ಅಸ್ಟಾನಾ: ಮೊಬೈಲ್ ಫೋನ್ ಚಾರ್ಜರ್ ನಿಂದ ವಿದ್ಯುತ್ ಶಾಕ್ ಹೊಡೆದು ಪುಟ್ಟ ಮಗು ಸಾವನಪ್ಪಿರೋ ಘಟನೆ ಖಜಕಿಸ್ತಾನದಲ್ಲಿ ನಡೆದಿದೆ.
ಖಜಕಿಸ್ತಾನದ ಅಕ್‍ಟೌ ಎಂಬಲ್ಲಿ ಈ ಘಟನೆ ನಡೆದಿದ್ದು, ಶಾಕ್ ಹೊಡೆದ ಪರಿಣಾಮ ಮಗುವಿನ ಕೈ ಮೇಲೆ ಸುಟ್ಟ ಗಾಯವಾಗಿರುವ ಫೋಟೋ ಈಗ ವೈರಲ್ ಆಗಿದೆ.
ಈ ಘಟನೆ ನಡೆದಾಗ ಮಗು ತಾಯಿಯ ಪಕ್ಕದಲ್ಲೇ ಆಟವಾಡ್ತಿತ್ತು. ಮೊಬೈಲ್ ಚಾರ್ಜ್‍ಗೆ ಹಾಕಲಾಗಿತ್ತು ಹಾಗೂ ಮಗುವಿನ ತಾಯಿ ನಿದ್ದೆ ಮಾಡುತ್ತಿದ್ದರು. ಮೊಬೈಲ್ ಚಾರ್ಜರನ್ನ ಮಗು ಕಚ್ಚಿದ್ದು ಕೂಡಲೇ ಎಲೆಕ್ಟ್ರಿಕ್ ಶಾಕ್ ಹೊಡೆದಿದೆ.
ಎಷ್ಟು ಹೊತ್ತಾದ್ರೂ ಮಗು ಸದ್ದು ಮಾಡದೇ ಇದ್ದಿದ್ದರಿಂದ ಎಚ್ಚರಗೊಂಡು ತಾಯಿ ನೋಡಿದಾಗ ಮಗು ಉಸಿರಾಡುತ್ತಿರಲಿಲ್ಲ ಹಾಗೂ ಅದರ ಎದೆಬಡಿತ ನಿಂತಿರುವುದು ಗೊತ್ತಾಗಿದೆ. ಗಾಬರಿಯಿಂದ ಆಕೆ ಕೂಡಲೇ ಮಗುವನ್ನ ಬೆಡ್‍ಶೀಟ್‍ನಲ್ಲಿ ಸುತ್ತಿಕೊಂಡು ಆಸ್ಪತ್ರೆಗೆ ಓಡಿದ್ದಾರೆ. ಆದರೆ ಅಷ್ಟರಲ್ಲಾಗಲೇ ಮಗು ವಿದ್ಯುತ್ ಶಾಕ್‍ನಿಂದ ಸಾವನ್ನಪ್ಪಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.
ಮಗುವಿನ ಕೈ ಮತ್ತು ತೋಳಿನ ಮೇಲೆ ಸುಟ್ಟ ಗಾಯಗಳಾಗಿದ್ದು ಆಸ್ಪತ್ರೆ ಸಿಬ್ಬಂದಿ ಇದರ ಫೋಟೋವನ್ನ ಹಂಚಿಕೊಂಡಿದ್ದಾರೆ. ಮೊಬೈಲ್ ಫೋನ್‍ಗಳನ್ನ ಚಾರ್ಜ್‍ಗೆ ಹಾಕಿದಾಗ ಮಕ್ಕಳು ಅದರ ಬಳಿ ಸುಳಿಯದಂತೆ ನೋಡಿಕೊಳ್ಬೇಕು ಅಂತ ಎಚ್ಚರಿಸಿದ್ದಾರೆ.