ಇಸ್ಲಾಮಾಬಾದ್: ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತೀಯ ಯೋಧರು ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ದಾಳಿ ನಡೆಸಿ ಏಳು ಪಾಕಿಸ್ತಾನ ಸೈನಿಕರನ್ನು ಹತ್ಯೆ ಮಾಡಿದ್ದು ಇದಕ್ಕೆ ಪ್ರತೀಕಾರ ತೀರಿಸಲು ದೇಶವು ಸಂಪೂರ್ಣ ಸಾಮರ್ಥ್ಯ ಹೊಂದಿದೆ ಎಂದು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಹೇಳಿದ್ದಾರೆ.
ಕಳೆದ ರಾತ್ರಿ ಎಲ್ಒಸಿಯ ಬಿಂಬೇರ್ ನಲ್ಲಿ ಪಾಕಿಸ್ತಾನದ ಏಳು ಸೈನಿಕರು ಹತರಾಗಿದ್ದಾರೆ. ಇದಕ್ಕೆ ಭಾರತದ ಅಪ್ರಚೋದಿತ ದಾಳಿಯೇ ಕಾರಣ. ಇದಕ್ಕೆ ಪ್ರತಿಯಾಗಿ ಭಾರತದ ಗಡಿಠಾಣೆಗಳ ಮೇಲೆ ಪರಿಣಾಮಕಾರಿ ದಾಳಿ ನಡೆಸಲಾಗುವುದು. ನಮ್ಮ ನೆಲದ ರಕ್ಷಣೆಗಾಗಿ ನಾವು ಸಂಪೂರ್ಣ ಶಕ್ತರು ಎಂದು ಹೇಳಿದ್ದಾರೆ.
ಭಾರತ ಕಾಶ್ಮೀರದಲ್ಲಿ ಉದ್ಭವಿಸಿರುವ ಮಾನವಹಕ್ಕು ಬಿಕ್ಕಟ್ಟು ವಿಚಾರದಲ್ಲಿ ವಿಶ್ವದ ಗಮನವನ್ನು ಬೇರೆಡೆ ಸೆಳೆಯಲು ಭಾರತ ಇಂಥ ಉದ್ವಿಗ್ನಕಾರಿ ಕೃತ್ಯಗಳನ್ನು ಎಸಗುತ್ತಿದೆ ಎಂದು ನವಾಜ್ ಷರೀಫ್ ಆರೋಪಿಸಿದ್ದಾರೆ.
ಕಳೆದ ವಾರ ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಭಾರತೀಯ ಸೇನೆ ಗಡಿ ನಿಯಂತ್ರಣ ರೇಖೆ ಪ್ರದೇಶದಲ್ಲಿ ಗುಂಡಿನ ದಾಳಿ ನಡೆಸಿದ್ದು ಇದರಲ್ಲಿ ಕನಿಷ್ಠ 25 ನಾಗರಿಕರು ಬಲಿಯಾಗಿದ್ದಾರೆ ಎಂದು ಹೇಳಿತ್ತು.