ಅಂತರಾಷ್ಟ್ರೀಯ

ನೇಪಾಳ: ಹೆದ್ದಾರಿಯಿಂದ ನದಿಗೆ ಉರುಳಿ ಬಿದ್ದ ಬಸ್; 19 ಮಂದಿ ಸಾವು

Pinterest LinkedIn Tumblr

ಕಠ್ಮಂಡು: ಪ್ರಯಾಣಿಕರಿಂದ ತುಂಬಿತುಳುಕುತ್ತಿದ್ದ ಬಸ್ಸೊಂದು ನದಿಗೆ ಉರುಳಿ 19 ಜನ ಮೃತಪಟ್ಟಿರುವ ಘಟನೆ ನೇಪಾಳದ ಕೇಂದ್ರ ಭಾಗದಲ್ಲಿ ಶನಿವಾರ ನಡೆದಿದೆ.

ಕಠ್ಮಂಡುವಿನ ಪಶ್ಚಿಮದಲ್ಲಿ 80 ಕಿಮೀ ದೂರದಲ್ಲಿರುವ ಧಡಿಂಗ ಜಿಲ್ಲೆಯಲ್ಲಿ ಬೆಳಗಿನ ಜಾವ ಈ ಘಟನೆ ನಡೆದಿದೆ. ಹೆದ್ದಾರಿಯಲ್ಲಿ ವೇಗವಾಗಿ ಸಾಗುವಾಗ ನಿಯಂತ್ರಣ ತಪ್ಪಿದ ಬಸ್ಸು ತ್ರಿಶೂಲಿ ನದಿಗೆ ಉರುಳಿದೆ ಎನ್ನಲಾಗಿದೆ.

ಕನಿಷ್ಟ 16 ಜನ ಗಾಯಗೊಂಡಿದ್ದು, ಅವರನ್ನು ನದಿಯಿಂದ ಹೊರತೆಗೆದು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಧಿಕಾರಿಗಳು ಅಪಘಾತಕ್ಕೆ ಕಾರಣವೇನು ಎಂಬುದನ್ನು ಇದುವರೆಗೆ ಖಚಿತಪಡಿಸಿಲ್ಲ. ಆದರೆ ಪ್ರಯಾಣಿಕರ ಪ್ರಕಾರ ಚಾಲಕ ಮದ್ಯಪಾನ ಮಾಡಿದ್ದ ಎಂಬ ಮಾಹಿತಿಯಿದೆ.

ಅಪಘಾತ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್​ ಅಧಿಕಾರಿಗಳ ಪ್ರಕಾರ ಅಪಘಾತದಲ್ಲಿ ಚಾಲಕ ಕೂಡ ಗಾಯಗೊಂಡಿದ್ದಾನೆ. ಆದರೆ ನದಿಯಲ್ಲಿ ಉರುಳಿದ್ದ ಬಸ್​ನಿಂದ ಹೊರಬಂದು ಆತ ಪರಾರಿಯಾಗಿದ್ದಾನೆ.

ನದಿಯಲ್ಲಿ ನೀರಿನ ಸೆಳೆತ ರಭಸವಾಗಿದ್ದರೂ ಸೇನಾ ಯೋಧರು ಬೋಟುಗಳಲ್ಲಿ ನದಿಯಲ್ಲಿ ಮುಳುಗಿರುವವರಿಗಾಗಿ ಶೋಧ ನಡೆಸಿದ್ದಾರೆ.

ಹಿಮಾಲಯದ ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದೆ. ಕಳಪೆ ಹಾಗೂ ಇಕ್ಕಟ್ಟಾದ ರಸ್ತೆಗಳಿರುವ ಕಾರಣ ಈ ರೀತಿಯ ಅಪಘಾತಗಳು ಇಲ್ಲಿ ನಡೆಯುವುದು ಸಾಮಾನ್ಯವಾಗಿದೆ.

Comments are closed.