಕನೇ ವಿಮಾನ ಹಸ್ತಾಂತರಕ್ಕೆ ತಡೆಹಿಡಿಯಲಾಗಿತ್ತು. ಭದ್ರಾತಾ ಠೇವಣಿಯಾಗಿ ಇಟ್ಟಿರುವ ಹಣವು ಬಾಕಿ ಪಾವತಿ ಮಾಡುವಷ್ಟು ಇರಲಿಲ್ಲ ಎಂದು ಸಂಸ್ಥೆ ಆರೋಪಿಸಿತ್ತು. ಬಾಕಿ ಹಣ, ಬಡ್ಡಿ ಹಾಗೂ ಕಾನೂನು ಹೋರಾಟ ಸೇರಿ ಒಟ್ಟು ₹585 ಕೋಟಿ ಪಾವತಿಗೆ ಕೋರ್ಟ್ ನಿರ್ದೇಶನ ನೀಡಿದೆ.

Comments are closed.