ಬೆಂಗಳೂರು: ರಾಜಧಾನಿ ದೆಹಲಿ ನಂತರ ಉದ್ಯಾನ ನಗರಿ ಎಂದೇ ಖ್ಯಾತಿ ಪಡೆದಿದ್ದ ಬೆಂಗಳೂರಿನಲ್ಲೂ ವಾಯುಮಾಲಿನ್ಯ ಹೆಚ್ಚಾಗುತ್ತಿದೆ. ಮಹಾನಗರಿಯಲ್ಲಿ ಕೆಲವು ಗಂಟೆಗಳ ಕಾಲ ರಸ್ತೆಯಲ್ಲಿ ಕಳೆದರೆ ಸಾಕು ಮುಖದ ಮೇಲೆ ಕಪ್ಪು ಕಣಗಳ ಒಂದು ಪದನ ಕೂತಿರುತ್ತದೆ ಎಂಬುದು ಎಲ್ಲರಿಗೂ ಅನುಭವಕ್ಕೆ ಬಂದಿರುವ ವಿಚಾರ.
ದೆಹಲಿಯಲ್ಲಿ ವಾಯುಮಾಲಿನ್ಯ ಮಿತಿಮೀರಿರುವ ಬೆನ್ನಲ್ಲೇ ಬೆಂಗಳೂರಿನಲ್ಲಿಯೂ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ. ವಾಹನ ನೋಂದಣಿಗೆ ಕಡಿವಾಣ, 15 ವರ್ಷಕ್ಕಿಂತ ಹಳೆಯದಾದ ವಾಹನಗಳನ್ನು ನಿಷೇಧಿಸುವುದು, ಸಿಎನ್’ಜಿ, ವಿದ್ಯುತ್ ಚಾಲಿನ ವಾಹನಗಳ ಬಳಕೆಗೆ ಆದ್ಯತೆ ನೀಡುವ ಕುರಿತಂತೆ ಚಿಂತನೆಗಳನ್ನು ನಡೆಸಿದೆ.
ನಗರದಲ್ಲಿ ವಾಹನಗಳ ಸಂಖ್ಯೆಗಳು ಹೆಚ್ಚಾಗುತ್ತಿದ್ದು, ಕಳೆದ 10 ವರ್ಷಗಳಲ್ಲಿ ಬೆಂಗಳೂರಿನಲ್ಲಿ ವಾಯುಮಾಲಿನ್ಯ ಪ್ರಮಾಣ ಮಿತಿಮೀರುತ್ತಿದೆ. 2016 ಮೇ ತಿಂಗಳ ವರೆಗಿನ ದತ್ತಾಂಶಗಳ ಪ್ರಕಾರ ನಗರದಲ್ಲಿ 60 ಲಕ್ಷಕ್ಕೂ ಹೆಚ್ಚು ವಾಹನಗಳು ಓಡಾಡುತ್ತಿರುವುದಾಗಿ ತಿಳಿದುಬಂದಿದೆ.
ವಾಯುಮಾಲಿನ್ಯದಿಂದಾಗಿ ಪ್ರತಿನಿತ್ಯ ಜನರು ಸಮಸ್ಯೆಯನ್ನು ಎದುರಿಸುತ್ತಲೇ ಇದ್ದಾರೆ. ವಾಯುಮಾಲಿನ್ಯದ ಮಧ್ಯೆ ಆರೋಗ್ಯ ಕಾಪಾಡಿಕೊಳ್ಳುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ವಾಯುಮಾಲಿನ್ಯ ಎಂದಾಕ್ಷಣ ಸಾಕಷ್ಟು ಮಂದಿ ಮೊದಲು ಚಿಂತಿಸುವುದು ಮುಖದ ತ್ವಚೆಗೆ ಬಗ್ಗೆ. ಆದರೆ, ಬಹುತೇಕ ಮಂದಿ ದೇಹದ ಪ್ರಮುಖ ಭಾಗ ಕಣ್ಣಿನ ಆರೋಗ್ಯದ ಬಗ್ಗೆ ಚಿಂತಿಸುವುದೇ ಇಲ್ಲ. ದೇಹದ ಇತರೆ ಭಾಗಗಳಿಗಿಂತ ಕಣ್ಣು ಅತ್ಯಂತ ಪ್ರಮುಖ ಭಾಗವಾಗಿದ್ದು, ಕಣ್ಣುಗಳ ಆರೋಗ್ಯ ಕೂಡ ಪ್ರಮುಖವಾಗಿದೆ.
ವಾಯುಮಾಲಿನ್ಯದ ಮಧ್ಯೆ ಕಣ್ಣುಗಳ ರಕ್ಷಣೆಯನ್ನು ಹೇಗೆ ಮಾಡಬೇಕು ಎಂಬುದರ ಕುರಿತಂತೆ ಕೆಲ ಸಲಹೆಗಳು ಈ ಕೆಳಕಂಡಿಂತಿವೆ…
ಹೊರಗಡೆಯಿಂದ ಮನೆಗೆ ಬರುತ್ತಿದ್ದಂತೆಯೇ ತಣ್ಣಗಿನ ನೀರಿನಿಂದ ಕಣ್ಣನ್ನು ತೊಳೆಯಬೇಕು.
ಹೊರಗೆ ಹೋಗುವಾಗ ಸಾಧ್ಯವಾದಷ್ಟು ಸನ್ ಗ್ಲಾಸ್ ಗಳನ್ನು ಬಳಕೆ ಮಾಡಿ. ಇದು ಧೂಳಿನಿಂದ ನಿಮ್ಮ ಕಣ್ಣುಗಳನ್ನು ರಕ್ಷಿಸುತ್ತದೆ.
ಕಣ್ಣುಗಳ ಒಳಗೆ ಧೂಳು ಬಂದಾಗ ಉಜ್ಜಬೇಡಿ.
ಹೊರಗಿನಿಂದ ಮನೆಗೆ ಬಂದಾಗ ಸೌತೆಕಾಯಿಯ ಕತ್ತರಿಸಿ ಒಂದೊಂದು ಪೀಸ್ ನ್ನು ಕಣ್ಣುಗಳ ಮೇಲಿಟ್ಟು 10-15 ನಿಮಿಷಗಳ ವಿಶ್ರಾಂತಿ ಪಡೆಯಿರಿ. ಇದು ಕಣ್ಣುಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ.
ತಜ್ಞರ ವೈದ್ಯರ ಸಲಹೆಗಳನ್ನು ಪಡೆದು ಐಡ್ರಾಪ್ಸ್ ಗಳನ್ನು ಬಳಕೆ ಮಾಡಿ.
ಕಣ್ಣುಗಳ ರಕ್ಷಣೆಗೆ ರೋಸ್ ವಾಟರ್ ನ್ನು ಬಳಕೆ ಮಾಡಬಹುದು.
ಆರೋಗ್ಯಯುತ ಆಹಾರಗಳನ್ನು ಸೇವಿಸುವುದು ಪ್ರಮುಖವಾಗಿದ್ದು, ಕ್ಯಾರೆಟ್, ಹಸಿರು ತರಕಾರಿಗಳು, ಸೊಪ್ಪು, ಬಾದಾಮಿ, ಮೀನು, ಸ್ಟ್ರಾಬೆರ್ರಿ ಇತ್ಯಾದಿಗಳನ್ನು ಸೇವಿಸಬೇಕು.