ರಾಷ್ಟ್ರೀಯ

ಹಗರಣ: ಕೇರಳ ಪಿಣರಾಯಿ ಸರಕಾರದ 3ನೇ ವಿಕೆಟ್‌ ಪತನ

Pinterest LinkedIn Tumblr


ತಿರುವನಂತಪುರಂ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸರಕಾರದ ವಿರುದ್ಧವೇ ತಿರುಗಿಬಿದ್ದು ಹೈಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡ ಸಾರಿಗೆ ಸಚಿವ ಥಾಮಸ್‌ ಚಾಂಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರೊಂದಿಗೆ ಪಿಣರಾಯಿ ಸರಕಾರದ ಮೂರನೇ ಸಚಿವರು ನಿರ್ಗಮನವಾದಂತಾಗಿದೆ.

ಕೇರಳದ ಅಳಪ್ಪುಳದ ಲೇಕ್ ಪ್ಯಾಲೇಸ್ ರೆಸಾರ್ಟ್ ಅಕ್ರಮವಾಗಿ ನಿರ್ಮಿಸಿಕೊಂಡು ನೈಸರ್ಗಿಕ ಹಾನಿಯುಂಟು ಮಾಡಿದ ಆರೋಪವನ್ನು ಎದುರಿಸುತ್ತಿದ್ದ ಚಾಂಡಿ, ತಮ್ಮ ಸರಕಾರದ ವಿರುದ್ಧವೇ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ಚಾಂಡಿ ಅಕ್ರಮದ ವಿರುದ್ಧ ಅಳಪ್ಪುಳ ಜಿಲ್ಲಾ ಕಲೆಕ್ಟರ್‌ ವರದಿ ಸಲ್ಲಿಸಿದ್ದರು

ಇದರ ವಿಚಾರಣೆ ನಡೆಸಿದ್ದ ನ್ಯಾಯಾಲಯಕ್ಕೆ ಚಾಂಡಿ, ಈ ಪ್ರಕರಣದಲ್ಲಿ ಜಿಲ್ಲಾಧಿಕಾರಿ ಸಂವಿಧಾನ ವಿರೋಧಿಯಾಗಿ ವರ್ತಿಸುತ್ತಿರುವುದಾಗಿ ಹೇಳಿದ್ದರು. ಆದರೆ ಕೇರಳ ಹೈಕೋರ್ಟ್ ಮಂಗಳವಾರ ಚಾಂಡಿ ಅವರ ಅರ್ಜಿಯನ್ನು ವಜಾಗೊಳಿಸಿ, ತರಾಟೆಗೆ ತೆಗೆದುಕೊಂಡಿತ್ತು. ಜತೆಯಲ್ಲಿ ಜಿಲ್ಲಾಧಿಕಾರಿಯವರ ವರದಿಯ ಅಂಶವನ್ನು ಎತ್ತಿಹಿಡಿದಿತ್ತು.

ಈ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ಪಿಣರಾಯಿ ಅವರ ಜತೆ ಚರ್ಚೆ ನಡೆಸಿದ ಬಳಿಕ ಸಾರಿಗೆ ಸಚಿವ ಸ್ಥಾನಕ್ಕೆ ಥಾಮಸ್ ಚಾಂಡಿ ರಾಜಿನಾಮೆ ನೀಡಿದ್ದಾರೆ.

ರಾಜೀನಾಮೆ ನೀಡಿದ ಬಳಿಕ ಮಾತನಾಡಿದ ಚಾಂಡಿ, ‘ನಾನು ಈ ಕುರಿತು ಸುಪ್ರೀಂ ಕೋರ್ಟ್‌ ಮೆಟ್ಟಿಲೇರುತ್ತೇನೆ, ಹೈಕೋರ್ಟ್‌ ತೀರ್ಪು ಸುಳ್ಳೆಂದು ನಿರೂಪಿಸುತ್ತೇನೆ. ಮತ್ತೆ ಇದೇ ಸ್ಥಾನಕ್ಕೆ ಮರಳುತ್ತೇನೆ. ಈ ಕುರಿತು ಈಗಾಗಲೇ ಮುಖ್ಯಮಂತ್ರಿ ಬಳಿ ಮಾತಾಡಿದ್ದೇನೆ, ಅವರೂ ಭರವಸೆ ನೀಡಿದ್ದಾರೆ’ ಎಂದು ಹೇಳಿದ್ದಾರೆ.

ಪಿಣರಾಯಿ ಸರ್ಕಾರದ ಸಚಿವರಾಗಿದ್ದ ಜಯರಾಜನ್ ಸಂಬಂಧಿಕರಿಗೆ ಸರ್ಕಾರಿ ಹುದ್ದೆ ನೀಡಿದ ಆರೋಪದ ಮೇಲೆ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ನಂತರ ಲೈಂಗಿಕ ಹಗರಣದಲ್ಲಿ ಎನ್‌ಸಿಪಿಯ ಎಕೆ ಶಶೀಂದ್ರನ್ ರಾಜಿನಾಮೆ ನೀಡಿದ್ದರು.

Comments are closed.