ನ್ಯೂಯಾರ್ಕ್: ಅಮೆರಿಕದಲ್ಲಿ ಇತ್ತೀಚೆಗೆ ನಡೆದ ವಿಜ್ಞಾನ ಸ್ಪರ್ಧೆಯಲ್ಲಿ ಭಾರತೀಯ ಮೂಲದ ಮೂವರು ವಿದ್ಯಾರ್ಥಿಗಳು ಗೆಲುವು ಸಾಧಿಸಿದ್ದು, ಒಟ್ಟು 67 ಲಕ್ಷ ರೂ. (ಒಂದು ಲಕ್ಷ ಅಮೆರಿಕನ್ ಡಾಲರ್) ಮೊತ್ತದ ವಿದ್ಯಾರ್ಥಿ ವೇತನ ತಮ್ಮದಾಗಿಸಿ ಕೊಂಡಿದ್ದಾರೆ. ನ್ಯೂಯಾರ್ಕ್ನಲ್ಲಿ ನಡೆದ ಸಿಮನ್ಸ್ 17ನೇ ವಾರ್ಷಿಕ ವಿಜ್ಞಾನ ಸ್ಪರ್ಧೆಯಲ್ಲಿ ಅವಳಿ ಸಹೋದರಿಯರಾದ ಆದ್ಯಾ ಹಾಗೂ ಶ್ರೀಯಾ ಪ್ರಸ್ತುತ ಪಡಿಸಿದ ಪ್ರಾತ್ಯಕ್ಷಿಕೆ ಮೊದಲ ಸ್ಥಾನ ಪಡೆದುಕೊಂಡಿದೆ. ಮಿದುಳು ಸ್ಕ್ಯಾನ್ ಮೂಲಕ ಛಿದ್ರ ಮನಃಸ್ಥಿತಿಯನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡುವ ಬಗ್ಗೆ ಅವರು ಯೋಜನೆ ಸಿದ್ಧಪಡಿಸಿದ್ದರು. ಆದ್ಯಾ ಹಾಗೂ ಶ್ರೀಯಾ ಟೆಕ್ಸಾಸ್ ನಿವಾಸಿಗಳಾಗಿದ್ದು, 11ನ್ ಗ್ರೇಡ್ ಅಭ್ಯಸಿಸುತ್ತಿದ್ದಾರೆ. ಬ್ಯಾಟರಿಗಳ ಜೈವಿಕ ವಿಘಟನೆಗೆ ಸಂಬಂಧಿಸಿದಂತೆ ವಿನೀತ್ ಇಡುಪುಗುಂಟಿ ನೀಡಿದ್ದ ಪ್ರಾತ್ಯಕ್ಷಿಕೆ ವೈಯಕ್ತಿಕ ವಿಭಾಗದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ದೇಹದ ಒಳಭಾಗಗಳ ಅಧ್ಯಯನಕ್ಕಾಗಿ ಬಳಸುವ ಉಪಕರಣಗಳಲ್ಲಿ ಜೈವಿಕ ವಿಘಟನಾ ಬ್ಯಾಟರಿಗಳನ್ನು ಅಳವಡಿಸಬಹುದಾಗಿದೆ. ಈ ವಿದ್ಯಾರ್ಥಿಗಳನ್ನು ಅಭಿನಂದಿಸಿರುವ ಸಿಮನ್ಸ್ ಸಂಸ್ಥೆ ಸಿಇಒ ಡೇವಿಡ್, ಈ ಸಂಶೋಧನೆಗಳಿಂದ ಕೋಟ್ಯಂತರ ಜನರ ಜೀವನವೇ ಬದಲಾಗುವ ಸಾಧ್ಯತೆ ಇದೆ ಎಂದಿದ್ದಾರೆ.