ಕಠ್ಮಂಡು: ಯೋಗ ಗುರು ಬಾಬಾ ರಾಮದೇವ್ ಅವರ ಪತಂಜಲಿ ಆಯುರ್ವೇದ್ ಗ್ರೂಪ್ ನೇಪಾಳದಲ್ಲಿ ₹150 ಕೋಟಿ ಹೂಡಿಕೆ ಮಾಡಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ನೇಪಾಳದಲ್ಲಿ ಹೂಡಿಕೆ ಮಾಡಬೇಕಾದರೆ ವಿದೇಶಿ ಹೂಡಿಕೆ ಮತ್ತು ತಂತ್ರಜ್ಞಾನ ವರ್ಗಾವಣೆ ಕಾಯ್ದೆ ಪ್ರಕಾರ ಹೊರ ದೇಶದ ಹೂಡಿಕೆದಾರರು ಹೂಡಿಕೆ ಮಾಡಬೇಕಾದರೆ ನೇಪಾಳದ ಹೂಡಿಕೆದಾರರ ಮಂಡಳಿ ಅಥವಾ ಕೈಗಾರಿಕಾ ಇಲಾಖೆಯ ಅನುಮತಿ ಪಡೆಯಬೇಕು.
ಆದರೆ ಬಾಬಾ ರಾಮದೇವ್ ಅವರು ಹೂಡಿಕೆ ಮಾಡುವಾಗ ಯಾವುದೇ ಅನುಮತಿ ಪಡೆದಿಲ್ಲ ಎಂದು ನೇಪಾಳದ ಕಾಂತೀಪುರ್ ದೈನಿಕ ವರದಿ ಮಾಡಿದೆ.
ಆದಾಗ್ಯೂ, ಬಾಬಾ ಅವರು ಈ ಆರೋಪಗಳನ್ನು ನಿರಾಕರಿಸಿದ್ದಾರೆ. ತಮ್ಮ ಕಂಪನಿ ನೇಪಾಳದಲ್ಲಿ ಚಟುವಟಿಕೆ ನಡೆಸುವಾಗ ಅಲ್ಲಿನ ಯಾವುದೇ ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದಿದ್ದಾರೆ. ಪತಂಜಲಿ ಆಯುರ್ವೇದ ಲಿಮಿಟೆಡ್ ಹೂಡಿಕೆ ಮಾಡಬೇಕಾದರೆ ನೇಪಾಳದಲ್ಲಿನ ಎಲ್ಲ ಕಾನೂನು ಪ್ರಕ್ರಿಯೆಗಳನ್ನು ಪೂರೈಸಿಯೇ ಮುಂದಿನ ಕಾರ್ಯ ಮಾಡಲಿದೆ ಎಂದು ರಾಮದೇವ್ ಅವರು ಹೇಳಿಕೆ ನೀಡಿದ್ದಾರೆ.
ಬಾಬಾ ರಾಮದೇವ್ ಪ್ರಕಾರ, ನೇಪಾಳದಲ್ಲಿರುವ ಪತಂಜಲಿ ಯೋಗಪೀಠವು ಯಾವುದೇ ಹೂಡಿಕೆಯನ್ನು ನೇಪಾಳದಲ್ಲಿ ಮಾಡಿಲ್ಲ.
ನೇಪಾಳದಲ್ಲಿರುವ ಪತಂಜಲಿ ಯೋಗಪೀಠದ ಎಲ್ಲ ಹೂಡಿಕೆಯು ನೇಪಾಳದ ಉದ್ಯಮಿ ಉಪೇಂದ್ರ ಮಹತೋ ಮತ್ತು ಆತನ ಪತ್ನಿ ಸಮಾಂತ ಅವರದ್ದಾಗಿದೆ. ಮುಂದಿನ ದಿನಗಳಲ್ಲಿ ಒಂದು ವೇಳೆ ನಮ್ಮ ಕಂಪನಿ ಅಲ್ಲಿ ಹೂಡಿಕೆ ಮಾಡುವುದಾದರೆ ಸಂಬಂಧಪಟ್ಟ ಇಲಾಖೆಯ ಅನುಮತಿ ಪಡೆದ ನಂತರವೇ ಹೂಡಿಕೆ ಮಾಡುತ್ತೇವೆ ಎಂದು ಬಾಬಾ ರಾಮದೇವ್ ತಮ್ಮ ಹೇಳಿಕೆ ನೀಡಿದ್ದಾರೆ.
ಭ್ರಷ್ಟಚಾರದ ವಿರುದ್ಧ ಹೋರಾಡುವುದಕ್ಕಾಗಿಯೇ ನಾನು ನನ್ನ ಜೀವನವನ್ನು ಮುಡಿಪಾಗಿಟ್ಟಿದ್ದೇನೆ. ಹೀಗಿರುವಾಗ ನಾನು ನೇಪಾಳದಲ್ಲಿ ಅಕ್ರಮ ಹೂಡಿಕೆ ಮಾಡಲು ಸಾಧ್ಯವೇ? ಎಂದು ರಾಮದೇವ್ ಪ್ರಶ್ನಿಸಿದ್ದಾರೆ.